70 ಕೋಟಿ ರೂ. ನಷ್ಟ: ಟೀಮ್ ಇಂಡಿಯಾ ಕಣಕ್ಕಿಳಿದರೆ 500 ಕೋಟಿ ರೂ. ಲಾಭ!
India vs New Zealand: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಸರಣಿ ಅಕ್ಟೋಬರ್ 22 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು 12 ಪಂದ್ಯಗಳನ್ನಾಡಲಾಗುತ್ತದೆ. ಮೊದಲಿಗೆ 5 ಮ್ಯಾಚ್ಗಳ ಟಿ20 ಸರಣಿ ನಡೆದರೆ, ಆ ಬಳಿಕ ಏಕದಿನ ಸರಣಿ ಜರುಗಲಿದೆ. ಇದಾದ ಬಳಿಕ 2 ಪಂದ್ಯಗಳ ಟೆಸ್ಟ್ ಸರಣಿ ಜರುಗಲಿದೆ.

ಜಾಗತಿಕ ಕ್ರಿಕೆಟ್ ಲೋಕದಲ್ಲಿ ಬಿಸಿಸಿಐ (BCCI) ಮತ್ತು ಟೀಮ್ ಇಂಡಿಯಾದ ಶಕ್ತಿ ಎಂತಹುದ್ದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸದ್ಯ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯನ್ನು (NZC) ನಷ್ಟದಿಂದ ಪಾರು ಮಾಡಲು ಭಾರತೀಯ ಕ್ರಿಕೆಟ್ ತಂಡ ಈಗ ರಕ್ಷಣೆಗೆ ನಿಂತಿದೆ. ಹೌದು, ಭಾರಿ ನಷ್ಟದಲ್ಲಿ ಮುಳುಗಿರುವ ಕಿವೀಸ್ ಮಂಡಳಿಗೆ ಆಸರೆಯಾಗಲು ಟೀಮ್ ಇಂಡಿಯಾ ಮುಂಬರುವ ದಿನಗಳಲ್ಲಿ ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಬರೋಬ್ಬರಿ 12 ಪಂದ್ಯಗಳ ಸುದೀರ್ಘ ಸರಣಿಯನ್ನು ಆಡಲಿದೆ.!
70 ಕೋಟಿ ರೂ. ನಷ್ಟ!
ಇತ್ತೀಚಿನ ವರದಿಗಳ ಪ್ರಕಾರ, ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯು ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 28 ಮಿಲಿಯನ್ ಯುಎಸ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಅಂದಾಜು 70 ಕೋಟಿ ರೂಪಾಯಿಗೂ ಹೆಚ್ಚು) ನಿವ್ವಳ ನಷ್ಟವನ್ನು ಅನುಭವಿಸಿದೆ.
ಪ್ರಸಾರ ಹಕ್ಕುಗಳ ಕುಸಿತ, ಪ್ರಾಯೋಜಕತ್ವದ ಕೊರತೆ ಮತ್ತು ಕೋವಿಡ್ ನಂತರದ ಆರ್ಥಿಕ ಏರುಪೇರುಗಳು ಕಿವೀಸ್ ಕ್ರಿಕೆಟ್ ಅನ್ನು ಈ ಮಟ್ಡಕ್ಕೆ ತಂದು ನಿಲ್ಲಿಸಿದೆ. ಈ ಭಾರಿ ನಷ್ಟದಿಂದಾಗಿ ಅಲ್ಲಿನ ದೇಶೀಯ ಕ್ರಿಕೆಟ್ ಹಾಗೂ ಆಟಗಾರರ ಒಪ್ಪಂದಗಳ ಮೇಲೂ ಕರಾಳ ಛಾಯೆ ಆವರಿಸಿತ್ತು.
‘ರಕ್ಷಕ’ನಾದ ಬಿಸಿಸಿಐ:
ವಿಶ್ವ ಕ್ರಿಕೆಟ್‌ನಲ್ಲಿ ಭಾರತ ತಂಡ ಎಲ್ಲೇ ಪ್ರವಾಸ ಕೈಗೊಂಡರೂ ಅಲ್ಲಿನ ಸ್ಥಳೀಯ ಕ್ರಿಕೆಟ್ ಮಂಡಳಿಗೆ ಕೋಟಿ ಕೋಟಿ ರೂಪಾಯಿ ಆದಾಯ ಹರಿದು ಬರುತ್ತದೆ. ಭಾರತದ ಪಂದ್ಯಗಳಿಗೆ ಇರುವ ಭಾರಿ ವೀಕ್ಷಕ ಬಳಗ ಮತ್ತು ಜಾಗತಿಕ ಪ್ರಾಯೋಜಕರಿಂದಾಗಿ ಬ್ರಾಡ್‌ಕಾಸ್ಟಿಂಗ್ ಹಕ್ಕುಗಳು ದುಬಾರಿ ಮೊತ್ತಕ್ಕೆ ಮಾರಾಟವಾಗುತ್ತವೆ. ಇದೇ ಸೂತ್ರವನ್ನು ಬಳಸಿ ತನ್ನ ನಷ್ಟವನ್ನು ಸರಿದೂಗಿಸಿಕೊಳ್ಳಲು ನ್ಯೂಝಿಲೆಂಡ್ ಕ್ರಿಕೆಟ್ ಭಾರತ ತಂಡವನ್ನು ಆಹ್ವಾನಿಸಿದೆ. ಕಿವೀಸ್ ಮಂಡಳಿಯ ಮನವಿಗೆ ಸ್ಪಂದಿಸಿರುವ ಬಿಸಿಸಿಐ, 2026ರ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಸುದೀರ್ಘ ಸರಣಿ ಆಡಲು ಒಪ್ಪಿಗೆ ಸೂಚಿಸಿದೆ.
12 ಪಂದ್ಯಗಳ ಹೈವೋಲ್ಟೇಜ್ ಸರಣಿ:
ಈ ಐತಿಹಾಸಿಕ ಪ್ರವಾಸದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಒಟ್ಟು 12 ಪಂದ್ಯಗಳನ್ನು ಆಡಲಿವೆ. ಇದರಲ್ಲಿ ತಲಾ 5 ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಗಳು ಒಳಗೊಂಡಿವೆ.
ಭಾರತ vs ನ್ಯೂಝಿಲೆಂಡ್ ತಾತ್ಕಾಲಿಕ ವೇಳಾಪಟ್ಟಿ:
- ಟಿ20 ಸರಣಿ (5 ಪಂದ್ಯಗಳು):
- 1ನೇ ಟಿ20: ಅಕ್ಟೋಬರ್ 22, ಕ್ರೈಸ್ಟ್‌ಚರ್ಚ್
- 2ನೇ ಟಿ20: ಅಕ್ಟೋಬರ್ 24, ಕ್ರೈಸ್ಟ್‌ಚರ್ಚ್
- 3ನೇ ಟಿ20: ಅಕ್ಟೋಬರ್ 27, ವೆಲ್ಲಿಂಗ್ಟನ್
- 4ನೇ ಟಿ20: ಅಕ್ಟೋಬರ್ 30, ಆಕ್ಲೆಂಡ್
- 5ನೇ ಟಿ20: ನವೆಂಬರ್ 1, ಹ್ಯಾಮಿಲ್ಟನ್
- ಏಕದಿನ ಸರಣಿ (5 ಪಂದ್ಯಗಳು):
- 1ನೇ ಏಕದಿನ: ನವೆಂಬರ್ 4, ಆಕ್ಲೆಂಡ್
- 2ನೇ ಏಕದಿನ: ನವೆಂಬರ್ 7, ವೆಲ್ಲಿಂಗ್ಟನ್
- 3ನೇ ಏಕದಿನ: ನವೆಂಬರ್ 10, ಹ್ಯಾಮಿಲ್ಟನ್
- 4ನೇ ಏಕದಿನ: ನವೆಂಬರ್ 13, ಮೌಂಟ್ ಮೌಂಗನುಯಿ
- 5ನೇ ಏಕದಿನ: ನವೆಂಬರ್ 15, ಮೌಂಟ್ ಮೌಂಗನುಯಿ
- ಟೆಸ್ಟ್ ಸರಣಿ (2 ಪಂದ್ಯಗಳು):
- 1ನೇ ಟೆಸ್ಟ್ ಪಂದ್ಯ: ನವೆಂಬರ್ 19 ರಿಂದ 23, ವೆಲ್ಲಿಂಗ್ಟನ್
- 2ನೇ ಟೆಸ್ಟ್ ಪಂದ್ಯ: ನವೆಂಬರ್ 27 ರಿಂದ ಡಿಸೆಂಬರ್ 01, ಕ್ರೈಸ್ಟ್‌ಚರ್ಚ್.
ನ್ಯೂಝಿಲೆಂಡ್ಗೆ ಲಾಭವಾಗುವುದು ಹೇಗೆ?
ಟೀಮ್ ಇಂಡಿಯಾ ನ್ಯೂಝಿಲೆಂಡ್ ನೆಲದಲ್ಲಿ ಕಾಲೂರಿದ ತಕ್ಷಣವೇ ಅಲ್ಲಿನ ಟಿವಿ ಪ್ರಸಾರ ಹಕ್ಕುಗಳ ಮೌಲ್ಯ ರಾಕೆಟ್ ವೇಗದಲ್ಲಿ ಹೆಚ್ಚಾಗಲಿದೆ. ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಅವರಂತಹ ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಸರಣಿಗೆ ಜಾಹೀರಾತುದಾರರು ಕೋಟಿ ಕೋಟಿ ಹಣ ಹೂಡಲಿದ್ದಾರೆ.
ಈ ಒಂದು ಸರಣಿಯಿಂದ ಬರುವ ಆದಾಯವು ನ್ಯೂಝಿಲೆಂಡ್ ಕ್ರಿಕೆಟ್ ಅನುಭವಿಸಿರುವ 70 ಕೋಟಿ ರೂ. ನಷ್ಟವನ್ನು ಸಂಪೂರ್ಣವಾಗಿ ನೀಗಿಸಿ, ಮುಂದಿನ ಕೆಲವು ವರ್ಷಗಳ ಕಾಲ ಮಂಡಳಿ ಸುಭದ್ರವಾಗಿರಲು ಸಹಾಯ ಮಾಡಲಿದೆ.
ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಗೆ ಭಾರತದ ವಿರುದ್ಧದ ಈ 12 ಪಂದ್ಯಗಳ ಸರಣಿಯಿಂದ ಸಿಗಲಿರುವ ಅಂದಾಜು ಆದಾಯ ಮತ್ತು ಲಾಭದ ಲೆಕ್ಕಾಚಾರ ಹೀಗಿದೆ…
ಭಾರತದ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಮತ್ತು ಟಿವಿ ಹಕ್ಕುಗಳಿಗಾಗಿ ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ ಅಥವಾ ಸೋನಿ ನೆಟ್‌ವರ್ಕ್ ಭಾರಿ ಪೈಪೋಟಿ ನಡೆಸುತ್ತವೆ. ಭಾರತದಲ್ಲಿ ಒಂದು ಅಂತರರಾಷ್ಟ್ರೀಯ ಪಂದ್ಯದ ಪ್ರಸಾರದ ಮೌಲ್ಯ ಸರಾಸರಿ ₹40 ರಿಂದ ₹60 ಕೋಟಿ ಇರುತ್ತದೆ.
- ಅಂದಾಜು ಆದಾಯ: 12 ಪಂದ್ಯಗಳಿಗೆ ಭಾರತೀಯ ಮಾರುಕಟ್ಟೆಯಿಂದಲೇ ನ್ಯೂಝಿಲೆಂಡ್ ಕ್ರಿಕೆಟ್‌ಗೆ ಅಂದಾಜು ₹500 ರಿಂದ ₹600 ಕೋಟಿ ಪ್ರಸಾರ ಹಕ್ಕುಗಳಿಂದ ಲಾಭ ಸಿಗಲಿದೆ.
ಮೈದಾನದ ಬ್ಯಾನರ್‌ಗಳು, ಜೆರ್ಸಿ ಸ್ಪಾನ್ಸರ್‌ಶಿಪ್ ಮತ್ತು ಸರಣಿಯ ಶೀರ್ಷಿಕೆ ಪ್ರಾಯೋಜಕತ್ವ, ಬಹುತೇಕ ಭಾರತೀಯ ಕಂಪನಿಗಳೇ (ಟಾಟಾ, ಡ್ರೀಮ್11, ಅಮೂಲ್ ಇತ್ಯಾದಿ) ಪಡೆದುಕೊಳ್ಳುತ್ತವೆ.
- ಅಂದಾಜು ಆದಾಯ: ಇದರಿಂದ ಸುಮಾರು ₹80 ರಿಂದ ₹100 ಕೋಟಿ ಆದಾಯ ನಿರೀಕ್ಷಿಸಬಹುದು.
ಆಕ್ಲೆಂಡ್, ವೆಲ್ಲಿಂಗ್ಟನ್ ಮತ್ತು ಹ್ಯಾಮಿಲ್ಟನ್ ಸ್ಟೇಡಿಯಂಗಳಲ್ಲಿ ಭಾರತೀಯ ಮೂಲದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 12 ಪಂದ್ಯಗಳ ಪೈಕಿ ಬಹುತೇಕ ಪಂದ್ಯಗಳು ಹೌಸ್‌ಫುಲ್ ಆಗಲಿವೆ.
- ಅಂದಾಜು ಆದಾಯ: ಟಿಕೆಟ್ ಮಾರಾಟ ಮತ್ತು ಹೋಟೆಲ್/ಹಾಸ್ಪಿಟಾಲಿಟಿಯಿಂದ ಸುಮಾರು ₹40 ರಿಂದ ₹50 ಕೋಟಿ ಹರಿದು ಬರಲಿದೆ.
ಒಟ್ಟು ಅಂದಾಜು ಆದಾಯ:
ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಅಂದಾಜು ಆದಾಯವನ್ನು ಲೆಕ್ಕ ಹಾಕಿದರೆ, ಭಾರತ ಮತ್ತು ನ್ಯೂಝಿಲೆಂಡ್ ಸರಣಿಯಿಂದ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ಸುಮಾರು ₹620 ರಿಂದ ₹750 ಕೋಟಿ ರೂ. ಆದಾಯ ಗಳಿಸಲಿದೆ.
- ಪಂದ್ಯಗಳ ಆಯೋಜನಾ ವೆಚ್ಚ: ಈ ಸರಣಿ ಆಯೋಜಿಸಲು, ಆಟಗಾರರ ಭತ್ಯೆ, ಭದ್ರತೆ ಮತ್ತು ಪ್ರಯಾಣದ ವೆಚ್ಚ ಸೇರಿ ಸುಮಾರು ₹80 ರಿಂದ ₹100 ಕೋಟಿ ವೆಚ್ಚವಾಗಬಹುದು.
ಈ ಎಲ್ಲಾ ವೆಚ್ಚಗಳನ್ನು ಕಳೆದ ನಂತರ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಗೆ 12 ಪಂದ್ಯಗಳಿಂದ ಕನಿಷ್ಠ ₹500 ರಿಂದ ₹650 ಕೋಟಿ ರೂಪಾಯಿ ನಿವ್ವಳ ಲಾಭ ಸಿಗುವ ಎಲ್ಲಾ ಸಾಧ್ಯತೆಗಳಿವೆ.
ಇದನ್ನೂ ಓದಿ: ಐಸಿಸಿ ಟೆಸ್ಟ್ ಬ್ಯಾಟರ್ಗಳ ರ‍್ಯಾಂಕಿಂಗ್ ಪ್ರಕಟ
ಅಂದರೆ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ಸದ್ಯ ಎದುರಿಸುತ್ತಿರುವ ನಷ್ಟ ಸುಮಾರು ₹70 ಕೋಟಿ. ಆದರೆ ಭಾರತದ ವಿರುದ್ಧದ ಈ 12 ಪಂದ್ಯಗಳ ದ್ವಿಪಕ್ಷೀಯ ಸರಣಿಯಿಂದ ಅವರು ಗಳಿಸಲಿರುವ ಲಾಭ ₹500 ಕೋಟಿಗೂ ಅಧಿಕ. ಹೀಗಾಗಿ, ಈ ಬೃಹತ್ ಸರಣಿಯಿಂದ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ಸಂಪೂರ್ಣ ನಷ್ಟವನ್ನು ಸರಿದೂಗಿಸಿ, ಮತ್ತೆ ಭಾರಿ ಲಾಭದತ್ತ ಮರಳುವುದು ಖಚಿತ.




