- TV9 Kannada Photo gallery Cricket photos How many matches Team India need to win to qualify for WTC Final 2027?
WTC ಫೈನಲ್ಗೇರಲು ಟೀಮ್ ಇಂಡಿಯಾ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
World Test Championship: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ನಿಯಮಾವಳಿಗಳ ಪ್ರಕಾರ ಎರಡು ವರ್ಷಗಳ ಸುದೀರ್ಘ ಸರಣಿಗಳ ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೊದಲ 2 ತಂಡಗಳು ಮಾತ್ರ ನೇರವಾಗಿ ಫೈನಲ್ ಪಂದ್ಯವನ್ನು ಆಡಲಿವೆ. ಪ್ರಸ್ತುತ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಟೀಮ್ ಇಂಡಿಯಾ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
Updated on: Aug 20, 2026 | 8:05 AM

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಭಾರತ ಯುವ ಪಡೆ ಭರ್ಜರಿ ಜಯ ದಾಖಲಿಸಿ ಶುಭಾರಂಭ ಮಾಡಿದೆ ನಿಜ. ಆದರೆ, ಇಂಗ್ಲೆಂಡ್‌ನ ದಿ ಓವಲ್ ಮೈದಾನದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪಲು ಭಾರತದ ಮುಂದಿರುವ ಹಾದಿ ಮಾತ್ರ ಅಷ್ಟು ಸುಲಭವಿಲ್ಲ. (PC: BCCI)

ಏಕೆಂದರೆ ಟೀಮ್ ಇಂಡಿಯಾ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೇರಲು ಇನ್ನೂ ಕನಿಷ್ಠ 7 ಪಂದ್ಯಗಳಲ್ಲಿ ಜಯಗಳಿಸಬೇಕು. ಅಂದರೆ ಮುಂದಿನ 7 ಮ್ಯಾಚ್ಗಳಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಲೇಬೇಕು. ಅದು ಸಹ 8 ಪಂದ್ಯಗಳಲ್ಲಿ ಎಂಬುದು ಉಲ್ಲೇಖಾರ್ಹ. (PC: BCCI)

ಅಂದರೆ ಟೀಮ್ ಇಂಡಿಯಾಗೆ WTC ಸರಣಿಯಲ್ಲಿ ಉಳಿದಿರುವುದು ಕೇವಲ 8 ಪಂದ್ಯಗಳು ಮಾತ್ರ. ಈ ಎಂಟು ಮ್ಯಾಚ್ಗಳಲ್ಲಿ 7 ಜಯ ಸಾಧಿಸಿದರೆ ಭಾರತ ತಂಡವು ಶೇಕಡಾವಾರು (PCT) 68.52% ಅಂಕಗಳೊಂದಿಗೆ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲಿದೆ. (PC: BCCI)

ಟೀಮ್ ಇಂಡಿಯಾದ ಫೈನಲ್ ಹಾದಿಯಲ್ಲಿ ಮುಂದಿನ ಎದುರಾಳಿಗಳು ಶ್ರೀಲಂಕಾ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ. ಸದ್ಯ ಲಂಕಾ ಪ್ರವಾಸದಲ್ಲಿರುವ ಭಾರತ ತಂಡವು ಇನ್ನೊಂದು ಟೆಸ್ಟ್ ಪಂದ್ಯವನ್ನು ಆಡಬೇಕಿದೆ. ಇದಾದ ಬಳಿಕ ಅಕ್ಟೋಬರ್-ನವೆಂಬರ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ 2 ಪಂದ್ಯಗಳ ಕಠಿಣ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದ್ದು, ಆ ನಂತರ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಹೈ-ವೋಲ್ಟೇಜ್ ಬೋರ್ಡರ್-ಗವಾಸ್ಕರ್ ಟ್ರೋಫಿ ಸರಣಿಯನ್ನು ಆಡಲಿದೆ. (PC: BCCI)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿಯನ್ನು ಸುಗಮಗೊಳಿಸಲು ಭಾರತಕ್ಕೆ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಜಯ ದಾಖಲಿಸುವುದು ಅತ್ಯಗತ್ಯ. ಇದಾದ ಬಳಿಕ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಬೇಕಿದೆ. ಈ ಸರಣಿಗಳ ಯಶಸ್ಸಿನ ನಂತರ, ಪ್ರಶಸ್ತಿ ರೇಸ್‌ನಲ್ಲಿ ಮುನ್ನಡೆಯಲು ಆಸ್ಟ್ರೇಲಿಯಾ ವಿರುದ್ಧದ ಕನಿಷ್ಠ 4-1 ಅಥವಾ 4-0 ಅಂತರದಿಂದ ಗೆಲ್ಲಲೇಬೇಕಾದ ದೊಡ್ಡ ಸವಾಲು ಟೀಮ್ ಇಂಡಿಯಾ ಮುಂದಿದೆ. (PC: BCCI)

ಹೀಗೆ ಮುಂದಿನ 8 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕನಿಷ್ಠ 7 ಗೆಲುವು ದಾಖಲಿಸಿದರೆ, ಇಂಗ್ಲೆಂಡ್‌ನ 'ದಿ ಓವಲ್' ಮೈದಾನದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಕಣಕ್ಕಿಳಿಯುವುದು ನೂರಕ್ಕೆ ನೂರರಷ್ಟು ಖಚಿತವಾಗಲಿದೆ. ಒಂದು ವೇಳೆ ಭಾರತವು ಒಂದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋತರೆ, ಫೈನಲ್ ಟಿಕೆಟ್‌ಗಾಗಿ ಇತರ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಹೀಗಾಗಿಯೇ ಟೀಮ್ ಇಂಡಿಯಾ ಪಾಲಿಗೆ ಮುಂದಿನ ಪ್ರತಿ ಪಂದ್ಯವೂ 'ಮಾಡು ಇಲ್ಲವೇ ಮಡಿ' ಎಂಬಂತಾಗಿದೆ. (PC: BCCI)




