AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಐಎಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ; ತಮಿಳುನಾಡಿನ ಟಿವಿಕೆ ಶಾಸಕ ಅರುಳ್ ವಿಘ್ನೇಶ್ ಬಂಧನ

ತಮಿಳುನಾಡಿನ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಲೈಂಗಿಕ ಕಿರುಕುಳ ದೂರಿಗೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶಾಸಕ ಸಿ. ಅರುಳ್ ವಿಘ್ನೇಶ್ ಅವರನ್ನು ಇಂದು ಬಂಧಿಸಲಾಗಿದೆ. ಲೈಂಗಿಕ ಕಿರುಕುಳದ ಆರೋಪಗಳ ಮೇಲೆ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವುದೇಕೆ? ಎಂದು ಮದ್ರಾಸ್ ಹೈಕೋರ್ಟ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿದ 3 ದಿನಗಳ ನಂತರ ಟಿವಿಕೆ ಶಾಸಕನನ್ನು ಬಂಧಿಸಲಾಗಿದೆ. ಶಾಸಕ ವಿಘ್ನೇಶ್ ತಮಗೆ ಲೈಂಗಿಕವಾಗಿ ಅಶ್ಲೀಲವಾದ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದಾರೆ, ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಮದ್ಯದ ಅಮಲಿನಲ್ಲಿ ತಮ್ಮ ಅಧಿಕೃತ ನಿವಾಸಕ್ಕೆ ಬಂದಿದ್ದರು ಎಂದು ಐಎಎಸ್​ ಅಧಿಕಾರಿ ಆರೋಪಿಸಿದ್ದಾರೆ. ಆದರೆ, ವಿಘ್ನೇಶ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಮಹಿಳಾ ಐಎಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ; ತಮಿಳುನಾಡಿನ ಟಿವಿಕೆ ಶಾಸಕ ಅರುಳ್ ವಿಘ್ನೇಶ್ ಬಂಧನ
Tvk Mla Vignesh
ಸುಷ್ಮಾ ಚಕ್ರೆ
|

Updated on: Nov 27, 2026 | 10:59 PM

Share

ಚೆನ್ನೈ, ನವೆಂಬರ್ 27: ಮಹಿಳಾ ಐಎಎಸ್ ಅಧಿಕಾರಿ ಹಾಗೂ ಕಲ್ಲಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ ಅವರಿಗೆ ಅಶ್ಲೀಲ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಸಿ. ಅರುಳ್ ವಿಘ್ನೇಶ್ ಅವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಮದ್ರಾಸ್ ಹೈಕೋರ್ಟ್‌ನ ಕಟ್ಟುನಿಟ್ಟಿನ ಮಧ್ಯಪ್ರವೇಶದ ಬೆನ್ನಲ್ಲೇ ಕಲ್ಲಕುರಿಚಿ ಮಹಿಳಾ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾಧಿಕಾರಿ ಮಾಡಿರುವ ಆರೋಪಗಳೇನು?:

ಕಲ್ಲಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ ಅವರು ನವೆಂಬರ್ 23ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶಹನಾಜ್ ಅವರಿಗೆ ಅಧಿಕೃತ ದೂರು ನೀಡಿದ್ದರು. ಶಾಸಕ ಅರುಳ್ ವಿಘ್ನೇಶ್ ತಮಗೆ ಅಶ್ಲೀಲ ಹಾಗೂ ಅನುಚಿತ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದಾರೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಭ್ಯವಾಗಿ ವರ್ತಿಸಿ ತನ್ನ ಉಡುಪಿನ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಮತ್ತು ಕಳೆದ ಜುಲೈನಲ್ಲಿ ಮದ್ಯದ ಅಮಲಿನಲ್ಲಿ ತಮ್ಮ ಅಧಿಕೃತ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದರು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿ ರಾಜ್ಯ ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಅವರಿಗೂ ಲಿಖಿತ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಚುನಾವಣಾ ಅಧಿಕಾರಿಯ ಸಭೆಯಿಂದ ಹೊರನಡೆದ ಟಿವಿಕೆ, ಡಿಎಂಕೆ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು

ಘಟನೆ ಬೆಳಕಿಗೆ ಬಂದಿದ್ದು ಹೇಗೆ?:

ಜುಲೈ 31ರಂದೇ ಈ ಆರೋಪಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿತ್ತು ಎಂದು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಲಾಗಿತ್ತು. ನವೆಂಬರ್‌ನಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ ನಂತರ ಇದು ವ್ಯಾಪಕ ಗಮನ ಸೆಳೆಯಿತು. ನವೆಂಬರ್ 12ರಂದು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಪ್ರತ್ಯೇಕವಾಗಿ ರಾಜ್ಯದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ತನಿಖೆಗೆ ಒತ್ತಾಯಿಸಿದ್ದವು. ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಕೈಗೆತ್ತಿಕೊಂಡು, ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸುವಂತೆ ಮತ್ತು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ತಮಿಳುನಾಡು ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು.

ವಿಘ್ನೇಶ್ ಈ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದಾರೆ. ಅಧಿಕಾರಿಯ ನಿವಾಸದಲ್ಲಿರುವ ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಉಲ್ಲೇಖಿಸಿರುವ ಅವರು, ಆರೋಪಿಸಿದಂತೆ ತಾವು ಒಳಗೆ ಪ್ರವೇಶಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ಕರ್ನಾಟಕದ ಲೋಕಸಭಾ ಕ್ಷೇತ್ರಗಳು 56ಕ್ಕೆ ಏರಲಿವೆ’; ಕ್ಷೇತ್ರ ಮರುವಿಂಗಡಣೆಗೆ ಜೆಡಿಎಸ್ ಸಂಪೂರ್ಣ ಬೆಂಬಲ

ಈ ಘಟನೆ ನಡೆದು ಸುಮಾರು 3 ತಿಂಗಳಾದರೂ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವುದೇಕೆ ಎಂದು ನವೆಂಬರ್ 24ರಂದು ಮದ್ರಾಸ್ ಹೈಕೋರ್ಟ್ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿತ್ತು. ಇತ್ತ ವಿರೋಧ ಪಕ್ಷಗಳಾದ ಡಿಎಂಕೆ (ಕನಿಮೊಳಿ), ಎಐಎಡಿಎಂಕೆ ಮತ್ತು ಬಿಜೆಪಿ ನಾಯಕರು ತಮ್ಮ ಪಕ್ಷದ ಶಾಸಕನನ್ನು ಸಿಎಂ ವಿಜಯ್ ರಕ್ಷಿಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದರು. ನವೆಂಬರ್ 25ರಂದು ವಿಚಾರಣೆಗೆ ಸಮನ್ಸ್ ನೀಡಿದ್ದ ಪೊಲೀಸರು, ಇಂದು ಅರುಳ್ ವಿಘ್ನೇಶ್ ಅವರನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More