ತಮಿಳುನಾಡಿನಲ್ಲಿ ಚುನಾವಣಾ ಅಧಿಕಾರಿಯ ಸಭೆಯಿಂದ ಹೊರನಡೆದ ಟಿವಿಕೆ, ಡಿಎಂಕೆ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು
ತಮಿಳುನಾಡಿನಲ್ಲಿ ಎಸ್ಎಸ್ಆರ್ ಕುರಿತು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಕರೆದಿದ್ದ ಸರ್ವಪಕ್ಷ ಸಭೆಯಿಂದ ಟಿವಿಕೆ ನೇತೃತ್ವದ ಮೈತ್ರಿಕೂಟ ಹಾಗೂ ವಿರೋಧ ಪಕ್ಷವಾದ ಡಿಎಂಕೆ ಪ್ರತಿನಿಧಿಗಳು ಸಭಾತ್ಯಾಗ ನಡೆಸಿದ್ದಾರೆ. ಸಭೆಯ ವೇಳೆ ವಾಗ್ದಾಳಿ ನಡೆಸಿದ ಎರಡೂ ಪಕ್ಷಗಳ ನಾಯಕರು, ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇಂದು ನಡೆದ ಈ ಸಭೆಯ ಮುಖ್ಯ ಅಜೆಂಡಾ ಎಸ್ಎಸ್ಆರ್ ಕುರಿತಾಗಿದ್ದರೂ, ರಾಜಕೀಯ ಪಕ್ಷಗಳ ನಾಯಕರು ಈ ಹಿಂದೆ ನಡೆಸಲಾದ ಎಸ್‌ಐಆರ್ ಪ್ರಕ್ರಿಯೆಯಲ್ಲಾಗಿರುವ ಗಂಭೀರ ತಪ್ಪುಗಳು ಹಾಗೂ ಅಕ್ರಮಗಳ ಬಗ್ಗೆ ಆಕ್ಷೇಪ ಎತ್ತಿದರು.

ಚೆನ್ನೈ, ಅಕ್ಟೋಬರ್ 23: ಚುನಾವಣಾ ಪಟ್ಟಿಯ ಎಸ್ಎಸ್ಆರ್ ಕುರಿತು ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಅವರೊಂದಿಗೆ ನಡೆದ ಸರ್ವಪಕ್ಷ ಸಭೆಯಿಂದ ತಮಿಳುನಾಡಿನ ಟಿವಿಕೆ ನೇತೃತ್ವದ ಮೈತ್ರಿಕೂಟ ಹಾಗೂ ವಿರೋಧ ಪಕ್ಷವಾದ ಡಿಎಂಕೆ ಪ್ರತಿನಿಧಿಗಳು ಹೊರನಡೆದಿದ್ದಾರೆ. ಅಲ್ಲದೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಭೆಯಲ್ಲಿ ಈ ಎರಡೂ ಪಕ್ಷಗಳು ಆಗ್ರಹಿಸಿವೆ.
ಎಸ್ಐಆರ್ನಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಸಾವಿರಾರು ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಸಿಇಒ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಬೇಕು ಹಾಗೂ ಈ ಪ್ರಕ್ರಿಯೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮೆಟ್ರೋ ಬಂದ್, ಇಂಟರ್ನೆಟ್ ಕಡಿತ, ನಿಷೇಧಾಜ್ಞೆ ಜಾರಿಗೊಳಿಸಿ ಸುಮಾರು 40,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ದೆಹಲಿಯನ್ನು ಅರೆಕಾವಲು ಕೋಟೆಯನ್ನಾಗಿ ಬದಲಾಯಿಸಲಾಗಿತ್ತು.
ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ನಡೆದ ಅಕ್ರಮಗಳಿಗೆ ಹಾಗೂ ಲೋಪದೋಷಗಳಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೇ ನೇರ ಹೊಣೆ ಎಂದು ಆರೋಪಿಸಿದ ಟಿವಿಕೆ ಮತ್ತು ಡಿಎಂಕೆ ಪಕ್ಷಗಳು, ಅವರು ತಕ್ಷಣವೇ ಹುದ್ದೆಯಿಂದ ಕೆಳಗಿಳಿಯಬೇಕೆಂದು ಪಟ್ಟು ಹಿಡಿದವು.
ಮತದಾರರ ಹೆಸರುಗಳ ವಿವಾದ:
ಈ ಹಿಂದೆ ಕೈಗೊಳ್ಳಲಾದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಮಿಳುನಾಡಿನಾದ್ಯಂತ ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ಕೈಬಿಡಲಾಗಿದೆ ಎಂದು ರಾಜಕೀಯ ಪಕ್ಷಗಳು ವಾಗ್ದಾಳಿ ನಡೆಸಿದವು. ಪ್ರಜಾರಾಷ್ಟ್ರದ ಅಡಿಪಾಯವಾಗಿರುವ ಮತದಾನದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಆಯೋಗ ವಿಫಲವಾಗಿದೆ ಎಂದು ನಾಯಕರು ಆರೋಪಿಸಿದರು.
ಇದನ್ನೂ ಓದಿ: ಎಸ್‌ಐಆರ್ ವಿವಾದದ ಬೆನ್ನಲ್ಲೇ 17 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಎಸ್ಆರ್ ಘೋಷಿಸಿದ ಚುನಾವಣಾ ಆಯೋಗ
ತಮಿಳುನಾಡಿನಲ್ಲಿ ಸುಮಾರು 74 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಕುರಿತು ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಗಳೇನು? ಎಂದು ಡಿಎಂಕೆ ಕಾನೂನು ವಿಭಾಗದ ಕಾರ್ಯದರ್ಶಿ ಐ. ಪರಂದಾಮನ್ ಪ್ರಶ್ನಿಸಿದ್ದಾರೆ. ಅಧಿಕಾರಿಗಳಿಗೆ ನಮ್ಮ ಅಭಿಪ್ರಾಯಗಳನ್ನು ತಿಳಿಸಿದ ಬಳಿಕ ನಾವು ಸಭೆಯಿಂದ ಹೊರನಡೆದಿದ್ದೇವೆ ಎಂದು ಅವರು ಸ್ಪಪಡಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
