ಭಾರತ- ಜಪಾನ್ ನಡುವಿನ ಏಕೈಕ ಪಂದ್ಯ ಯಾವಾಗ ನಡೆಯಲಿದೆ? ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ಜಪಾನ್ ನಡುವಿನ ಏಕೈಕ ಐತಿಹಾಸಿಕ ಟಿ20 ಪಂದ್ಯವು ಸೆಪ್ಟೆಂಬರ್ 22, 2026 ರಂದು ಜಪಾನ್‌ನ ಸಾನೋ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಈ ಪಂದ್ಯವನ್ನು ಆಡಲಾಗುತ್ತಿದೆ. ಪಂದ್ಯದ ನೇರ ಪ್ರಸಾರ ಹಕ್ಕುಗಳ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಭಾರತೀಯ ಅಭಿಮಾನಿಗಳು ಇದನ್ನು ಎಲ್ಲಿ ವೀಕ್ಷಿಸಬಹುದು ಎಂಬ ಸ್ಪಷ್ಟತೆ ಶೀಘ್ರದಲ್ಲೇ ಲಭ್ಯವಾಗಲಿದೆ.

ಭಾರತ- ಜಪಾನ್ ನಡುವಿನ ಏಕೈಕ ಪಂದ್ಯ ಯಾವಾಗ ನಡೆಯಲಿದೆ? ಎಲ್ಲಿ ವೀಕ್ಷಿಸಬಹುದು?
India Vs Japan

Updated on: Sep 07, 2026 | 9:07 PM

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಿ ಮುಗಿಸಿದ ಬಳಿಕ ಪ್ರಸ್ತುತ ಟೀಂ ಇಂಡಿಯಾ ವಿಶ್ರಾಂತಿಯಲ್ಲಿದೆ. ಇದೇ ತಿಂಗಳು ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯೊಂದಿಗೆ ಟೀಂ ಇಂಡಿಯಾ ಮತ್ತೆ ಕಣಕ್ಕಿಳಿಯಲಿದೆ. ಉಭಯ ತಂಡಗಳ ಈ ಸರಣಿ ಸೆಪ್ಟೆಂಬರ್ 13 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಈ ಸರಣಿಯ ಬಳಿಕ ಟೀಂ ಇಂಡಿಯಾ ಏಷ್ಯನ್ ಗೇಮ್ಸ್​ಗೆ ತೆರಳಲಿದೆ. ಆದರೆ ಅದಕ್ಕೂ ಮೊದಲು ಜಪಾನ್ ತಂಡದ ವಿರುದ್ಧ ಏಕೈಕ ಟಿ20 ಪಂದ್ಯವನ್ನಾಡಲಿದೆ. ಈ ಟಿ20 ಪಂದ್ಯದ ವಿಶೇಷತೆ? ಇದು ಎಲ್ಲಿ ನಡೆಯಲಿದೆ? ಈ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು ಎಂಬುದರ ಪೂರ್ಣ ವಿವರ ಇಲ್ಲಿದೆ.

ಸೆಪ್ಟೆಂಬರ್ 22 ರಂದು ಪಂದ್ಯ

ಭಾರತ ಮತ್ತು ಜಪಾನ್ ನಡುವಿನ ಏಕೈಕ ಟಿ20 ಪಂದ್ಯ ಸೆಪ್ಟೆಂಬರ್ 22, 2026 ರಂದು ಟೋಚಿಗಿ ಪ್ರಿಫೆಕ್ಚರ್‌ನಲ್ಲಿರುವ ಸಾನೋ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಪಂದ್ಯವನ್ನು ಆಡಲಾಗುತ್ತಿದೆ. ಆದಾಗ್ಯೂ, ಈ ಪಂದ್ಯವನ್ನು ಯಾವ ಚಾನೆಲ್​ನಲ್ಲಿ ನೇರ ಪ್ರಸಾರ ಮಾಡುಲಾಗುತ್ತದೆ ಎಂಬುದರ ಕುರಿತು ಚಿತ್ರಣ ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ ಇದು ಕೇವಲ ಒಂದೇ ಟಿ20 ಪಂದ್ಯವಾಗಿರುವುದರಿಂದ, ಇದಕ್ಕಾಗಿ ಪ್ರಸಾರ ಅಥವಾ ಸ್ಟ್ರೀಮಿಂಗ್ ಪಾಲುದಾರರನ್ನು ಹುಡುಕುವುದು ಆಯೋಜಕರಿಗೆ ಕಷ್ಟಸಾಧ್ಯ. ಆದ್ದರಿಂದ ಈ ಪಂದ್ಯವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡುವ ಸಾಧ್ಯತೆಯಿದೆ.

ಭಾರತದಲ್ಲಿ ವೀಕ್ಷಿಸುವುದು ಹೇಗೆ?

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಪ್ರಸಾರ ಹಕ್ಕುಗಳ ಕುರಿತು ಜಪಾನ್ ಕ್ರಿಕೆಟ್ ಅಸೋಸಿಯೇಷನ್ ​​ಮತ್ತು ಐಟಿಡಬ್ಲ್ಯೂ ಯೂನಿವರ್ಸ್ ನಡುವೆ ಚರ್ಚೆಗಳು ನಡೆಯುತ್ತಿವೆ. ಒಪ್ಪಂದವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಏತನ್ಮಧ್ಯೆ, ಜಪಾನ್ ಕ್ರಿಕೆಟ್ ಅಸೋಸಿಯೇಷನ್‌ನ ಡಿಜಿಟಲ್ ಕ್ರೀಡಾ ವೇದಿಕೆಯಾದ ಫ್ಯಾನ್‌ಕೋಡ್ ಸಹ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಐಟಿಡಬ್ಲ್ಯೂ ಯೂನಿವರ್ಸ್ ಜಿಯೋಸ್ಟಾರ್, ಸೋನಿ ಅಥವಾ ಜೀ ಜೊತೆ ಲೀನಿಯರ್ ಪ್ರಸಾರ ಹಕ್ಕುಗಳಿಗಾಗಿ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ, ಭಾರತದ ಅಭಿಮಾನಿಗಳು ಈ ಪಂದ್ಯವನ್ನು ಟಿವಿಯಲ್ಲಿ ಅಥವಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸುತ್ತಾರೆಯೇ ಎಂಬುದು ಶೀಘ್ರದಲ್ಲೇ ಸ್ಪಷ್ಟವಾಗುವ ಸಾಧ್ಯತೆಯಿದೆ.

ಭಾರತದಲ್ಲಿ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ?

ಭಾರತ ಮತ್ತು ಜಪಾನ್ ನಡುವಿನ ಈ ಪಂದ್ಯ ಜಪಾನ್ ಸಮಯ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ. ಅಂದರೆ, ಭಾರತದಲ್ಲಿ ಪಂದ್ಯ ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಗುತ್ತದೆ. ಭಾರತ ತಂಡ ಸೆಪ್ಟೆಂಬರ್ 20 ರಂದು ಸಾನೋ ತಲುಪಲಿದೆ. ಅದರ ನಂತರ, ತಂಡವು ಸೆಪ್ಟೆಂಬರ್ 21 ರಂದು ಅಭ್ಯಾಸ ನಡೆಸಲಿದೆ ಮತ್ತು ಸೆಪ್ಟೆಂಬರ್ 22 ರಂದು ಜಪಾನ್ ವಿರುದ್ಧ ಟಿ20 ಪಂದ್ಯವನ್ನು ಆಡಲಿದೆ. ಜಪಾನ್ ವಿರುದ್ಧದ ಪಂದ್ಯದ ನಂತರ, ಭಾರತ ತಂಡವು ಕೆಲವು ದಿನಗಳ ಕಾಲ ಸಾನೋದಲ್ಲಿ ಉಳಿಯುವ ಸಾಧ್ಯತೆಯಿದೆ. ಏಕೆಂದರೆ ಭಾರತ ತಂಡವು ಸೆಪ್ಟೆಂಬರ್ 28 ರಂದು ಏಷ್ಯನ್ ಕ್ರೀಡಾಕೂಟದಲ್ಲಿ ಕ್ವಾರ್ಟರ್-ಫೈನಲ್ ಪಂದ್ಯವನ್ನು ಆಡಬೇಕಿದೆ.

ಭಾರತದ ಪಂದ್ಯಕ್ಕಾಗಿ ಜಪಾನ್ ಕ್ರಿಕೆಟ್ ಅಸೋಸಿಯೇಷನ್ ​​ಸಾನೋ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಕ್ರೀಡಾಂಗಣದ ಪ್ರಸ್ತುತ ಸಾಮರ್ಥ್ಯ ಸುಮಾರು 500 ಪ್ರೇಕ್ಷಕರು. ಆದಾಗ್ಯೂ, ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಭಾರತದ ಪಂದ್ಯವನ್ನು ವೀಕ್ಷಿಸಲು ಬರುವ ನಿರೀಕ್ಷೆಯಿರುವುದರಿಂದ, ಸುಮಾರು 2,000 ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲು ಸೌಲಭ್ಯಗಳನ್ನು ವಿಸ್ತರಿಸಲು ಯೋಜನೆಗಳು ನಡೆಯುತ್ತಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us