
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ಐದನೇ ದಿನದಾಟಕ್ಕೆ ಕಾಲಿಟ್ಟಿದೆ. ಶುಕ್ರವಾರ ಶುರುವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಮೊದಲು ಬ್ಯಾಟ್ ಮಾಡಿತು. ಅದರಂತೆ ಮೊದಲ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡ ಪೇರಿಸಿದ್ದು ಬರೋಬ್ಬರಿ 489 ರನ್ಗಳು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಕೇವಲ 201 ರನ್ಗಳಿಗೆ ಆಲೌಟ್ ಆಗಿ 288 ರನ್ಗಳ ಹಿನ್ನಡೆ ಅನುಭವಿಸಿತು.
288 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು 5 ವಿಕೆಟ್ ನಷ್ಟಕ್ಕೆ 260 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾಗೆ ಕೊನೆಯ ಇನಿಂಗ್ಸ್ನಲ್ಲಿ 549 ರನ್ಗಳ ಗುರಿ ನೀಡಿದೆ.
ಅದರಂತೆ 549 ರನ್ಗಳ ಬೆನ್ನತ್ತಲಾರಂಭಿಸಿದ ಟೀಮ್ ಇಂಡಿಯಾ ಯಶಸ್ವಿ ಜೈಸ್ವಾಲ್ (13) ಹಾಗೂ ಕೆಎಲ್ ರಾಹುಲ್ (6) ವಿಕೆಟ್ ಕಳೆದುಕೊಂಡಿದೆ. ಇನ್ನು ಕೊನೆಯ ದಿನದಾಟದಲ್ಲಿ 522 ರನ್ಗಳಿಸಿದರೆ ಭಾರತ ತಂಡವು ಗೆಲುವನ್ನು ತನ್ನದಾಗಿಸಿಕೊಳ್ಳಬಹುದು. ಆದರೆ ಇಲ್ಲಿ ಟೀಮ್ ಇಂಡಿಯಾ ಪಂದ್ಯ ಗೆಲ್ಲುವ ಬದಲು ಡ್ರಾನತ್ತ ಮುಖ ಮಾಡಬೇಕಿರುವುದು ಅನಿವಾರ್ಯ.
ಏಕೆಂದರೆ ಸೌತ್ ಆಫ್ರಿಕಾ ತಂಡ ಈಗಾಗಲೇ 2 ವಿಕೆಟ್ ಕಬಳಿಸಿದೆ. ಇನ್ನುಳಿದ 8 ವಿಕೆಟ್ಗಳನ್ನು ಪಡೆದರೆ ಪಂದ್ಯ ಗೆಲ್ಲಬಹುದು. ಅತ್ತ ಟೀಮ್ ಇಂಡಿಯಾ 522 ರನ್ಗಳನ್ನು ಕಲೆಹಾಕಲು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಲೇಬೇಕು. ಇದರಿಂದ ವಿಕೆಟ್ ಬೀಳುವ ಸಾಧ್ಯತೆ ಹೆಚ್ಚು.
ಅಷ್ಟೇ ಅಲ್ಲದೆ ಟೆಸ್ಟ್ ಇತಿಹಾಸದಲ್ಲಿ ಯಾವುದೇ ತಂಡ 500+ ರನ್ ಬೆನ್ನತ್ತಿ ಗೆದ್ದ ದಾಖಲೆ ಇಲ್ಲ. ಇನ್ನು ಏಷ್ಯನ್ ಪಿಚ್ನಲ್ಲಿ ಟೀಮ್ ಇಂಡಿಯಾ ಕೊನೆಯ ಇನಿಂಗ್ಸ್ನಲ್ಲಿ 400 ರನ್ಗಳಿಸಿದ ಇತಿಹಾಸ ಕೂಡ ಇಲ್ಲ. ಹೀಗಾಗಿ 522 ರನ್ಗಳ ಗುರಿ ಬೆನ್ನತ್ತುವುದು ಕಷ್ಟಸಾಧ್ಯ. ಒಂದು ವೇಳೆ ಟೀಮ್ ಇಂಡಿಯಾ ಬಿರುಸಿನ ಬ್ಯಾಟಿಂಗ್ನೊಂದಿಗೆ ಚೇಸಿಂಗ್ಗೆ ಯತ್ನಿಸಿದರೆ ಆಲೌಟ್ ಆಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಭಾರತ ತಂಡವು ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕು.
ಟೀಮ್ ಇಂಡಿಯಾ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳದೇ ಹೋರಾಡಿ ವಿರೋಚಿತವಾಗಿ ಸೋಲನ್ನು ಒಪ್ಪಿಕೊಳ್ಳಬಹುದಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಭಾಗ. ಹೀಗಾಗಿ ಸೋಲಿಗಿಂತ ಡ್ರಾ ಅತ್ಯವಶ್ಯಕ.
ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಪಂದ್ಯವು ಡ್ರಾಗೊಂಡರೆ 4 ಅಂಕಗಳು ದೊರೆಯುತ್ತವೆ. ಈ ಅಂಕಗಳ ಮೂಲಕ ಭಾರತ ತಂಡವು ತನ್ನ ಗೆಲುವಿನ ಶೇಕಡಾವಾರನ್ನು ಉತ್ತಮಗೊಳಿಸಬಹುದು. ಅದೇ ಸೋಲನುಭವಿಸಿದರೆ ಅಂಕ ಪಟ್ಟಿಯಲ್ಲಿ ಭಾರೀ ಕುಸಿತಕ್ಕೊಳಗಾಗಲಿದೆ.
ಇದನ್ನೂ ಓದಿ: 20 ತಂಡಗಳು 29 ದಿನಗಳು: ಹೇಗಿರಲಿದೆ ಟಿ20 ವಿಶ್ವಕಪ್ ಟೂರ್ನಿ?
ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಪ್ರಯತ್ನಕ್ಕೆ ಕೈ ಹಾಕದೇ ಡ್ರಾನತ್ತ ಮುಖ ಮಾಡುವುದು ಉತ್ತಮ.