AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮೃತಿ ಮಂಧಾನ – ಪಲಾಶ್ ಮುಚ್ಚಲ್ ಮದುವೆ ಮುಂದೂಡಲು ಇದುವೇ ಕಾರಣ

Smriti Mandhanam - Palash Muchhal: ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ತನ್ನ ಬಹುಕಾಲದ ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಅದರಂತೆ ಕಳೆದ ಭಾನುವಾರ (ನ.23) ಇಬ್ಬರು ಸತಿ-ಪತಿಗಳಾಬೇಕಿತ್ತು. ಆದರೆ ಅನಿರೀಕ್ಷಿತ ಘಟನೆಗಳಿಂದಾಗಿ ಪಲಾಶ್-ಸ್ಮೃತಿ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಸ್ಮೃತಿ ಮಂಧಾನ - ಪಲಾಶ್ ಮುಚ್ಚಲ್ ಮದುವೆ ಮುಂದೂಡಲು ಇದುವೇ ಕಾರಣ
Smriti Mandhana - Palash Muchhal
ಝಾಹಿರ್ ಯೂಸುಫ್
|

Updated on: Nov 26, 2025 | 11:29 AM

Share

ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ನವೆಂಬರ್ 23 ರಂದು ನೆರವೇರಬೇಕಿತ್ತು. ಆದರೆ ಮದುವೆ ಸಮಾರಂಭದ ನಡುವೆ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದರಿಂದ ವಿವಾಹವನ್ನು ಮುಂದೂಡಲಾಯಿತು. ಹೀಗೆ ಮದುವೆ ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದು ವರ ಪಲಾಶ್ ಮುಚ್ಚಲ್.

ಈ ಬಗ್ಗೆ ಪ್ರಮುಖ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಪಲಾಶ್ ಮುಚ್ಚಲ್ ಅವರ ತಾಯಿ ಅಮಿತಾ ಮುಚ್ಚಲ್, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸ್ಮೃತಿ ಮಂಧಾನ ಹಾಗೂ ಪಲಾಶ್ ವಿವಾಹ ಮುಗಿದಿರುತ್ತಿತ್ತು. ಆದರೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತವಾಗಿದ್ದರಿಂದ ಮದುವೆಯನ್ನು ಮುಂದೂಡುವ ನಿರ್ಧಾರ ಮಾಡಲಾಗಿದೆ.

ಮದುವೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿದ್ದು ಪಲಾಶ್ ಮುಚ್ಚಲ್. ಪಲಾಶ್ ಹಾಗೂ ಶ್ರೀನಿವಾಸ್ ಮಂಧಾನ ತುಂಬಾ ಆಪ್ತರು. ಅವರಿಗೆ ಹೃದಯಾಘಾತವಾಗಿ ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ಪಲಾಶ್ ವಿವಾಹ ಸಮಾರಂಭವನ್ನು ಮುಂದೂಡಬೇಕೆಂದು ಆಗ್ರಹಿಸಿದರು.

ಏಕೆಂದರೆ ಪಲಾಶ್ ಮುಚ್ಚಲ್ ಶ್ರೀನಿವಾಸ್ ಮಂಧಾನ ಅವರ ಸಮ್ಮುಖದಲ್ಲಿ ವಿವಾಹವಾಗಲು ಬಯಸಿದ್ದರು. ಅವರು ಆಸ್ಪತ್ರೆಯಲ್ಲಿರುವಾಗ ಶುಭ ಸಮಾರಂಭ ಮಾಡುವುದು ಸರಿಯಲ್ಲ ಎಂದು ಮದುವೆಯ ಆಚರಣೆಗಳು ಮತ್ತು ಇತರ ಸಮಾರಂಭಗಳನ್ನು ಮುಂದೂಡಲು ಪಲಾಶ್  ಕೇಳಿಕೊಂಡರು. ಹೀಗಾಗಿ ವಿವಾಹವನ್ನು ಮುಂದೂಡಲಾಗಿದೆ.

ಶ್ರೀನಿವಾಸ್ ಮಂಧಾನ ಅವರೊಂದಿಗೆ ಪಲಾಶ್ ಅತ್ಯುತ್ತಮ ಆಪ್ತತತೆಯನ್ನು ಹೊಂದಿದ್ದಾರೆ. ಸ್ಮೃತಿ ಮಂಧಾನಗಿಂತ ಪಲಾಶ್ ತನ್ನ ಮಾವನೊಂದಿಗೆ ಆತ್ಮೀಯತೆ ಬೆಳೆಸಿದ್ದಾರೆ. ಹೀಗಾಗಿ ಮಾವ ಚೇತರಿಸಿಕೊಳ್ಳುವವರೆಗೆ ಮದುವೆ ಬೇಡ ಎಂಬ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಮದುವೆಯನ್ನು ಪೋಸ್ಟ್​ಪೋನ್ ಮಾಡಲಾಯಿತು ಎಂದು ಅಮಿತಾ ಮುಚ್ಚಲ್ ತಿಳಿಸಿದ್ದಾರೆ.

ಇನ್ನು ಶ್ರೀನಿವಾಸ್ ಮಂಧಾನ ಅವರು ಸಂಗೀತ್ ಕಾರ್ಯಕ್ರಮದಂದು ತುಂಬಾ ಹೊತ್ತು ಡ್ಯಾನ್ಸ್ ಮಾಡಿದ್ದರು. ಇದರಿಂದಾಗಿ ಮರುದಿನ ಅಸ್ವಸ್ಥರಾಗಿದ್ದರು. ಇದಾಗ್ಯೂ ಅವರು ಯಾರಿಗೂ ಹೇಳಿರಲಿಲ್ಲ. ಆದರೆ ಪರಿಸ್ಥಿತಿ ಕೈ ಮೀರುತ್ತಿರುವುದು ಗೊತ್ತಾದ ಬಳಿಕ ಆ್ಯಂಬುಲೆನ್ಸ್ ಕರೆಸಲಾಯಿತು ಎಂದು ಪಲಾಶ್ ಮುಚ್ಚಲ್ ಅವರ ತಾಯಿ ತಿಳಿಸಿದ್ದಾರೆ.

ಇನ್ನು ಸ್ಮೃತಿ ಮಂಧಾನ ಅವರ ತಂದೆ  ಅನಾರೋಗ್ಯಕ್ಕೆ ಒಳಗಾದ ಬೆನ್ನಲ್ಲೇ, ಪಲಾಶ್ ಅವರ ಆರೋಗ್ಯವೂ ಹದಗೆಟ್ಟಿತು. ವೈರಲ್ ಸೋಂಕು ಮತ್ತು ಅಸಿಡಿಟಿಯಿಂದಾಗಿ ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಪಲಾಶ್  ಈಗ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 181 ವರ್ಷಗಳ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ಬರೆದ ಪಾಕ್ ಆಟಗಾರ

ಸದ್ಯ ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧಾನ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶ್ರೀನಿವಾಸ್ ಮಂಧಾನ ಅವರು ಸಂಪೂರ್ಣ ಚೇತರಿಸಿಕೊಂಡ ಬಳಿಕವಷ್ಟೇ ಹೊಸ ವಿವಾಹ ದಿನಾಂಕವನ್ನು ನಿಗದಿ ಮಾಡಲಿದ್ದಾರೆ.