ICC Test Rankings: ಕಿವೀಸ್ ವಿರುದ್ಧ ಸರಣಿ ಗೆದ್ದ ಭಾರತ; ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೇರಿದ ಕೊಹ್ಲಿ ಪಡೆ!

IND vs NZ: ಮುಂಬೈ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್​ನಲ್ಲಿ ನಂಬರ್ ಒನ್ ತಂಡವಾಗಿ ಹೊರಹೊಮ್ಮಿದೆ. ಜೊತೆಗೆ ನ್ಯೂಜಿಲೆಂಡ್‌ನಿಂದ ಅಗ್ರ ಸ್ಥಾನವನ್ನು ಕಸಿದುಕೊಂಡಿದೆ.

ICC Test Rankings: ಕಿವೀಸ್ ವಿರುದ್ಧ ಸರಣಿ ಗೆದ್ದ ಭಾರತ; ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೇರಿದ ಕೊಹ್ಲಿ ಪಡೆ!
ಟೀಂ ಇಂಡಿಯಾ
Updated By: ಪೃಥ್ವಿಶಂಕರ

Updated on: Dec 06, 2021 | 11:33 AM

ಮುಂಬೈನಲ್ಲಿ ನಡೆದ ಎರಡನೇ ಮತ್ತು ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದ ನಾಲ್ಕನೇ ದಿನದಂದು ನ್ಯೂಜಿಲೆಂಡ್ ತಂಡವನ್ನು 372 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು. 540 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 167 ರನ್‌ಗಳಿಗೆ ಆಲೌಟ್ ಆಯಿತು. ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ತಂಡವನ್ನು 62 ರನ್‌ಗಳಿಗೆ ಆಲ್​ಔಟ್ ಮಾಡಿತು. ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್‌ಗೆ 276 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಕಾನ್ಪುರದಲ್ಲಿ ಉಭಯ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

ಮುಂಬೈ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್​ನಲ್ಲಿ ನಂಬರ್ ಒನ್ ತಂಡವಾಗಿ ಹೊರಹೊಮ್ಮಿದೆ. ಜೊತೆಗೆ ನ್ಯೂಜಿಲೆಂಡ್‌ನಿಂದ ಅಗ್ರ ಸ್ಥಾನವನ್ನು ಕಸಿದುಕೊಂಡಿದೆ. ಕಿವೀ ತಂಡವು ಜೂನ್ 2021 ರಲ್ಲಿ ಭಾರತದಿಂದ ಈ ಸ್ಥಾನಮಾನವನ್ನು ಕಸಿದುಕೊಂಡಿತು. ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಆದರೆ ಇದೀಗ ಟೀಂ ಇಂಡಿಯಾ ತಿರುಗೇಟು ನೀಡಿದೆ.

ಸರಣಿಗೂ ಮುನ್ನ ಇದೇ ಸ್ಥಿತಿ ಇತ್ತು
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸರಣಿ ಆರಂಭವಾದಾಗ ನ್ಯೂಜಿಲೆಂಡ್ 126 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿತ್ತು. ಅದೇ ಸಮಯದಲ್ಲಿ ಭಾರತ 119 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿತ್ತು. ಕಾನ್ಪುರ ಟೆಸ್ಟ್ ಡ್ರಾ ಆಗಿದ್ದರಿಂದ ಕಿವೀಸ್ ತಂಡ ಸರಣಿಯಲ್ಲಿ ಲಾಭ ಪಡೆದಿದೆ, ಆದರೆ ರೇಟಿಂಗ್‌ನಲ್ಲಿ ನಷ್ಟವಾಗಿದೆ. ಮುಂಬೈ ಟೆಸ್ಟ್‌ನಲ್ಲಿನ ಸೋಲಿನ ನಂತರ, ಅವರ ನಂಬರ್ ಒನ್‌ನಲ್ಲಿ ಉಳಿಯುವ ಭರವಸೆ ಕೊನೆಗೊಂಡಿತು. ಆಸ್ಟ್ರೇಲಿಯಾ ಪ್ರಸ್ತುತ 108 ರೇಟಿಂಗ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಇಂಗ್ಲೆಂಡ್ 107 ರೇಟಿಂಗ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಈ ಇಬ್ಬರಲ್ಲಿ ಯಾರು ಆಶಸ್ ಸರಣಿಯನ್ನು ತೆಗೆದುಕೊಳ್ಳುತ್ತಾರೋ ಅವರು ಶ್ರೇಯಾಂಕದಲ್ಲಿ ಮೇಲಕ್ಕೇರುತ್ತಾರೆ.

ಇದನ್ನೂ ಓದಿ:IND vs NZ: 89 ವರ್ಷಗಳ ಭಾರತ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಬರೆದ ಟೀಂ ಇಂಡಿಯಾ ಆರಂಭಿಕರು!

Published On - 10:47 am, Mon, 6 December 21