
2025 ರ ಏಷ್ಯಾಕಪ್ (Asia Cup 2025) ಪಂದ್ಯಗಳಿಂದ ಮಾತ್ರವಲ್ಲ, ವಿವಾದಗಳಿಂದಲೂ ಸುದ್ದಿಯಲ್ಲಿದೆ. ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಗುಂಪು ಹಂತದ ಪಂದ್ಯದ ಸಮಯದಲ್ಲಿ ಹುಟ್ಟಿಕೊಂಡಿದ್ದ ವಿವಾದ ಇಂದಿಗೂ ತಣ್ಣಗಾಗಿಲ್ಲ. ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನ ತಂಡದೊಂದಿಗೆ ಕೈಕುಲುಕಲು ನಿರಾಕರಿಸಿದ ಘಟನೆ ಪಾಕ್ ಕ್ರಿಕೆಟ್ನ ಅಸಮಾಧಾನಕ್ಕೆ ಕಾರಣವಾಯಿತು. ಈ ವಿವಾದ ಐಸಿಸಿ ಕದವನ್ನು ತಟ್ಟಿತು. ಇದು ಪಾಕಿಸ್ತಾನ ಮತ್ತು ಯುಎಇ ನಡುವಿನ ಪಂದ್ಯದ ಮೇಲೂ ಪರಿಣಾಮ ಬೀರಿತು. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೇಲೆ ಶಿಷ್ಟಾಚಾರ ಉಲ್ಲಂಘಿಸಿದ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಇದೆಲ್ಲದರ ನಡುವೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.
2025 ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದ ಸಮಯದಲ್ಲಿ ಹುಟ್ಟಿಕೊಂಡಿದ್ದ ವಿವಾದವನ್ನು ಕಡಿಮೆ ಮಾಡಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ಪತ್ರಿಕಾಗೋಷ್ಠಿಗಳಲ್ಲಿ ಪತ್ರಕರ್ತರು ರಾಜಕೀಯ ಕುರಿತ ಪ್ರಶ್ನೆಗಳನ್ನು ಕೇಳುವುದನ್ನು ನಿಷೇಧಿಸುವ ಹೊಸ ಮಾರ್ಗಸೂಚಿಗಳನ್ನು ಎಸಿಸಿ ಹೊರಡಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ಶಾಂತಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ ಹಾಗೂ ಪಾಕ್ ನಡುವಿನ ಹ್ಯಾಂಡ್‌ಶೇಕ್ ವಿವಾದದ ನಂತರ, ಭಾರತೀಯ ಪತ್ರಕರ್ತರು ಪತ್ರಿಕಾಗೋಷ್ಠಿಯಲ್ಲಿ ಪಂದ್ಯವನ್ನು ಹೊರತುಪಡಿಸಿ ರಾಜಕೀಯ ಸಂಬಂಧಿತ ಪ್ರಶ್ನೆಗಳನ್ನು ಎತ್ತಿದರು. ಇದು ಎಸಿಸಿಗೆ ಮುಜುಗರವನ್ನು ತಂದಿದೆ.
ಹೀಗಾಗಿ ಒಮಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಆದರೆ ಈ ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಎಸಿಸಿ ಮಾಧ್ಯಮ ಅಧಿಕಾರಿಯೊಬ್ಬರು ಭಾರತೀಯ ಪತ್ರಕರ್ತರು ಯಾವುದೇ ರಾಜಕೀಯ ಪ್ರಶ್ನೆಗಳನ್ನು ಕೇಳದಂತೆ ಸೂಚನೆ ನೀಡಿದ್ದರು ಎಂದು ವರದಿಯಾಗಿದೆ.
Asia Cup 2025: ಅಭ್ಯಾಸಕ್ಕೆ ಟೀಂ ಇಂಡಿಯಾದ 6 ಆಟಗಾರರು ಗೈರು; ತಂಡದಲ್ಲಿ ಎಷ್ಟು ಬದಲಾವಣೆ?
ಪಾಕಿಸ್ತಾನ ಮತ್ತು ಯುಎಇ ನಡುವಿನ ಪಂದ್ಯಕ್ಕೂ ಮೊದಲು ಪತ್ರಿಕಾಗೋಷ್ಠಿ ನಡೆದಿತ್ತು. ಆದರೆ, ಪಾಕಿಸ್ತಾನ ತಂಡದಿಂದ ಯಾರೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಐಸಿಸಿಯ ಹಿರಿಯ ಸದಸ್ಯರೊಬ್ಬರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮನೋಭಾವವನ್ನು ಪ್ರಶ್ನಿಸಿದ್ದಾರೆ. ಪಾಕಿಸ್ತಾನ ತಂಡವು ಅಭ್ಯಾಸ ಅವಧಿಗಳಲ್ಲಿ ಭಾಗವಹಿಸುತ್ತಿದ್ದರೂ ಕಡ್ಡಾಯ ಪತ್ರಿಕಾಗೋಷ್ಠಿಯಲ್ಲಿ ಏಕೆ ಭಾಗವಹಿಸಲಿಲ್ಲ ಎಂಬ ಪ್ರಶ್ನೆಯನ್ನು ಪಿಸಿಬಿ ಮುಂದಿಟ್ಟಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Fri, 19 September 25