- Kannada News Photo gallery Cricket photos Pakistan’s Asia Cup 2025 Boycott May Blow Huge Financial Loss
Asia Cup 2025: ಏಷ್ಯಾಕಪ್ ಬಹಿಷ್ಕರಿಸಿದರೆ ಪಾಕ್ ತಂಡಕ್ಕೆ ನೂರಾರು ಕೋಟಿ ನಷ್ಟ
Pakistan's Asia Cup 2025 Boycott Threat: 2025ರ ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ನಂತರದ ಕೈಕುಲುಕುವ ವಿವಾದದಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿಗೆ ದೂರು ನೀಡಿ, ಮ್ಯಾಚ್ ರೆಫರಿಯನ್ನು ತೆಗೆದುಹಾಕುವಂತೆ ಬೆದರಿಕೆ ಹಾಕಿದೆ. ಪಿಸಿಬಿಯ ಈ ಕ್ರಮದಿಂದ ಏಷ್ಯಾಕಪ್‌ನ ಭವಿಷ್ಯ ಅನಿಶ್ಚಿತವಾಗಿದೆ. ಪಂದ್ಯ ಬಹಿಷ್ಕಾರದಿಂದ ಪಿಸಿಬಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ. ಐಸಿಸಿ ಪಿಸಿಬಿಯ ದೂರನ್ನು ತಿರಸ್ಕರಿಸಿದೆ.
Updated on:Sep 17, 2025 | 5:39 PM

20225 ರ ಏಷ್ಯಾಕಪ್‌ನಲ್ಲಿ ಹ್ಯಾಂಡ್‌ಶೇಕ್ ವಿವಾದ ಸಖತ್ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದಿನಕ್ಕೊಂದು ಹೇಳಿಕೆಗಳು. ಈ ವಿವಾದ ಬಗ್ಗೆ ಮೊದಲು ಟೀಂ ಇಂಡಿಯಾ ವಿರುದ್ಧ ಐಸಿಸಿಗೆ ದೂರು ನೀಡಿದ್ದ ಪಿಸಿಬಿ ಆ ಬಳಿಕ ಮ್ಯಾಚ್ ರೆಫರಿಯನ್ನು ಟೂರ್ನಿಯಿಂದ ಹೊರಹಾಕುವಂತೆ ಬೆದರಿಕೆ ಹಾಕಿತ್ತು. ಐಸಿಸಿ ನಮ್ಮ ಮನವಿಯನ್ನು ತಿರಸ್ಕರಿಸಿದರೆ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಹೇಳಿತ್ತು.

ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಾಸ್ ಸಮಯದಲ್ಲಿ ಮತ್ತು ಪಂದ್ಯದ ನಂತರ, ಎರಡೂ ತಂಡಗಳ ನಾಯಕರು ಮತ್ತು ಆಟಗಾರರು ಪರಸ್ಪರ ಕೈಕುಲುಕಲಿಲ್ಲ. ಇದರ ಬಗ್ಗೆ, ಪಾಕಿಸ್ತಾನ ತಂಡವು ಮೊದಲು ಮ್ಯಾಚ್ ರೆಫರಿ ಪೈಕ್ರಾಫ್ಟ್ ಅವರ ಬಳಿ ಟೀಂ ಇಂಡಿಯಾ ಬಗ್ಗೆ ದೂರು ನೀಡಿತ್ತು.

ಆದರೆ ಮರುದಿನ ಪಾಕಿಸ್ತಾನ ಮಂಡಳಿಯು ಪೈಕ್ರಾಫ್ಟ್ ಬಗ್ಗೆಯೇ ನೇರವಾಗಿ ಐಸಿಸಿಗೆ ದೂರು ನೀಡಿತ್ತು. ಟಾಸ್‌ಗೂ ಮೊದಲು ಪೈಕ್ರಾಫ್ಟ್ ಇಬ್ಬರು ನಾಯಕರನ್ನು ಕೈಕುಲುಕದಂತೆ ಕೇಳಿಕೊಂಡಿದ್ದು, ಇದು ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ಆಟದ ಮನೋಭಾವದ ಉಲ್ಲಂಘನೆಯಾಗಿದೆ ಎಂದು ಪಾಕಿಸ್ತಾನ ಆರೋಪಿಸಿತ್ತು.

ವರದಿಗಳ ಪ್ರಕಾರ, ಪಿಸಿಬಿ ಪೈಕ್ರಾಫ್ಟ್ ಅವರನ್ನು ತಮ್ಮ ತಂಡದ ಪಂದ್ಯಗಳಿಂದ ತೆಗೆದುಹಾಕುವಂತೆ ಐಸಿಸಿಗೆ ದೂರು ನೀಡಿದ್ದು, ಇದನ್ನು ಮಾಡದಿದ್ದರೆ ಪಂದ್ಯವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತ್ತು. ಆದರೆ ಪಾಕ್ ಮಂಡಳಿಯ ಆರೋಪವನ್ನು ತಳ್ಳಿಹಾಕಿರುವ ಐಸಿಸಿ, ರೆಫರಿಯನ್ನು ತೆಗೆದುಹಾಕಲು ನಿರಾಕರಿಸಿತ್ತು. ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಮಾನಕ್ಕೀಡಾಗಿರುವ ಪಿಸಿಬಿ ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿರ್ಧಾರಕ್ಕೆ ಅಂಟಿಕೊಳ್ಳುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ?

ವಾಸ್ತವವಾಗಿ ಗುಂಪು ಹಂತದಲ್ಲಿ ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಯುಎಇ ವಿರುದ್ಧ ಆಡಲಿದೆ. ಆ ಪಂದ್ಯಕ್ಕೆ ಪೈಕ್ರಾಫ್ಟ್ ಮ್ಯಾಚ್ ರೆಫರಿ ಆಗಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ, ಸೂಪರ್ -4 ಹಂತವನ್ನು ತಲುಪುತ್ತದೆ. ಒಂದು ವೇಳೆ ಸೋತರೆ ಪಂದ್ಯಾವಳಿಯಿಂದ ಹೊರಗುಳಿಯುತ್ತದೆ.

ಸೋತು ಪಂದ್ಯಾವಳಿಯಿಂದ ಹೊರಗುಳಿಯುವುದಕ್ಕೂ, ಆಡದೆಯೇ ಬಹಿಷ್ಕಾರದ ಮೂಲಕ ಹೊರಗುಳಿಯುವುದಕ್ಕೂ ವ್ಯತ್ಯಾಸವಿದೆ . ಈ ವ್ಯತ್ಯಾಸವು ಪಿಸಿಬಿಯ ಗಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಪಿಟಿಐ ವರದಿಯ ಪ್ರಕಾರ, ಎಸಿಸಿ ಪ್ರಸಾರ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ಈ ಏಷ್ಯಾಕಪ್‌ನಿಂದ ಸರಿಸುಮಾರು 141 ಕೋಟಿ ರೂ. ಆದಾಯ ಹರಿದುಬರಲಿದೆ. ಆದರೆ ಮಧ್ಯದಲ್ಲಿ ಪಂದ್ಯಾವಳಿಯಿಂದ ಹಿಂದೆ ಸರಿದರೆ, ಈ ಆದಾಯಕ್ಕೆ ಕತ್ತರಿ ಬೀಳಲಿದೆ.

ಇಷ್ಟೇ ಅಲ್ಲ, ಪಂದ್ಯಾವಳಿಯ ಪ್ರಸಾರಕ ಸೋನಿ ಸ್ಪೋರ್ಟ್ಸ್, ಪಾಕಿಸ್ತಾನ ತಂಡವು ಪಂದ್ಯಗಳನ್ನು ಆಡದಿದ್ದರೆ ಪ್ರಸಾರಕರ ಗಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣ ನೀಡಿ, ಒಪ್ಪಂದದ ಪ್ರಕಾರ ACC ಗೆ ಸಂಪೂರ್ಣ ಮೊತ್ತವನ್ನು ಪಾವತಿಸಲು ನಿರಾಕರಿಸಬಹುದು. ಇದೆಲ್ಲದರ ಜೊತೆಗೆ ACC ಯ ಪ್ರಸ್ತುತ ಅಧ್ಯಕ್ಷರು PCB ಮುಖ್ಯಸ್ಥ ಮತ್ತು ಪಾಕಿಸ್ತಾನ ಸರ್ಕಾರದ ಸಚಿವ ಮೊಹ್ಸಿನ್ ನಖ್ವಿ ಆಗಿರುವುದರಿಂದ ಅವರ ಅಧಿಕಾರಾವಧಿಯಲ್ಲಿ ACC ಮತ್ತು PCB ಗಳಿಕೆಯ ಮೇಲಿನ ಪರಿಣಾಮವು ಅವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.
Published On - 5:39 pm, Wed, 17 September 25
