IND vs SA: ಎರಡಂಕಿ ಮೊತ್ತಕ್ಕೆ ಆಫ್ರಿಕಾ ಆಲೌಟ್; ಭಾರತಕ್ಕೆ ಭಾರಿ ಅಂತರದ ಜಯ

India vs South Africa 1st T20: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 101 ರನ್‌ಗಳ ಭಾರಿ ಜಯ ಸಾಧಿಸಿದೆ. ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾವನ್ನು ಕೇವಲ 74 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ ತಂಡ ಹೊಸ ದಾಖಲೆ ಬರೆಯಿತು. ಹಾರ್ದಿಕ್ ಪಾಂಡ್ಯ ಅರ್ಧಶತಕ ಹಾಗೂ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

IND vs SA: ಎರಡಂಕಿ ಮೊತ್ತಕ್ಕೆ ಆಫ್ರಿಕಾ ಆಲೌಟ್; ಭಾರತಕ್ಕೆ ಭಾರಿ ಅಂತರದ ಜಯ
Team India

Updated on: Dec 09, 2025 | 10:25 PM

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಟೀಂ ಇಂಡಿಯಾ (India vs South Africa) ಗೆಲುವಿನ ಆರಂಭ ಪಡೆದುಕೊಂಡಿದೆ. ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 74 ರನ್​ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ 101 ರನ್​ಗಳ ಭಾರಿ ಅಂತರದ ಜಯ ಸಾಧಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆಗೆ ಕೊರಳೊಡ್ಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 175 ರನ್ ಕಲೆಹಾಕಿತು. ಬ್ಯಾಟಿಂಗ್​ನಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಅರ್ಧಶತಕದ ಇನ್ನಿಂಗ್ಸ್ ಅಡಿದರೆ, ಬೌಲಿಂಗ್​ನಲ್ಲೂ 1 ವಿಕೆಟ್ ಪಡೆದರು.

ಹಾರ್ದಿಕ್ ಆಲ್​ರೌಂಡರ್ ಪ್ರದರ್ಶನ

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ ಮಾಡಿದ ಭಾರತದ ಪರ ಹಾರ್ದಿಕ್ ಪಾಂಡ್ಯ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹಾರ್ದಿಕ್ 28 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 59 ರನ್ ಗಳಿಸಿದರು. ತಿಲಕ್ ವರ್ಮಾ 26 ಮತ್ತು ಅಕ್ಷರ್ ಪಟೇಲ್ 23 ರನ್​ಗಳ ಕಾಣಿಕೆ ನೀಡಿದರು. ಉಳಿದಂತೆ ತಂಡದ ಪರ ಯಾವ ಬ್ಯಾಟ್ಸ್​ಮನ್ ಕೂಡ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಇತ್ತ ದಕ್ಷಿಣ ಆಫ್ರಿಕಾ ಪರ ಬೌಲಿಂಗ್​ನಲ್ಲಿ ಮಿಂಚಿದ ಲುಂಗಿ ಎನ್‌ಗಿಡಿ ಮೂರು ವಿಕೆಟ್ ಪಡೆದರೆ, ಲುಥೋ ಸಿಪಾಮ್ಲಾ ಎರಡು ವಿಕೆಟ್ ಪಡೆದರು.

ಆಫ್ರಿಕಾದ ಪೆವಿಲಿಯನ್ ಪರೇಡ್

ಇದಕ್ಕೆ ಉತ್ತರವಾಗಿ 176 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು. ತಂಡದ ಯಾವ ಬ್ಯಾಟ್ಸ್​ಮನ್​ಗೂ ಟೀಂ ಇಂಡಿಯಾ ಬೌಲಿಂಗ್​ ಮುಂದೆ ನೆಲಕಚ್ಚಿ ಆಡಲು ಸಾಧ್ಯವಾಗಲಿಲ್ಲ. ಆಫ್ರಿಕಾ ಪರ ಡೆವಾಲ್ಡ್ ಬ್ರೆವಿಸ್ 22 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ತಂಡದ ಉಳಿದ ಏಳು ಆಟಗಾರರು 10 ರನ್ ಗಳಿಸಲು ಸಹ ವಿಫಲರಾದರು. ಭಾರತದ ಪರ ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.

IND vs SA: ಟಿ20ಯಲ್ಲಿ ಸಿಕ್ಸರ್‌ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ; ವಿಡಿಯೋ

ಮೂವರು ಭಾರತೀಯರ ದಾಖಲೆ

ಇನ್ನು ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 101 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹಾಗೆಯೇ ಟೀಂ ಇಂಡಿಯಾ 100 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಅಂತರದಿಂದ ಟಿ20 ಪಂದ್ಯ ಗೆದ್ದಿರುವುದು ಇದು ಒಂಬತ್ತನೇ ಬಾರಿ. ಇದು ಮಾತ್ರವಲ್ಲದೆ ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 100 ಸಿಕ್ಸರ್​ಗಳ ಮೈಲಿಗಲ್ಲು ದಾಟಿದರೆ, ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್​ಗಳನ್ನು ಪೂರೈಸಿದರು. ಹಾಗೆಯೇ ಯುವ ಬ್ಯಾಟ್ಸ್​ಮನ್ ತಿಲಕ್ ವರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 1000 ರನ್ ಪೂರೈಸಿದ ಅತಿ ಕಿರಿಯ ಬ್ಯಾಟ್ಸ್​ಮನ್ ಎಂಬ ದಾಖಲೆ ನಿರ್ಮಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 pm, Tue, 9 December 25