ಮುಂಬರುವ ಏಷ್ಯಾಕಪ್ಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 17 ಸದಸ್ಯರ ಈ ತಂಡದಲ್ಲಿ ಕೆಲ ಸ್ಟಾರ್ ಆಟಗಾರರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅದರಲ್ಲೂ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಸ್ಪಿನ್ ಮೋಡಿಗಾರ ಯುಜ್ವೇಂದ್ರ ಚಹಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.
ಈ ಹಿಂದೆ ಅಶ್ವಿನ್ ಅವರನ್ನು ಆಯ್ಕೆ ಮಾಡಿದರೆ ಚಹಲ್ ಹೊರಗುಳಿಯಲಿದ್ದಾರೆ. ಹಾಗೆಯೇ ಚಹಲ್ ಸ್ಥಾನ ಪಡೆದರೆ ಅಶ್ವಿನ್ ಹೊರಬೀಳುವುದು ಖಚಿತ ಎನ್ನಲಾಗಿತ್ತು. ಆದರೀಗ ಇಬ್ಬರು ಸ್ಪಿನ್ನರ್ಗಳೂ ಕೂಡ ತಂಡದಿಂದ ಹೊರಬಿದ್ದಿದ್ದಾರೆ.
17 ಸದಸ್ಯರ ತಂಡದಲ್ಲಿ ಪರಿಪೂರ್ಣ ಸ್ಪಿನ್ನರ್ ಆಗಿ ಸ್ಥಾನ ಪಡೆದಿರುವುದು ಕುಲ್ದೀಪ್ ಯಾದವ್ ಮಾತ್ರ. ಇನ್ನು ಸ್ಪಿನ್ ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ತಂಡದಲ್ಲಿದ್ದಾರೆ. ಇದೇ ಕಾರಣದಿಂದಾಗಿ ಅಶ್ವಿನ್ ಹಾಗೂ ಚಹಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಅಂದರೆ ಟೀಮ್ ಇಂಡಿಯಾ ಮೂವರು ಸ್ಪಿನ್ನರ್ ಹಾಗೂ ಆರು ವೇಗಿಗಳೊಂದಿಗೆ ಏಷ್ಯಾಕಪ್ಗಾಗಿ ಸಜ್ಜಾಗಲಿದೆ. ಇವರಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.
ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗುವುದರೊಂದಿಗೆ ರವಿಚಂದ್ರನ್ ಅಶ್ವಿನ್ ಹಾಗೂ ಯುಜ್ವೇಂದ್ರ ಚಹಲ್ ಅವರ ವಿಶ್ವಕಪ್ ಕನಸು ಬಹುತೇಕ ಕಮರಿದೆ ಎನ್ನಬಹುದು. ಏಕೆಂದರೆ ಏಷ್ಯನ್ ಟೂರ್ನಿಯಲ್ಲಿ ಕುಲ್ದೀಪ್ ಯಾದವ್ ಮಿಂಚಿದರೆ, ವಿಶ್ವಕಪ್ಗೂ ಆಯ್ಕೆಯಾಗಲಿದ್ದಾರೆ. ಹಾಗೆಯೇ ಅಕ್ಷರ್ ಪಟೇಲ್ ಆಲ್ರೌಂಡರ್ ಆಗಿರುವ ಕಾರಣ ವಿಶ್ವಕಪ್ಗೂ ಮುಂದುವರೆಸುವ ಸಾಧ್ಯತೆ ಹೆಚ್ಚು. ಹೀಗಾಗಿ ಮುಂಬರುವ ವಿಶ್ವಕಪ್ ತಂಡದಲ್ಲೂ ಅಶ್ವಿನ್ ಹಾಗೂ ಚಹಲ್ಗೆ ಚಾನ್ಸ್ ಸಿಗುವುದು ಅನುಮಾನ.
ಟೀಮ್ ಇಂಡಿಯಾ ಪರ 113 ಏಕದಿನ ಪಂದ್ಯಗಳನ್ನಾಡಿರುವ ಅಶ್ವಿನ್ ಒಟ್ಟು 151 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ ಪ್ರತಿ ಓವರ್ಗೆ ನೀಡಿದ ರನ್ ಸರಾಸರಿ ಕೇವಲ 4.94 ಮಾತ್ರ. ಹಾಗೆಯೇ 10 ಓವರ್ಗಳ ಲೆಕ್ಕಾಚಾರ ತೆಗೆದುಕೊಂಡರೆ 33.5 ಸರಾಸರಿಯಲ್ಲಿ ರನ್ ನೀಡಿದ್ದಾರೆ. ಇದಲ್ಲದೆ 63 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅಶ್ವಿನ್ 707 ರನ್ ಬಾರಿಸಿದ್ದಾರೆ.
72 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಬೌಲಿಂಗ್ ಮಾಡಿರುವ ಯುಜ್ವೇಂದ್ರ ಚಹಲ್ ಒಟ್ಟು 121 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ 3739 ಎಸೆತಗಳನ್ನು ಎಸೆದಿರುವ ಚಹಲ್ 3283 ರನ್ಗಳನ್ನು ನೀಡಿದ್ದರು. ಅಂದರೆ ಪ್ರತಿ ಓವರ್ ರನ್ ಸರಾಸರಿಯ 5.27.
ಇದನ್ನೂ ಓದಿ: ಸ್ಪೋಟಕ ಬ್ಯಾಟಿಂಗ್ ಮೂಲಕ ದಾಖಲೆ ಬರೆದ ರಿಂಕು ಸಿಂಗ್
ಏಷ್ಯಾಕಪ್ಗೆ ಆಯ್ಕೆಯಾದ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
Published On - 3:14 pm, Mon, 21 August 23