ಜಿಂಬಾಬ್ವೆ ವಿರುದ್ದದ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು (Team India) ಘೋಷಿಸಲಾಗಿದೆ. ಆಗಸ್ಟ್ 18 ರಿಂದ ಶುರುವಾಗಲಿರುವ ಈ ಸರಣಿಯಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಅಂದರೆ ನಾಯಕ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli), ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಸ್ಟಾರ್ ಆಟಗಾರರು ಈ ಸರಣಿ ಆಡುತ್ತಿಲ್ಲ. ಹೀಗಾಗಿಯೇ ಒಂದಷ್ಟು ಯುವ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದರಲ್ಲೂ ಕೆಲ ತಿಂಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಕೆಲ ಆಟಗಾರರು ಇದೀಗ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.
ಅವರಲ್ಲಿ ಪ್ರಮುಖರೆಂದರೆ ವೇಗಿ ದೀಪಕ್ ಚಹರ್ ಹಾಗೂ ವಾಷಿಂಗ್ಟನ್ ಸುಂದರ್. ಐಪಿಎಲ್ಗೂ ಮುನ್ನ ಗಾಯಗೊಂಡಿದ್ದ ದೀಪಕ್ ಚಹರ್ ಆ ಬಳಿಕ ಒಂದೇ ಒಂದು ಪಂದ್ಯವಾಡಿಲ್ಲ. ಇದೀಗ ಜಿಂಬಾಬ್ವೆ ವಿರುದ್ದದ ಸರಣಿಯ ಮೂಲಕ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಇನ್ನು ಗಾಯದ ಕಾರಣ ತಂಡದಿಂದ ಹೊರಬಿದ್ದ ಬಳಿಕ ಕಂಬ್ಯಾಕ್ ಅನ್ನು ಎದುರು ನೋಡುತ್ತಿದ್ದ ವಾಷಿಂಗ್ಟನ್ ಸುಂದರ್ ಇತ್ತೀಚೆಗೆ ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪ್ರಮುಖ ಆಟಗಾರರ ಅಲಭ್ಯತೆಯ ಕಾರಣ ಸುಂದರ್ಗೂ ಟೀಮ್ ಇಂಡಿಯಾದಲ್ಲಿ ಚಾನ್ಸ್ ಲಭಿಸಿದೆ.
ಇನ್ನು ಜಿಂಬಾಬ್ವೆ ವಿರುದ್ದದ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ನಾಲ್ವರು ಬ್ಯಾಟ್ಸ್ಮನ್ಗಳಿದ್ದರೆ, ಇಬ್ಬರು ವಿಕೆಟ್ ಕೀಪರ್ ಬ್ಯಾಟರ್ಗಳಿದ್ದಾರೆ. ಹಾಗೆಯೇ ಆಲ್ರೌಂಡರ್ ಪಟ್ಟಿಯಲ್ಲಿ 5 ಆಟಗಾರರು ಸ್ಥಾನ ಪಡೆದಿದ್ದಾರೆ. ಇದಲ್ಲದೆ ಬೌಲರ್ಗಳ ಪಟ್ಟಿಯಲ್ಲಿ ಮೂವರು ವೇಗಿಗಳಿದ್ದರೆ, ಏಕೈಕ ಸ್ಪಿನ್ನರ್ ಸ್ಥಾನ ಪಡೆದಿದ್ದಾರೆ.
ಅಂದರೆ ಇಲ್ಲಿ ಆಯ್ಕೆ ಸಮಿತಿ ಆಲ್ರೌಂಡರ್ಗಳ ಮೂಲಕ ಸ್ಪಿನ್ ವಿಭಾಗವನ್ನು ಸಮತೋಲನಗೊಳಿಸಲು ಮುಂದಾಗಿರುವುದು ಸ್ಪಷ್ಟ. ಏಕೆಂದರೆ ತಂಡದಲ್ಲಿ ಆಲ್ರೌಂಡರ್ಗಳಾಗಿ ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಇದ್ದಾರೆ. ಈ ಐವರಲ್ಲಿ ಹೂಡಾ, ಸುಂದರ್ ಹಾಗೂ ಅಕ್ಷರ್ ಪಟೇಲ್ ಸ್ಪಿನ್ ಆಲ್ರೌಂಡರ್ಗಳೆಂಬುದು ವಿಶೇಷ.
ಹೀಗಾಗಿಯೇ ಸ್ಪಿನ್ನರ್ ಆಗಿ ಕೇವಲ ಕುಲ್ದೀಪ್ ಯಾದವ್ ಅವರನ್ನು ಮಾತ್ರ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್ ಹಾಗೂ ರವಿ ಬಿಷ್ಣೋಯ್ ಅವರನ್ನು ಸ್ಪಿನ್ನರ್ಗಳಾಗಿ ಆಯ್ಕೆ ಮಾಡಲಾಗಿತ್ತು. ಈ ಬಾರಿ ಹೆಚ್ಚಿನ ಸ್ಪಿನ್ ಆಲ್ರೌಂಡರ್ಗಳಿಗೆ ಮಣೆ ಹಾಕಲಾಗಿದೆ.
ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಾದ ರಿಷಭ್ ಪಂತ್, ಕೆಎಲ್ ರಾಹುಲ್ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಜಿಂಬಾಬ್ವೆ ವಿರುದ್ದದ ಸರಣಿಯಲ್ಲಿ ಕೀಪರ್ ಬ್ಯಾಟ್ಸ್ಮನ್ಗಳಾಗಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಹಾಗೆಯೇ ಕೇವಲ ಬ್ಯಾಟ್ಸ್ಮನ್ಗಳಾಗಿ ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ ಸ್ಥಾನ ಪಡೆದಿದ್ದಾರೆ. ವೇಗಿಗಳಾಗಿ ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ಇದ್ದಾರೆ. ಇವರ ಜೊತೆ ಆಲ್ರೌಂಡರ್ ವೇಗದ ಬೌಲರ್ಗಳಾಗಿ ದೀಪಕ್ ಚಹರ್ ಹಾಗೂ ಶಾರ್ದೂಲ್ ಠಾಕೂರ್ ತಂಡದಲ್ಲಿದ್ದಾರೆ. ಒಟ್ಟಿನಲ್ಲಿ ಉತ್ತಮ ಆಲ್ರೌಂಡರ್ಗಳನ್ನು ಒಳಗೊಂಡ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಮಾಡಿದೆ ಎನ್ನಬಹುದು.
ಅಂದಹಾಗೆ ಜಿಂಬಾಬ್ವೆ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 18 ರಿಂದ ಶುರುವಾಗಲಿದ್ದು, ಆಗಸ್ಟ್ 22 ಕ್ಕೆ ಅಂತ್ಯಗೊಳ್ಳಲಿದೆ. ವಿಶೇಷ ಎಂದರೆ 2018 ರ ಬಳಿಕ ಟೀಮ್ ಇಂಡಿಯಾ ಇದೇ ಮೊದಲ ಬಾರಿ ಜಿಂಬಾಬ್ವೆ ವಿರುದ್ಧ ಸರಣಿ ಆಡುತ್ತಿದ್ದು, ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಶಿಖರ್ ಧವನ್ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ವಿಂಡೀಸ್ ವಿರುದ್ದದ 3 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮೂಲಕ ಗೆದ್ದುಕೊಂಡಿತು. ಇದೀಗ ನಾಯಕ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಧವನ್ ಮತ್ತೆ ಟೀಮ್ ಇಂಡಿಯಾ ಯುವಪಡೆಯ ಮುಂದಾಳತ್ವವನ್ನು ವಹಿಸಿಕೊಂಡಿದ್ದಾರೆ.
ಜಿಂಬಾಬ್ವೆ ವಿರುದ್ದದ ಏಕದಿನ ಸರಣಿಗೆ ಟೀಮ್ ಇಂಡಿಯಾ ಹೀಗಿದೆ:
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹರ್.