ಶ್ರೀಲಂಕಾ ವಿರುದ್ದದ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮೂರು ಟಿ20 ಮತ್ತು ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಅಲ್ಲದೆ ಈ ಸರಣಿಯ ಮೂಲಕ ರೋಹಿತ್ ಶರ್ಮಾ ಭಾರತ ತಂಡದ ನೂತನ ಟೆಸ್ಟ್ ನಾಯಕರಾಗಲಿದ್ದಾರೆ. ಇನ್ನು ಈ ಸರಣಿಗಾಗಿ ಭಾರತ ಟೆಸ್ಟ್ ಮತ್ತು ಟಿ20 ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಕೆಲ ಹಿರಿಯ ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದ್ದು, ಮತ್ತೆ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಹೊಸ ಮುಖ ಕೂಡ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ನೂತನ ಟೀಮ್ ಇಂಡಿಯಾದಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ…
ಹೊಸ ನಾಯಕ:
ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದರು. ಇದೀಗ ಕೊಹ್ಲಿಯ ಸ್ಥಾನಕ್ಕೆ ಹಿಟ್ಮ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ.
ನಾಲ್ವರು ಔಟ್:
ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಮತ್ತು ವೃದ್ಧಿಮಾನ್ ಸಹಾ ಅವರನ್ನು ಭಾರತ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ.
ಕಂಬ್ಯಾಕ್:
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ವಾಪಸಾಗಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯಿಂದ ಈ ಇಬ್ಬರು ಆಟಗಾರರು ಹೊರಗುಳಿದಿದ್ದರು. ಇದೀಗ ವಿಶ್ರಾಂತಿಯ ಬಳಿಕ ಬುಮ್ರಾ ಮರಳಿದ್ದು, ಹಾಗೆಯೇ ಜಡೇಜಾ ಗಾಯದಿಂದ ಚೇತರಿಸಿಕೊಂಡಿದ್ದಾರೆ.
ಇನ್ನು ಈ ಸರಣಿಯ ಮೂಲಕ ಕುಲದೀಪ್ ಯಾದವ್ ಸುಮಾರು ಒಂದು ವರ್ಷದ ನಂತರ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಜನವರಿ 2021 ರಲ್ಲಿ ಕೊನೆಯ ಬಾರಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಭಾಗವಾಗಿದ್ದರು.
ಸಂಜು ಸ್ಯಾಮ್ಸನ್ ಕೂಡ ಮತ್ತೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. 2019 ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಯಾಮ್ಸನ್ ಇದೀಗ ಮತ್ತೆ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ.
ಗಾಯಾಳು:
ಶ್ರೀಲಂಕಾ ವಿರುದ್ಧದ ಸರಣಿಯಿಂದ ಕೆಎಲ್ ರಾಹುಲ್ ಮತ್ತು ವಾಷಿಂಗ್ಟನ್ ಸುಂದರ್ ಹೊರಗುಳಿದಿದ್ದಾರೆ. ಗಾಯದ ಕಾರಣ ಈ ಇಬ್ಬರು ಆಟಗಾರರನ್ನು ಆಯ್ಕೆಗೆ ಪರಿಗಣಿಸಿಲ್ಲ.
ವಿಶ್ರಾಂತಿ:
ಈ ಸರಣಿಯಿಂದ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗೆಯೇ ಟಿ20 ಸರಣಿಯ ವೇಳೆ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ಗೆ ವಿಶ್ರಾಂತಿ ಕಲ್ಪಿಸಲಾಗಿದೆ. ಈ ಇಬ್ಬರು ಆಟಗಾರರು ಟೆಸ್ಟ್ಗೆ ವಾಪಾಸಾಗಲಿದ್ದಾರೆ.
ಹೊಸ ಮುಖ:
ಸೌರಭ್ ಕುಮಾರ್ ಹೆಸರಿನ ಯುವ ಆಟಗಾರ ಭಾರತ ತಂಡದಲ್ಲಿ ಚೊಚ್ಚಲ ಬಾರಿ ಅವಕಾಶ ಪಡೆದಿದ್ದಾರೆ. ಉತ್ತರ ಪ್ರದೇಶದ ಎಡಗೈ ಸ್ಪಿನ್ ಬೌಲರ್ ಆಗಿರುವ ಸೌರಭ್ ಶ್ರೀಲಂಕಾ ವಿರುದ್ದದ ಸರಣಿಯ ಮೂಲಕ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದಾರೆ.
ಶ್ರೀಲಂಕಾ ಸರಣಿಗೆ ಭಾರತ ತಂಡ ಹೀಗಿದೆ:
ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ರವಿ ಬಿಷ್ಣೋಯ್, ಅವೇಶ್ ಖಾನ್
ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್, ಶುಭ್ಮನ್ ಗಿಲ್, ಕೆಎಸ್ ಭರತ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ , ಉಮೇಶ್ ಯಾದವ್, ಸೌರಭ್ ಕುಮಾರ್
ಶ್ರೀಲಂಕಾ ವಿರುದ್ದದ ಸರಣಿಯ ವೇಳಾಪಟ್ಟಿ ಹೀಗಿದೆ:
1ನೇ ಟಿ20: ಫೆಬ್ರವರಿ 24 (ಲಕ್ನೋ)
ಎರಡನೇ ಟಿ20: ಫೆಬ್ರವರಿ 26 (ಧರ್ಮಶಾಲಾ)
ಮೂರನೇ ಟಿ20: ಫೆಬ್ರವರಿ 27 (ಧರ್ಮಶಾಲಾ)
1ನೇ ಟೆಸ್ಟ್: 4 ರಿಂದ 8 ಮಾರ್ಚ್ (ಮೊಹಾಲಿ)
2ನೇ ಟೆಸ್ಟ್ (ಹಗಲು-ರಾತ್ರಿ): ಮಾರ್ಚ್ 12-16 (ಬೆಂಗಳೂರು)