Team India New Jersey for T20 World Cup 2022: ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ (Team India) ಘೋಷಣೆಯ ಬೆನ್ನಲ್ಲೇ ಇದೀಗ ಬಿಸಿಸಿಐ (BCCI) ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲು ಮುಂದಾಗಿದೆ. ಅಂದರೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಹೊಸ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಭಾರತ ತಂಡದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಧರಿಸುವ ಜೆರ್ಸಿಯನ್ನು ಶೀಘ್ರದಲ್ಲೇ ಅನವಾರಣಗೊಳಿಸುವುದಾಗಿ ವಿಡಿಯೋ ಮೂಲಕ ತಿಳಿಸಲಾಗಿದೆ.
ಈ ವಿಡಿಯೋದಲ್ಲಿ ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದು, ಟೀಮ್ ಇಂಡಿಯಾದ ಅಧಿಕೃತ ಕಿಟ್ ಪ್ರಾಯೋಜಕ MPL ನ ವೆಬ್‌ಸೈಟ್‌ಗೆ ಭೇಟಿ ನೀಡಲು ಮತ್ತು ಇತರೆ ಇನ್‌ಪುಟ್‌ಗಳನ್ನು ಪಡೆದುಕೊಳ್ಳುವಂತೆ ಈ ವಿಡಿಯೋದಲ್ಲಿ ಅಭಿಮಾನಿಗಳಿಗೆ ಮನವಿ ಮಾಡಲಾಗಿದೆ.
ಹಾಗೆಯೇ ವಿಶೇಷ ವಿಡಿಯೋದಲ್ಲಿ ಅಭಿಮಾನಿಗಳೇ ನೀವು ನಮ್ಮನ್ನು ಇಂದು ಕ್ರಿಕೆಟಿಗರನ್ನಾಗಿ ಮಾಡಿದ್ದೀರಿ ಎಂದು ರೋಹಿತ್ ಶರ್ಮಾ ಹೇಳಿದರೆ, ನಿಮ್ಮ ಬೆಂಬಲವಿಲ್ಲದೆ ಆಟವು ಪರಿಪೂರ್ಣವಾಗಿರಲ್ಲ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಹಾಗೆಯೇ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಟೀಮ್ ಇಂಡಿಯಾದ ಹೊಸ ಜೆರ್ಸಿಯ ಭಾಗವಾಗಿರಿ ಎಂದು ಹಾರ್ದಿಕ್ ಪಾಂಡ್ಯ ಈ ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ.
ವಿಶೇಷ ಎಂದರೆ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಟ್ರ್ಯಾಕ್ ಸೂಟ್ ಧರಿಸಿದ್ದಾರೆ. ಇದೇ ವೇಳೆ ಇಬ್ಬರು ತಿಳಿ ನೀಲಿ ಬಣ್ಣದ ಜೆರ್ಸಿಯನ್ನು ಧರಿಸಿರುವುದು ಸ್ಪಷ್ಟವಾಗಿ ಕಾಣಸಿಗುತ್ತದೆ. ಅಂದರೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಹಳೆಯ ಮಾದರಿಯ ತಿಳಿ ನೀಲಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಕಳೆದ ಟಿ20 ವಿಶ್ವಕಪ್ನಿಂದ ಟೀಮ್ ಇಂಡಿಯಾ ಕಡು ನೀಲಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಆದರೆ ಆ ಜೆರ್ಸಿಯು ನಿರೀಕ್ಷಿತ ಮಟ್ಟದಲ್ಲಿ ಅಭಿಮಾನಿಗಳನ್ನು ಸೆಳೆದಿರಲಿಲ್ಲ. ಇದೀಗ ಹಳೆಯ ಆಕಾಶ ನೀಲಿ ಜೆರ್ಸಿಯಲ್ಲೇ ಮತ್ತೆ ಟೀಮ್ ಇಂಡಿಯಾ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.
ಈ ಬಾರಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಈ ಟೂರ್ನಿಯು ಅಕ್ಟೋಬರ್ 16 ರಿಂದ ಶುರುವಾಗಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧ ಸೀಮಿತ ಓವರ್ಗಳ ಸರಣಿ ಆಡಲಿದೆ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.
Published On - 4:34 pm, Tue, 13 September 22