
ಹಾಲಿ ಚಾಂಪಿಯನ್ ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪುತ್ತದೆಯೇ ಅಥವಾ ಇಲ್ಲವೇ? ಎಂಬುದು ಮಾರ್ಚ್ 1 ರ ಭಾನುವಾರದಂದು ನಿರ್ಧರವಾಗಲಿದೆ. ಮಾರ್ಚ್ 1 ರಂದು ಸೂಪರ್ 8 ಸುತ್ತಿನಲ್ಲಿ ಟೀಂ ಇಂಡಿಯಾ ತನ್ನ ಮೂರನೇ ಮತ್ತು ಅಂತಿಮ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ, ಎರಡು ಬಾರಿ ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ. ಸೂಪರ್ 8 ಸುತ್ತಿನಲ್ಲಿ ವೆಸ್ಟ್ ಇಂಡೀಸ್‌ಗೂ ಇದು ಮೂರನೇ ಪಂದ್ಯವಾಗಿದೆ. ಹೀಗಾಗಿ ಎರಡೂ ತಂಡಗಳಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿದೆ. ಅಂದರೆ ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್ಗೇರಿದರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಗ್ರೂಪ್ 1 ಅಂಕ ಪಟ್ಟಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಪ್ರಸ್ತುತ ಸಮಾನ ಅಂಕಗಳನ್ನು ಹೊಂದಿವೆ. ವೆಸ್ಟ್ ಇಂಡೀಸ್ ಎರಡು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಭಾರತ ಕೂಡ ಎರಡು ಅಂಕಗಳನ್ನು ಹೊಂದಿದೆ. ಆದರೆ ನೆಟ್ ರನ್ ರೇಟ್ ವಿಚಾರದಲ್ಲಿ ವಿಂಡೀಸ್ಗಿಂತ ಭಾರತ ಹಿಂದೆ ಇರುವುದರಿಂದ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದ ತಂಡವು ನಾಲ್ಕು ಅಂಕಗಳೊಂದಿಗೆ ನೇರವಾಗಿ ಸೆಮಿಫೈನಲ್‌ಗೆ ಮುನ್ನಡೆಯುತ್ತದೆ. ಆದಾಗ್ಯೂ, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯವು ಮಳೆಯಿಂದ ರದ್ದಾದರೆ ಅಥವಾ ಫಲಿತಾಂಶವಿಲ್ಲದೆ ಕೊನೆಗೊಂಡರೆ, ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತವೆ.
ಈ ಪರಿಸ್ಥಿತಿಯಲ್ಲಿ, ಎರಡೂ ತಂಡಗಳು ಒಟ್ಟು ತಲಾ 3 ಅಂಕಗಳನ್ನು ಪಡೆಯುತ್ತವೆ. ಹೀಗಾಗಿ ಸೆಮಿಫೈನಲ್‌ಗೆ ಮುನ್ನಡೆಯುವ ತಂಡವನ್ನು ನೆಟ್ ರನ್ ರೇಟ್ ಮೂಲಕ ನಿರ್ಧರಿಸಲಾಗುತ್ತದೆ. ವೆಸ್ಟ್ ಇಂಡೀಸ್‌ನ ನೆಟ್ ರನ್ ರೇಟ್ +1.791 ಆಗಿದ್ದು, ಭಾರತದ ನೆಟ್ ರನ್ ರೇಟ್ -0.100 ಆಗಿದೆ. ಅಂದರೆ ನೆಟ್ ರನ್ ರೇಟ್ ವಿಚಾರದಲ್ಲಿ ಭಾರತಕ್ಕಿಂತ ವೆಸ್ಟ್ ಇಂಡೀಸ್ ಮುಂದಿದೆ. ಆದ್ದರಿಂದ, ಮಳೆ ಅಥವಾ ಯಾವುದೇ ಇತರ ಕಾರಣದಿಂದಾಗಿ ಪಂದ್ಯ ರದ್ದಾದರೆ, ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಮುನ್ನಡೆಯುತ್ತದೆ ಮತ್ತು ಭಾರತ ಪಂದ್ಯಾವಳಿಯಿಂದ ಹೊರಹೋಗುತ್ತದೆ.
ಭಾರತ-ವೆಸ್ಟ್ ಇಂಡೀಸ್ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಪ್ರಸ್ತುತ ಇಲ್ಲ. ಅಕ್ಯೂವೆದರ್ ಪ್ರಕಾರ, ಮಾರ್ಚ್ 1 ರಂದು ಕೋಲ್ಕತ್ತಾದಲ್ಲಿ ಮಳೆ ಇರುವುದಿಲ್ಲ. ಕೆಲವು ದಿನಗಳ ಹಿಂದೆ ಮಳೆ ಬಂದಿದ್ದರೂ, ಪಂದ್ಯದ ದಿನದಂದು ಮಳೆ ಬೀಳುವ ಸಾಧ್ಯತೆ ಕಡಿಮೆ. ಪಂದ್ಯದ ಸಮಯದಲ್ಲಿ ಆಕಾಶವು ಸ್ಪಷ್ಟವಾಗಿರಲಿದ್ದು, ಹಗಲಿನಲ್ಲಿ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ತಲುಪಬಹುದು, ಪಂದ್ಯದ ಸಮಯದಲ್ಲಿ 25-26 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ