ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 3-1 ಮುನ್ನಡೆಸಿ ಸಾಧಿಸಿ ಸರಣಿ ವಶಪಡಿಸಿಕೊಂಡಿರುವ ಭಾರತ (India vs Australia) ತಂಡ ಇದೀಗ ಅಂತಿಮ ಕದನಕ್ಕೆ ಸಜ್ಜಾಗಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂಡೋ-ಆಸೀಸ್ ನಡುವೆ ಐದನೇ ಟಿ20 ಪಂದ್ಯ ಆಯೋಜಿಸಲಾಗಿದೆ. ಟೀಮ್ ಇಂಡಿಯಾಕ್ಕೆ ಇದೊಂದು ಔಪಚಾರಿಕ ಪಂದ್ಯವಾಗಿದ್ದರೆ, ಕಾಂಗರೂ ಪಡೆ ಪ್ರತಿಷ್ಠೆಗಾಗಿ ಕೊನೆಯ ಪಂದ್ಯವನ್ನು ಗೆಲ್ಲುವ ಪ್ಲಾನ್ನಲ್ಲಿದೆ. ಹೀಗಾಗಿ ಇಂದಿನದು ಹೈವೋಲ್ಟೇಜ್ ಪಂದ್ಯ ಆಗುವುದು ಖಚಿತ.
ಭಾರತದ ಯುವ ಬ್ಯಾಟಿಂಗ್ ಲೈನ್-ಅಪ್ ಸಾಕಷ್ಟು ಬಲಿಷ್ಠವಾಗಿದೆ. ರುತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸುತ್ತಿದ್ದರೆ, ರಿಂಕು ಸಿಂಗ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಪಂದ್ಯದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸರಣಿಯ ಮೊದಲ ಪಂದ್ಯವನ್ನು ಆಡಿದ ಜಿತೇಶ್ ಶರ್ಮಾ ಭರವಸೆ ಮೂಡಿಸಿದ್ದಾರೆ. ಆದರೆ, ಶ್ರೇಯಸ್ ಅಯ್ಯರ್ ವಿಫಲರಾಗಿದ್ದಾರೆ. ನಾಯಕ ಸೂರ್ಯಕುಮಾರ್ ಕೂಡ ರನ್ ಮಳೆ ಸುರಿಸಬೇಕು. ಆಲ್ರೌಂಡರ್ ಜವಾಬ್ದಾರಿ ಅಕ್ಷರ್ ಪಟೇಲ್ ನಿಭಾಯಿಸಬೇಕಿದೆ.
ಆಸ್ಟ್ರೇಲಿಯಾ ತಲುಪಿದ ಪಾಕ್ ಆಟಗಾರರಿಗೆ ಭಾರೀ ಮುಖಭಂಗ: ಟ್ರಕ್ಗೆ ಲಗೇಜ್ ತುಂಬಿಸುವ ಸ್ಥಿತಿ
ಭಾರತದ ಬೌಲಿಂಗ್ ವಿಭಾಗದಲ್ಲಿ, ಸ್ಪಿನ್ನರ್‌ಗಳು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ರವಿ ಬಿಷ್ಣೋಯ್ ಮತ್ತು ಅಕ್ಷರ್ ಪಟೇಲ್ ಹೆಚ್ಚು ರನ್ ಬಿಟ್ಟುಕೊಡದೆ ವಿಕೆಟ್‌ಗಳನ್ನು ಪಡೆದರು. ಆದರೆ, ಪೇಸ್ ಬೌಲಿಂಗ್ ಘಟಕವು ಉತ್ತಮವಾಗಬೇಕಿದೆ. 4ನೇ ಟಿ20ಯಲ್ಲಿ ಅವೇಶ್ ಖಾನ್ ಬಿಟ್ಟರೆ ಉಳಿದವರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಬೆಂಗಳೂರು ಪಿಚ್ನಲ್ಲಿ ಭಾರತೀಯ ವೇಗಿಗಳು ಯಾವರೀತಿ ಬೌಲಿಂಗ್ ಮಾಡುತ್ತಾರೆ ನೋಡಬೇಕು.
ಆಸ್ಟ್ರೇಲಿಯಾ ಐದನೇ ಟಿ20 ಹೊತ್ತಿಗೆ ಸಾಕಷ್ಟು ಮಂಕಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯಡಂ ಝಂಪಾ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರಂತಹ ಹಲವಾರು ಹಿರಿಯರು ಮನೆಗೆ ಹಿಂದಿರುಗಿದ ನಂತರ, ತಂಡವು ದುರ್ಬಲವಾಗಿದೆ. ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಸ್ಥಾನ ಪಡೆದ ಯುವಕರಲ್ಲಿ ಅನುಭವದ ಕೊರೆತ ಎದ್ದು ಕಾಣುತ್ತಿದೆ. ಕಳೆದ ಪಂದ್ಯದಲ್ಲಿ ಟ್ರಾವಿಸ್ ಹೆಡ್, ನಾಯಕ ಮ್ಯಾಥ್ಯೂ ವೇಡ್ ಬಿಟ್ಟರೆ ಉಳಿದವರೆಲ್ಲ ಮಾರಕವಾಗಿ ಕಾಣಲಿಲ್ಲ. ಸರಣಿಯುದ್ದಕ್ಕೂ ಭಾರತದ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಹಬ್ಬದೂಟ ನೀಡಿದ್ದಾರೆ. 4ನೇ T20I ನಲ್ಲಿ ಬೆನ್ ದ್ವಾರ್ಶುಯಿಸ್ ಮೂರು ವಿಕೆಟ್‌ಗಳನ್ನು ಪಡೆದರೂ, ಆದರೂ 40 ರನ್ ಬಿಟ್ಟುಕೊಟ್ಟರು. 5ನೇ ಟಿ20I ನಲ್ಲಿ ಆಸೀಸ್ ಬೌಲಿಂಗ್ ಮೇಲೂ ಕೆಲಸ ಮಾಡಬೇಕಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ ಸ್ವರ್ಗವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ODI ವಿಶ್ವಕಪ್‌ನಲ್ಲಿ, ಹೆಚ್ಚಿನ ತಂಡಗಳು ತಮ್ಮ ಇನ್ನಿಂಗ್ಸ್‌ನಲ್ಲಿ 300 ಕ್ಕಿಂತ ಹೆಚ್ಚು ರನ್ ಗಳಿಸಿದವು. ಚಿನ್ನಸ್ವಾಮಿಯಲ್ಲಿ ಆಡಿದ 8 T20Iಗಳಲ್ಲಿ, ಎರಡನೇ ಬ್ಯಾಟಿಂಗ್ ಮಾಡಿದ ತಂಡಗಳು 5 ಗೆದ್ದರೆ, ಮೊದಲು ಬ್ಯಾಟ್ ಮಾಡಿದ ತಂಡ ಎರಡು ಬಾರಿ ಗೆದ್ದಿದೆ. ಈ ಮೈದಾನದಲ್ಲಿ ಕ್ರಿಕೆಟ್ ಮೂರು ಸ್ವರೂಪದಲ್ಲಿ 5 ಪಂದ್ಯಗಳನ್ನು ಗೆದ್ದಿರುವ ಭಾರತ, 3 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಇನ್ನು AccuWeather ಪ್ರಕಾರ, ಡಿಸೆಂಬರ್ 3 ರಂದು ಬೆಂಗಳೂರಿನಲ್ಲಿ ಲಘು ಮಳೆಯಾಗುವ ಸಾಧ್ಯತೆ ಕೂಡ ಇದೆ. ಶೇಕಡಾ 55 ರಷ್ಟು ಮಳೆಯೊಂದಿಗೆ, ಗಾಳಿಯು ವೇಗವೂ ಗಂಟೆಗೆ 23 ಕಿಮೀ ಇರಲಿದೆ.
ಉಭಯ ತಂಡಗಳು
ಭಾರತ ತಂಡ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್, ಆವೇಶ್ ಖಾನ್ , ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ, ರವಿ ಬಿಷ್ಣೋಯ್.
ಆಸ್ಟ್ರೇಲಿಯಾ ತಂಡ: ಮ್ಯಾಥ್ಯೂ ವೇಡ್ (ನಾಯಕ), ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ಬೆನ್ ದ್ವಾರಹುಸಿ, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಬೆನ್ ಮೆಕ್‌ಡರ್ಮಾಟ್, ಜೋಶ್ ಫಿಲಿಪ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಕೇನ್ ರಿಚರ್ಡ್ಸನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:26 am, Sun, 3 December 23