IPL 2024: ಕಡಿಮೆ ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿದ ರಚಿನ್ ರವೀಂದ್ರ
IPL 2024 Rachin Ravindra: ಭಾರತದಲ್ಲಿ ನಡೆದ ವಿಶ್ವಕಪ್ನಲ್ಲಿ ರಚಿನ್ ರವೀಂದ್ರ 10 ಪಂದ್ಯಗಳಿಂದ 64.22 ರ ಸರಾಸರಿಯಲ್ಲಿ ಒಟ್ಟು 578 ರನ್ ಕಲೆಹಾಕಿದ್ದರು. ಅಷ್ಟೇ ಅಲ್ಲದೆ ಈ ಬಾರಿಯ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ನ್ಯೂಝಿಲೆಂಡ್ ಆಟಗಾರ ಎನಿಸಿಕೊಂಡಿದ್ದರು.
Updated on: Dec 02, 2023 | 10:30 PM

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ನ್ಯೂಝಿಲೆಂಡ್ ತಂಡದ ಯುವ ಆಟಗಾರ ರಚಿನ್ ರವೀಂದ್ರ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಐಪಿಎಲ್ ಬಿಡ್ಡಿಂಗ್ಗಾಗಿ ಹೆಸರು ನೋಂದಾಯಿಸಿರುವ 1166 ಆಟಗಾರರಲ್ಲಿ ರಚಿನ್ ಹೆಸರು ಕೂಡ ಕಾಣಿಸಿಕೊಂಡಿದೆ. ಆದರೆ ಯುವ ಆಟಗಾರ ಕಡಿಮೆ ಮೂಲ ಬೆಲೆ ಪಟ್ಟಿಯಲ್ಲಿರುವುದು ವಿಶೇಷ.

ಈ ಬಾರಿಯ ಏಕದಿನ ವಿಶ್ವಕಪ್ ಮೂಲಕ ಇಡೀ ವಿಶ್ವದ ಗಮನ ಸೆಳೆದಿರುವ ಎಡಗೈ ಯುವ ದಾಂಡಿಗ ರಚಿನ್ ರವೀಂದ್ರ 50 ಲಕ್ಷ ರೂ. ಮೂಲ ಬೆಲೆ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರಸ್ತುತ ಫಾರ್ಮ್ ಗಮನಿಸಿದರೆ ರಚಿನ್ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಆಸಕ್ತಿವಹಿಸಲಿದೆ.

ಏಕೆಂದರೆ ಭಾರತದಲ್ಲಿ ನಡೆದ ವಿಶ್ವಕಪ್ನಲ್ಲಿ ರಚಿನ್ ರವೀಂದ್ರ 10 ಪಂದ್ಯಗಳಿಂದ 64.22 ರ ಸರಾಸರಿಯಲ್ಲಿ ಒಟ್ಟು 578 ರನ್ ಕಲೆಹಾಕಿದ್ದರು. ಅಷ್ಟೇ ಅಲ್ಲದೆ ಈ ಬಾರಿಯ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ನ್ಯೂಝಿಲೆಂಡ್ ಆಟಗಾರ ಎನಿಸಿಕೊಂಡಿದ್ದರು.

ಇದೀಗ ವಿಶ್ವಕಪ್ 2023ರ ಟಾಪ್ ರನ್ ಸರದಾರರ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದ್ದ ರಚಿನ್ ರವೀಂದ್ರ ಐಪಿಎಲ್ನಲ್ಲಿ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದಾರೆ. ಈ ಇರಾದೆಯೊಂದಿಗೆ ಕಡಿಮೆ ಮೊತ್ತದ ಬೇಸ್ ಪ್ರೈಸ್ ಘೋಷಿಸಿದ್ದು, ಇದು ಯುವ ಆಟಗಾರನಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

ಏಕೆಂದರೆ ರಚಿನ್ ರವೀಂದ್ರ ಆಲ್ರೌಂಡರ್ ಆಟಗಾರ. ಇತ್ತ ಕಡಿಮೆ ಮೊತ್ತದ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿರುವ ಪರಿಣಾಮ 10 ತಂಡಗಳು ಆರಂಭಿಕ ಬಿಡ್ಡಿಂಗ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಇದರಿಂದ ಯುವ ಆಟಗಾರ ಖರೀದಿಗೆ ಆರಂಭದಲ್ಲೇ ಪೈಪೋಟಿ ಕಂಡು ಬರಲಿದೆ. ಈ ಪೈಪೋಟಿಯಿಂದಾಗಿ ರಚಿನ್ ರವೀಂದ್ರ ಬೃಹತ್ ಮೊತ್ತಕ್ಕೆ ಹರಾಜಾದರೂ ಅಚ್ಚರಿಪಡಬೇಕಿಲ್ಲ.
























