
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಅಂಡರ್-19 ತಂಡವು (India U19 vs South Africa U19) ಕ್ಲೀನ್ ಸ್ವೀಪ್ ಮಾಡಿದೆ. ಬೆನೋನಿಯ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಆತಿಥೇಯರನ್ನು 233 ರನ್ಗಳಿಂದ ಏಕಪಕ್ಷೀಯವಾಗಿ ಸೋಲಿಸಿ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು. ಇದರೊಂದಿಗೆ ನಾಯಕನಾಗಿ ಮೊಟ್ಟ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದ್ದ ವೈಭವ್ ಸೂರ್ಯವಂಶಿಗೆ ಸ್ಮರಣಿಯ ಗೆಲುವು ದಕ್ಕಿದೆ. ಇಡೀ ಸರಣಿಯಲ್ಲಿ ಆಟಗಾರನಾಗಿ ಮಾತ್ರವಲ್ಲದೆ ನಾಯಕತ್ವದಲ್ಲೂ ಮಿಂಚಿದ ವೈಭವ್ ಸೂರ್ಯವಂಶಿ (Vaibhav Suryavanshi) ಅತಿ ಕಿರಿಯ ವಯಸ್ಸಿಗೆ ಕ್ಲೀನ್ ಸ್ವೀಪ್ ಮಾಡಿದ ನಾಯಕ ಎಂಬ ದಾಖಲೆಯನ್ನು ಬರೆದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 393 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ಆರನ್ ಜಾರ್ಜ್ ಅದ್ಭುತ ಶತಕ ಬಾರಿಸಿದರು. ನಾಯಕ ವೈಭವ್ 127 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದರೆ, ಆರನ್ 118 ರನ್‌ಗಳ ಕೊಡುಗೆ ನೀಡಿದರು. ಇವರಿಬ್ಬರು ಜೊತೆಯಾಗಿ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು. ಇವರಿಬ್ಬರನ್ನು ಹೊರತುಪಡಿಸಿ ವೇದಾಂತ್ ತ್ರಿವೇದಿ ಕೂಡ 34 ರನ್‌ಗಳ ಇನ್ನಿಂಗ್ಸ್ ಆಡಿದರೆ, ಮೊಹಮ್ಮದ್ ಎನಾನ್ 28 ರನ್‌ಗಳ ಕೊಡುಗೆ ನೀಡಿದರು.
394 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಅಂಡರ್-19 ತಂಡವು ಭಾರತೀಯ ಬೌಲರ್‌ಗಳ ವಿರುದ್ಧ ಸಂಪೂರ್ಣವಾಗಿ ಅಸಹಾಯಕವಾಗಿ ಕಾಣಿಸಿಕೊಂಡಿತು. ಭಾರತದ ಪರ ಮಾರಕ ಬೌಲಿಂಗ್ ಮಾಡಿದ ಕಿಶನ್ ಸಿಂಗ್, ಆಫ್ರಿಕಾಕ್ಕೆ ಆರಂಭಿಕ ಆಘಾತ ನೀಡಿದರು. ಇದರಿಂದಾಗಿ ಒತ್ತಡಕ್ಕೆ ಸಿಲುಕಿದ ಆತಿಥೇಯರು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಆರಂಭದಲ್ಲೇ ಸೋಲಿನ ಸುಳಿವು ನೀಡಿದರು. ತಂಡದ ಪರ ಹೋರಾಟ ನೀಡಿದ ಡೇನಿಯಲ್ ಬೋಸ್ಮನ್ ಮತ್ತು ಪಾಲ್ ಜೇಮ್ಸ್ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರೂ ಅದು ತಂಡವನ್ನು ಗೆಲ್ಲಿಸಲು ಸಾಕಾಗಲಿಲ್ಲ. ಪಾಲ್ ಜೇಮ್ಸ್ 41 ರನ್ ಗಳಿಸಿದರೆ, ಡೇನಿಯಲ್ ಬೋಸ್ಮನ್ 40 ರನ್ ಬಾರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡವು 35 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಯಿತು.
ವೈಭವ್, ಜಾರ್ಜ್ ಸ್ಫೋಟಕ ಶತಕ; ಆಫ್ರಿಕಾಗೆ ಬೃಹತ್ ಗುರಿ ನೀಡಿದ ಯಂಗ್ ಇಂಡಿಯಾ
ಟೀಂ ಇಂಡಿಯಾ ಪರ ಅದ್ಭುತ ಬೌಲಿಂಗ್ ಮಾಡಿದ ಕಿಶನ್ ಸಿಂಗ್ ನಾಲ್ಕು ಓವರ್‌ಗಳಲ್ಲಿ ಕೇವಲ 15 ರನ್‌ಗಳನ್ನು ಬಿಟ್ಟುಕೊಟ್ಟು ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಉಳಿದಂತೆ ಮೊಹಮ್ಮದ್ ಎನಾ ಎರಡು ವಿಕೆಟ್ ಪಡೆದರೆ, ಹೆನಿಲ್ ಪಟೇಲ್, ಕನಿಷ್ಕ್ ಚೌಹಾಣ್ , ಉದ್ಧವ್ ಮೋಹನ್, ಆರ್‌ಎಸ್ ಅಂಬ್ರಿಸ್ ಮತ್ತು ವೈಭವ್ ಸೂರ್ಯವಂಶಿ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Wed, 7 January 26