AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್, ಜಾರ್ಜ್​ ಸ್ಫೋಟಕ ಶತಕ; ಆಫ್ರಿಕಾಗೆ ಬೃಹತ್ ಗುರಿ ನೀಡಿದ ಯಂಗ್ ಇಂಡಿಯಾ

India U19 Blazes 393 vs SA: ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ U19 ತಂಡ 392 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಿದೆ. ನಾಯಕ ವೈಭವ್ ಸೂರ್ಯವಂಶಿ (127) ಮತ್ತು ಆರನ್ ಜಾರ್ಜ್ (118) ಶತಕ ಸಿಡಿಸಿ ಮಿಂಚಿದರು. ಸರಣಿ ಕ್ಲೀನ್ ಸ್ವೀಪ್ ಗುರಿ ಹೊಂದಿರುವ ಭಾರತ ತಂಡ, ಆಫ್ರಿಕಾಕ್ಕೆ 394 ರನ್ ಗುರಿ ನೀಡಿದೆ. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಪ್ರಾಬಲ್ಯ ಸ್ಪಷ್ಟವಾಗಿ ಗೋಚರಿಸಿತು.

ವೈಭವ್, ಜಾರ್ಜ್​ ಸ್ಫೋಟಕ ಶತಕ; ಆಫ್ರಿಕಾಗೆ ಬೃಹತ್ ಗುರಿ ನೀಡಿದ ಯಂಗ್ ಇಂಡಿಯಾ
Suryavanshi, George
ಪೃಥ್ವಿಶಂಕರ
|

Updated on:Jan 07, 2026 | 5:32 PM

Share

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಯೂತ್ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ (India U19 vs South Africa) 393 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಯುವ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 393 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ಆಫ್ರಿಕಾ ಗೆಲುವಿಗೆ 394 ರನ್​ಗಳ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ ಪರ ಆರಂಭಿಕರಿಬ್ಬರು ಶತಕದ ಇನ್ನಿಂಗ್ಸ್ ಆಡಿದರು. ಆರನ್ ಜಾರ್ಜ್ (Aaron George)​ 118 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕ ವೈಭವ್ ಸೂರ್ಯವಂಶಿ (Vaibhav Suryavanshi) ಕೂಡ ಸ್ಫೋಟಕ 127 ರನ್ ಬಾರಿಸಿದರು.

ಭಾರತಕ್ಕೆ ಸ್ಫೋಟಕ ಆರಂಭ

ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ತಂಡ, ಈ ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆಯಲ್ಲಿದೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲಬೇಕಾದರೆ, ಟೀಂ ಇಂಡಿಯಾ ಬೃಹತ್ ಮೊತ್ತವನ್ನು ಕಲೆಹಾಕಬೇಕಿತ್ತು. ಅದರಂತೆ ಮೊದಲು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾ ಪರ ಆರನ್ ಜಾರ್ಜ್​ ಹಾಗೂ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ಒದಗಿಸಿಕೊಟ್ಟರು.

ಈ ಜೋಡಿ ಮೊದಲ 6 ಓವರ್​ಗಳಲ್ಲೇ ತಂಡವನ್ನು 50 ರನ್​ಗಳ ಗಡಿ ದಾಟಿಸಿದರು. ಆರಂಭದಿಂದಲೂ ಎಂದಿನಂತೆ ಹೊಡಿಬಡಿ ಆಟವನ್ನಾಡಿದ ನಾಯಕ ವೈಭವ್ ಹಾಗೂ ಆರನ್ ಆಫ್ರಿಕಾ ಬೌಲರ್​ಗಳನ್ನು ಕಾಡಿದರು. ಇನ್ನಿಂಗ್ಸ್​ನ 7ನೇ ಓವರ್​ನಲ್ಲಿ ಬೌಂಡರಿಗಳ ಮಳೆಗರೆದ ವೈಭವ್ 2 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ, 8ನೇ ಓವರ್​ನಲ್ಲಿ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜಾರ್ಜ್​ ಕೂಡ 32 ಎಸೆತಗಳಲ್ಲಿ ಅರ್ಧಶತಕ ದಾಟಿದರು. ಇಲ್ಲಿಗೆ ನಿಲ್ಲದ ಇವರಿಬ್ಬರು ತಲಾ ಶತಕ ಕೂಡ ಬಾರಿಸಿದರು.

6,6,6,6,6,6,6,6,6,6,.. ವೈಭವ್ ಸಿಡಿಲಬ್ಬರದ ಶತಕಕ್ಕೆ ಹರಿಣಗಳು ಕಂಗಾಲು

ವೈಭವ್, ಜಾರ್ಜ್​ ಶತಕ

ವೈಭವ್ ಸೂರ್ಯವಂಶಿ ಕೇವಲ 63 ಎಸೆತಗಳಲ್ಲಿ ಎಂಟು ಸಿಕ್ಸರ್ ಮತ್ತು ಆರು ಬೌಂಡರಿಗಳ ಸಹಿತ ಶತಕ ಬಾರಿಸಿದರು. ಶತಕದ ಬಳಿಕ ಹೆಚ್ಚು ಹೊತ್ತು ನಿಲ್ಲದ ವೈಭವ್ 10 ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳನ್ನು ಒಳಗೊಂಡಂತೆ ಒಟ್ಟು 127 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ವೈಭವ್ ಅವರ ಅಂಡರ್-19 ಏಕದಿನ ವೃತ್ತಿಜೀವನದಲ್ಲಿ ಮೂರನೇ ಶತಕವಾಗಿದೆ. ಈ ಹಿಂದೆ ಅವರು ಇಂಗ್ಲೆಂಡ್ ಮತ್ತು ಯುಎಇ ಅಂಡರ್-19 ತಂಡದ ವಿರುದ್ಧ ಎರಡು ಶತಕಗಳನ್ನು ಬಾರಿಸಿದ್ದರು. ಆದರೆ ನಾಯಕನಾಗಿ ವೈಭವ್​ಗೆ ಇದು ಮೊದಲ ಶತಕವಾಗಿದೆ.

393 ರನ್ ಟಾರ್ಗೆಟ್ ನೀಡಿದ ಭಾರತ

ಆದಾಗ್ಯೂ ಈ ಜೋಡಿ ಮೊದಲ ವಿಕೆಟ್​ಗೆ 227 ರನ್​ಗಳ ದಾಖಲೆಯ ಜೊತೆಯಾಟ ನೀಡಿತು. ಇದಕ್ಕೆ ತೆಗೆದುಕೊಂಡಿದ್ದು, ಕೇವಲ 26 ಓವರ್​ಗಳು ಮಾತ್ರ. ಇವರಿಬ್ಬರು ಇರುವವರೆಗೆ ತಂಡ 500 ರನ್ ಕಲೆಹಾಕುವ ಲಕ್ಷಣಗಳು ಗೋಚರಿಸಿದವು. ಆದರೆ ವೈಭವ್ ಔಟಾದ ಬಳಿಕ ಸ್ಕೋರ್ ಬೋರ್ಡ್​ ವೇಗ ಕುಸಿಯಿತು. ಜಾರ್ಜ್​ ಕೂಡ ಶತಕ ಬಾರಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಜಾರ್ಜ್​ 106 ಎಸೆತಗಳಲ್ಲಿ 16 ಬೌಂಡರಿ ಸಹಿತ 118 ರನ್ ಬಾರಿಸಿದರು.

ಆ ಬಳಿಕ ಬಂದ ವೇದಾಂತ್ 34 ರನ್​ಗಳ ಕಾಣಿಕೆ ನೀಡಿದರೆ, ಅಭಿಗ್ಯಾನ್ ಇನ್ನಿಂಗ್ಸ್ ಕೂಡ 21 ರನ್​ಗಳಿಗೆ ಅಂತ್ಯವಾಯಿತು. ಇಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಫ್ರಿಕಾ ವೇಗಿಗಳು ಭಾರತ ತಂಡವನ್ನು 400 ರನ್​ಗಳ ಗಡಿ ದಾಟದಂತೆ ನೋಡಿಕೊಂಡರು. ಕೊನೆಯಲ್ಲಿ ಮೊಹಮ್ಮದ್ 28 ರನ್, ಹೆನಿಲ್ 19 ರನ್ ಬಾರಿಸಿ ತಂಡವನ್ನು 400 ರನ್​ಗಳ ಸನಿಹಕ್ಕೆ ತಂದರು. ಆಫ್ರಿಕಾ ಪರ ಸೋನಿ 3 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Wed, 7 January 26