6,6,6,6,6,6,6,6,6,6,.. ವೈಭವ್ ಸಿಡಿಲಬ್ಬರದ ಶತಕಕ್ಕೆ ಹರಿಣಗಳು ಕಂಗಾಲು
Vaibhav Suryavanshi's Record Century: ಭಾರತ U19 ನಾಯಕ ವೈಭವ್ ಸೂರ್ಯವಂಶಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಚೊಚ್ಚಲ ನಾಯಕತ್ವದ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಯೂತ್ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಅತಿ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 127 ರನ್ ಗಳಿಸಿದ ವೈಭವ್, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಮುಂಬರುವ U19 ವಿಶ್ವಕಪ್‌ಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ದಕ್ಷಿಣ ಆಫ್ರಿಕಾ ಹಾಗೂ ಭಾರತ ಅಂಡರ್-19 ತಂಡಗಳ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಯೂತ್ ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದೆ. ಆರಂಭಿಕರಾದ ಆರನ್ ಜಾರ್ಜ್ ಹಾಗೂ ವೈಭವ್ ಸೂರ್ಯವಂಶಿ ಮೊದಲ ವಿಕೆಟ್ಗೆ ದ್ವಿಶತಕದ ಜೊತೆಯಾಟ ಕಟ್ಟಿದ್ದಾರೆ. ಇದೇ ವೇಳೆ ನಾಯಕ ವೈಭವ್ ಸೂರ್ಯವಂಶಿ ನಾಯಕನಾಗಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಯೂತ್ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಅತಿ ಕಿರಿಯ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ವೈಭವ್ ಸೂರ್ಯವಂಶಿ 63 ಎಸೆತಗಳಲ್ಲಿ ಎಂಟು ಸಿಕ್ಸರ್ ಮತ್ತು ಆರು ಬೌಂಡರಿಗಳ ಸಹಿತ ಶತಕ ಬಾರಿಸಿದರು. ಶತಕದ ಬಳಿಕ ಗೇರ್ ಬದಲಿಸಿದ ವೈಭವ್ 10 ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳನ್ನು ಒಳಗೊಂಡಂತೆ ಒಟ್ಟು 127 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ವೈಭವ್ ಅವರ ಅಂಡರ್-19 ಏಕದಿನ ವೃತ್ತಿಜೀವನದಲ್ಲಿ ಮೂರನೇ ಶತಕವಾಗಿದೆ. ಈ ಹಿಂದೆ ಅವರು ಇಂಗ್ಲೆಂಡ್ ಮತ್ತು ಯುಎಇ ಅಂಡರ್-19 ತಂಡದ ವಿರುದ್ಧ ಎರಡು ಶತಕಗಳನ್ನು ಬಾರಿಸಿದ್ದರು. ಆದರೆ ನಾಯಕನಾಗಿ ವೈಭವ್ಗೆ ಇದು ಮೊದಲ ಶತಕವಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸವು ವೈಭವ್ ಸೂರ್ಯವಂಶಿಗೆ ನಾಯಕತ್ವದಿಂದಾಗಿ ಮಾತ್ರ ವಿಶೇಷವಾಗಿರಲಿಲ್ಲ. ಬದಲಿಗೆ ಇದು ವೈಭವ್ ಅವರ ಮೊದಲ ದಕ್ಷಿಣ ಆಫ್ರಿಕಾ ಪ್ರವಾಸವೂ ಆಗಿತ್ತು. U19 ಏಕದಿನ ವಿಶ್ವಕಪ್‌ಗೆ ಸ್ವಲ್ಪ ಮೊದಲು ವೈಭವ್ ಸೂರ್ಯವಂಶಿ ತಮ್ಮ ದಕ್ಷಿಣ ಆಫ್ರಿಕಾ ಪ್ರವಾಸವನ್ನು ದಿಟ್ಟ ರೀತಿಯಲ್ಲಿ ಮುಗಿಸಿದ್ದು ಶ್ಲಾಘನೀಯ. ಈ ಪ್ರವಾಸದಲ್ಲಿ ಅವರು ಆಡಿದ ಮೂರು ಪಂದ್ಯಗಳಲ್ಲಿ ಒಂದು ಶತಕ ಮತ್ತು ಅರ್ಧಶತಕ ಸೇರಿದಂತೆ 206 ರನ್ ಕಲೆಹಾಕಿದರು. ಈ ಅವಧಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 103 ಆಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

