ಭಾರತ ಇಂದು ತನ್ನ 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಭಾರತದ ಅಂಡರ್-19 ಮಹಿಳಾ ತಂಡ ಕ್ರಿಕೆಟ್ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದೆ. ವಾಸ್ತವವಾಗಿ, ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ 2025 ರ ಸೂಪರ್-6 ಸುತ್ತಿನಲ್ಲಿ ಭಾರತ ಮಹಿಳಾ ತಂಡವು ಬಾಂಗ್ಲಾದೇಶದ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿ, ನಾಲ್ಕು ಅಂಕಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ಇಲ್ಲಿಯವರೆಗೆ ಅತ್ಯುತ್ತಮವಾಗಿದ್ದು, ಪ್ರತಿ ಪಂದ್ಯದಲ್ಲೂ ಸುಲಭವಾಗಿ ಗೆಲ್ಲುತ್ತಿದೆ. ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲೂ ಇದೇ ದೃಶ್ಯ ಕಂಡು ಬಂದಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವು ಕೌಲಾಲಂಪುರದ ಬ್ಯೂಮಾಸ್ ಓವಲ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಜಯ ಸಾಧಿಸಿದೆ. ಹಿಂದಿನ ಪಂದ್ಯಗಳಂತೆ ಈ ಪಂದ್ಯದಲ್ಲೂ ಭಾರತದ ಬೌಲರ್‌ಗಳು ದಿಟ್ಟ ಪ್ರದರ್ಶನ ನೀಡಿ ಬಾಂಗ್ಲಾದೇಶವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಾಂಗ್ಲಾದೇಶದ ನಾಯಕಿ ಸುಮೈಯಾ ಅಖ್ತರ್ ಗರಿಷ್ಠ 21 ರನ್ ಗಳಿಸಿದರು. ಅವರನ್ನು ಬಿಟ್ಟರೆ ಬೇರಾವ ಬ್ಯಾಟ್ಸ್‌ಮನ್‌ಗೂ 20 ರನ್‌ಗಳ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಇತ್ತ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ವೈಷ್ಣವಿ ಶರ್ಮಾ 4 ಓವರ್ ಗಳಲ್ಲಿ 15 ರನ್ ನೀಡಿ 3 ವಿಕೆಟ್ ಪಡೆದರು. ಇವರಲ್ಲದೆ ಶಬ್ನಮ್ ಶಕೀಲ್, ಜೋಶಿತಾ ವಿಜೆ ಮತ್ತು ಗೊಂಗಡಿ ತ್ರಿಶಾ ಕೂಡ ತಲಾ 1 ವಿಕೆಟ್ ಪಡೆದರು.
65 ರನ್‌ಗಳ ಗುರಿಯನ್ನು ಟೀಂ ಇಂಡಿಯಾ ಸುಲಭವಾಗಿ ಸಾಧಿಸಿತು. ಗೊಂಗಡಿ ತ್ರಿಶಾ 31 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 40 ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ ಸಾನಿಕಾ ಚಲ್ಕೆ 11 ರನ್ ಮತ್ತು ನಿಕ್ಕಿ ಪ್ರಸಾದ್ 5 ರನ್ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇದಕ್ಕೂ ಮುನ್ನ ಭಾರತ ತಂಡ ವೆಸ್ಟ್ ಇಂಡೀಸ್, ಮಲೇಷ್ಯಾ ಮತ್ತು ಶ್ರೀಲಂಕಾ ತಂಡಗಳನ್ನು ಸೋಲಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, ಮತ್ತೊಮ್ಮೆ ಪ್ರಶಸ್ತಿಯನ್ನು ಗೆಲ್ಲುವ ದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಜನವರಿ 28 ರಂದು ಸ್ಕಾಟ್ಲೆಂಡ್ ವಿರುದ್ಧ ಆಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Sun, 26 January 25