IND vs AFG: ಧರ್ಮಶಾಲಾದಲ್ಲಿ ಭಾರೀ ಮಳೆ; ಮೊದಲ ಏಕದಿನ ಪಂದ್ಯ ನಡೆಯುವುದು ಅನುಮಾನ!

Dharamshala Rain Alert: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ನಾಳೆಯಿಂದ ಧರ್ಮಶಾಲಾದಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯಕ್ಕೆ ಮಳೆಯ ಭಾರಿ ಅಡ್ಡಿ ಎದುರಾಗಿದೆ. ಹವಾಮಾನ ಇಲಾಖೆ ಜೂನ್ 13ಕ್ಕೆ ಎಲ್ಲೋ ಅಲರ್ಟ್ ಘೋಷಿಸಿದ್ದು, ಶೇ. 90ರಷ್ಟು ಮಳೆ ಸಾಧ್ಯತೆ ಇದೆ. ಇದು ಟಾಸ್ ವಿಳಂಬ, ಓವರ್ ಕಡಿತ ಮತ್ತು ಪಿಚ್ ಮೇಲೆ ಪರಿಣಾಮ ಬೀರಲಿದೆ, ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಲಿದೆ.

IND vs AFG: ಧರ್ಮಶಾಲಾದಲ್ಲಿ ಭಾರೀ ಮಳೆ; ಮೊದಲ ಏಕದಿನ ಪಂದ್ಯ ನಡೆಯುವುದು ಅನುಮಾನ!
Ind Vs Afg Weather

Updated on: Jun 12, 2026 | 10:35 PM

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಾಳೆಯಿಂದ ಪ್ರಾರಂಭವಾಗಲಿದೆ. ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಜೂನ್ 13 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದಾಗ್ಯೂ, ಈ ಪಂದ್ಯ ನಡೆಯುವುದು ಅನುಮಾನವಾಗಿದೆ. ಏಕೆಂದರೆ ಪಂದ್ಯ ಪ್ರಾರಂಭವಾಗುವ ಮೊದಲೇ, ಧರ್ಮಶಾಲಾದಲ್ಲಿ ಭಾರೀ ಮಳೆಯಾಗುತ್ತಿದ್ದು (Rain threat Dharamshala), ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.

ಪಂದ್ಯದ ದಿನ ಎಲ್ಲೋ ಅಲರ್ಟ್

ಧರ್ಮಶಾಲಾದಲ್ಲಿ ಇಂದು ಅಂದರೆ ಶುಕ್ರವಾರದಂದು ಹವಾಮಾನ ಸ್ಪಷ್ಟವಾಗಿತ್ತು. ಅಂದರೆ ಈ ದಿನ ಮಳೆಯಾಗಿರಲಿಲ್ಲ, ಬದಲಿಗೆ ಮೋಡ ಕವಿದ ವಾತಾವರಣವಿತ್ತು. ಆದಾಗ್ಯೂ, ಗುರುವಾರ ಧರ್ಮಶಾಲಾದಲ್ಲಿ ಮಳೆಯಾಗಿತ್ತು. ಇನ್ನು ಜೂನ್ 13 ರಂದು ಅಂದರೆ ಪಂದ್ಯ ನಡೆಯುವ ದಿನದಂದು ಭಾರತ ಹವಾಮಾನ ಇಲಾಖೆ ಧರ್ಮಶಾಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಎಲ್ಲೋ ಅಲರ್ಟ್​ ನೀಡಿದೆ. ಹೀಗಾಗಿ ಮೊದಲ ಏಕದಿನ ಪಂದ್ಯಕ್ಕೆ ಮಳೆಯ ಭೀತಿ ಉಂಟಾಗಿದೆ. ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಜೂನ್ 13 ರಂದು ಈ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ. ಆದಾಗ್ಯೂ, ಅಕ್ಯೂವೆದರ್ ಪ್ರಕಾರ, ದಿನದ ಶೇ. 90 ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಆದ್ದರಿಂದ, ಪಂದ್ಯದ ಸಮಯದಲ್ಲಿ ಮಳೆಯಿಂದ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಅಭಿಮಾನಿಗಳು ಟಾಸ್ ವಿಳಂಬ ಮತ್ತು ಓವರ್‌ಗಳ ಸಂಖ್ಯೆಯಲ್ಲಿ ಕಡಿತವನ್ನು ಸಹ ನಿರೀಕ್ಷಿಸಬಹುದು.

ಪಿಚ್ ಮೇಲೆ ಪರಿಣಾಮ

ಮಳೆ ಬಂದರೆ, ಅದು ಪಿಚ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗುತ್ತದೆ. ಧರ್ಮಶಾಲಾದ ಹವಾಮಾನವು ಸಾಮಾನ್ಯವಾಗಿ ತಂಪಾಗಿರುತ್ತದೆ. ಹೀಗಾಗಿ ಗಾಳಿಯಲ್ಲಿನ ಆರ್ದ್ರತೆಯು ಚೆಂಡು ಹೆಚ್ಚು ಸ್ವಿಂಗ್ ಆಗಲು ಕಾರಣವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎರಡೂ ತಂಡಗಳು ತಮ್ಮ ಆಡುವ ಹನ್ನೊಂದನ್ನು ಆಯ್ಕೆ ಮಾಡಬೇಕಾಗುತ್ತದೆ.

ಮುಖಾಮುಖಿ ದಾಖಲೆ

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮುಖಾಮುಖಿ ದಾಖಲೆಯನ್ನು ನೋಡುವುದಾದರೆ.. ಎರಡೂ ತಂಡಗಳು ಇಲ್ಲಿಯವರೆಗೆ ನಾಲ್ಕು ಏಕದಿನ ಪಂದ್ಯಗಳನ್ನು ಆಡಿವೆ. ಈ ನಾಲ್ಕು ಪಂದ್ಯಗಳಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ. ಇದರರ್ಥ ಅಫ್ಘಾನಿಸ್ತಾನವು ಇದುವರೆಗೆ ಒಂದೇ ಒಂದು ಏಕದಿನ ಪಂದ್ಯದಲ್ಲಿ ಭಾರತವನ್ನು ಸೋಲಿಸಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us