India vs Austaralia 1st Test: ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ (IND vs AUS) ನಡುವಣ ಮೊದಲ ಟೆಸ್ಟ್ ಪಂದ್ಯವು ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಆಸೀಸ್ ನಾಯಕನ ನಿರ್ಧಾರ ತಪ್ಪು ಎಂಬಂತೆ ಟೀಮ್ ಇಂಡಿಯಾ (Team India) ವೇಗಿಗಳು ದಾಳಿ ಸಂಘಟಿಸಿದ್ದರು. ಮೊದಲ ಇನಿಂಗ್ಸ್ನ ಮೊದಲ ಎಸೆತದಲ್ಲೇ ಉಸ್ಮಾನ್ ಖ್ವಾಜಾರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ಡೇವಿಡ್ ವಾರ್ನರ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಪರಿಣಾಮ ಕೇವಲ 2 ರನ್ಗೆ 2 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿತ್ತು.
ಈ ಹಂತದಲ್ಲಿ ಜೊತೆಗೂಡಿದ ಟೆಸ್ಟ್ ಸ್ಪೆಷಲಿಸ್ಟ್ಗಳಾದ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ಆದರೆ ಇದರ ನಡುವೆ ವಿರಾಟ್ ಕೊಹ್ಲಿ ಸ್ಟೀವ್ ಸ್ಮಿತ್ಗೆ ಜೀವದಾನ ನೀಡಿದ್ದು ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾಯಿತು.
ಆಸ್ಟ್ರೇಲಿಯಾ ತಂಡದ ಮೊತ್ತ 33 ರನ್ ಆಗಿದ್ದ ವೇಳೆ ಸ್ಟೀವ್ ಸ್ಮಿತ್ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ್ದರು. ಆದರೆ ಈ ಕ್ಯಾಚ್ ಅನ್ನು ಕೊಹ್ಲಿ ಕೈಚೆಲ್ಲಿದ್ದರು. ಇದರ ಸಂಪೂರ್ಣ ಲಾಭ ಪಡೆದ ಸ್ಟೀವ್ ಸ್ಮಿತ್ ಬರೋಬ್ಬರಿ 107 ಎಸೆತಗಳನ್ನು ಆಡಿದರು. ಈ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
ಅಲ್ಲದೆ ಮಾರ್ನಸ್ ಲಾಬುಶೇನ್ ಜೊತೆಗೂಡಿ 82 ರನ್ಗಳ ಜೊತೆಯಾಟವಾಡಿದರು. ಆದರೆ 42ನೇ ಓವರ್ನಲ್ಲಿ ದಾಳಿಗಿಳಿದ ರವೀಂದ್ರ ಜಡೇಜಾ ಸ್ಟೀವ್ ಸ್ಮಿತ್ (37) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಟೀಮ್ ಇಂಡಿಯಾಗೆ ಯಶಸ್ಸು ತಂದುಕೊಟ್ಟರು. ಅಷ್ಟರಲ್ಲಾಗಲೇ ಆಸ್ಟ್ರೇಲಿಯಾ ತಂಡದ ಮೊತ್ತ 100ರ ಗಡಿದಾಟಿತ್ತು.
ಒಂದು ವೇಳೆ ಸ್ಟೀವ್ ಸ್ಮಿತ್ ವಿಕೆಟ್ ಬೇಗನೆ ದೊರೆಯುತ್ತಿದ್ದರೆ ಆಸ್ಟ್ರೇಲಿಯಾ ತಂಡವು ಅಲ್ಪಮೊತ್ತಕ್ಕೆ ಆಲೌಟ್ ಆಗುವ ಸಾಧ್ಯತೆಯಿತ್ತು. ಇದಾಗ್ಯೂ ಉತ್ತಮ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 177 ರನ್ಗಳಿಗೆ ಕಟ್ಟಿಹಾಕಿದ್ದಾರೆ.
ಇದನ್ನೂ ಓದಿ: Team India: ಭರ್ಜರಿ ಜಯದೊಂದಿಗೆ ಪಾಕಿಸ್ತಾನದ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಕೆಎಲ್ ರಾಹುಲ್ , ಚೇತೇಶ್ವರ ಪೂಜಾರ , ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಶ್ರೀಕರ್ ಭರತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್ , ಮೊಹಮ್ಮದ್ ಶಮಿ , ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖವಾಜಾ , ಮಾರ್ನಸ್ ಲಾಬುಶೇನ್ , ಸ್ಟೀವನ್ ಸ್ಮಿತ್ , ಮ್ಯಾಟ್ ರೆನ್ಶಾ , ಪೀಟರ್ ಹ್ಯಾಂಡ್ಸ್ಕಾಂಬ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ನಾಥನ್ ಲಿಯಾನ್ , ಟಾಡ್ ಮರ್ಫಿ , ಸ್ಕಾಟ್ ಬೋಲ್ಯಾಂಡ್.