IND vs AUS: ಮೂರನೇ ಪಂದ್ಯ ಸೋತರೂ ಸರಣಿ ಗೆದ್ದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Sep 27, 2023 | 9:38 PM

India vs Australia: ಅಂತಿಮ ಏಕದಿನ ಪಂದ್ಯದಲ್ಲಿ ಸೋತರೂ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದುಕೊಂಡಿದೆ. 3 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 99 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದೆ.

IND vs AUS: ಮೂರನೇ ಪಂದ್ಯ ಸೋತರೂ ಸರಣಿ ಗೆದ್ದ ಟೀಮ್ ಇಂಡಿಯಾ
India vs Australia
Follow us on

ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ (56) ಹಾಗೂ ಮಿಚೆಲ್ ಮಾರ್ಷ್ (96) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಇತ್ತ ವಿಕೆಟ್ ಪಡೆಯಲು ಪರದಾಡಿದ ಟೀಮ್ ಇಂಡಿಯಾ ಬೌಲರ್​ಗಳು ದುಬಾರಿಯಾದರು. ಪರಿಣಾಮ 25 ಓವರ್​ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಮೊತ್ತವು 200ರ ಗಡಿದಾಟಿತು. ಆದರೆ 25 ಓವರ್​ಗಳ ಬಳಿಕ ಕಂಬ್ಯಾಕ್ ಮಾಡಿದ ಭಾರತೀಯ ಬೌಲರ್​ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಸ್ಟೀವ್ ಸ್ಮಿತ್ (74) ರನ್ನು ಸಿರಾಜ್ ಔಟ್ ಮಾಡಿದರೆ, ಆ ಬಳಿಕ ಬಂದ ಅಲೆಕ್ಸ್ ಕ್ಯಾರಿ (11)ಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು.

ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ (5) ಹಾಗೂ ಕ್ಯಾಮರೋಗ್ ಗ್ರೀನ್ (9) ಬಂದ ವೇಗದಲ್ಲೇ ಹಿಂತಿರುಗಿದ್ದರು. ಈ ವೇಳೆ ಕ್ರೀಸ್ ಕಚ್ಚಿ ನಿಂತು ಇನಿಂಗ್ಸ್ ಕಟ್ಟಿದ ಮಾರ್ನಸ್ ಲಾಬುಶೇನ್ 72 ರನ್ ಬಾರಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡವು 7 ವಿಕೆಟ್ ನಷ್ಟಕ್ಕೆ 352 ರನ್ ಕಲೆಹಾಕಿತು.

353 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ವಾಷಿಂಗ್ಟನ್ ಸುಂದರ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 74 ರನ್​ಗಳ ಜೊತೆಯಾಟವಾಡಿ ಸುಂದರ್ (18) ಔಟಾದರು.

ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 70 ರನ್​ಗಳ ಪಾಲುದಾರಿಕೆ ಪ್ರದರ್ಶಿಸಿದರು. ಅತ್ತ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ರೋಹಿತ್ ಶರ್ಮಾ 57 ಎಸೆತಗಳಲ್ಲಿ 6 ಸಿಕ್ಸ್​ಗಳೊಂದಿಗೆ 81 ರನ್ ಬಾರಿಸಿ ಔಟಾದರು.
ಇದರ ಬೆನ್ನಲ್ಲೇ 61 ಎಸೆತಗಳಲ್ಲಿ 1 ಸಿಕ್ಸ್​ ಹಾಗೂ 5 ಫೋರ್​ಗಳೊಂದಿಗೆ 56 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಕೂಡ ವಿಕೆಟ್ ಒಪ್ಪಿಸಿದರು. ಈ ಎರಡು ವಿಕೆಟ್ ಸಿಗುತ್ತಿದ್ದಂತೆ ಆಸ್ಟ್ರೇಲಿಯಾ ಬೌಲರ್​ಗಳು ಟೀಮ್ ಇಂಡಿಯಾ ರನ್ ಗತಿಯನ್ನು ನಿಯಂತ್ರಿಸಿದರು.

ಅಷ್ಟೇ ಅಲ್ಲದೆ 26 ರನ್ ಬಾರಿಸಿದ್ದ ಕೆಎಲ್ ರಾಹುಲ್​ರನ್ನು ಔಟ್ ಮಾಡಿದರು. ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ 8 ರನ್​ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ 48 ರನ್​ಗಳಿಸಿದ್ದ ವೇಳೆ ಮ್ಯಾಕ್ಸ್​ವೆಲ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಶ್ರೇಯಸ್ ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ಕುಲ್ದೀಪ್ ಯಾದವ್ (2) ಕೂಡ ಔಟಾದರು.

ಅಂತಿಮ 8 ಓವರ್​ಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 96 ರನ್​ಗಳ ಅವಶ್ಯಕತೆಯಿತ್ತು. ಕ್ರೀಸ್​ನಲ್ಲಿ ರವೀಂದ್ರ ಜಡೇಜಾ ಹಾಗೂ ಜಸ್​ಪ್ರೀತ್ ಬುಮ್ರಾ ಬ್ಯಾಟ್ ಬೀಸುತ್ತಿದ್ದರು. ಆದರೆ ಈ ಜೋಡಿ ಮೊದಲ 3 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 12 ರನ್​ಗಳು ಮಾತ್ರ. ಪರಿಣಾಮ ಅಂತಿಮ 5 ಓವರ್​ಗಳಲ್ಲಿ 84 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಜಸ್​ಪ್ರೀತ್ ಬುಮ್ರಾ (5) ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ರವೀಂದ್ರ ಜಡೇಜಾ 35 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 49.4 ಓವರ್​ಗಳಲ್ಲಿ 286 ರನ್​ಗಳಿಗೆ ಆಲೌಟ್ ಆಗುವ ಮೂಲಕ 66 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಸರಣಿ ಗೆದ್ದ ಟೀಮ್ ಇಂಡಿಯಾ:

ಅಂತಿಮ ಏಕದಿನ ಪಂದ್ಯದಲ್ಲಿ ಸೋತರೂ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದುಕೊಂಡಿದೆ. 3 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 99 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದೆ. ಈ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾ 2-1 ಅಂತರದಿಂದ  ಸರಣಿಯನ್ನು ವಶಪಡಿಸಿಕೊಂಡಿದೆ.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ:  ಏಕದಿನ ವಿಶ್ವಕಪ್​ಗೆ 10 ತಂಡಗಳು ಪ್ರಕಟ

ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ತನ್ವೀರ್ ಸಂಘ, ಜೋಶ್ ಹ್ಯಾಝಲ್‌ವುಡ್.