ಆಸ್ಟ್ರೇಲಿಯಾ ವಿರುದ್ದ ದಾಖಲೆಯ ಮೊತ್ತ ಕಲೆಹಾಕಿದ ಟೀಮ್ ಇಂಡಿಯಾ
India vs Australia: ಅಂತಿಮ 15 ಓವರ್ಗಳ ವೇಳೆ ಬ್ಯಾಟ್ ಬೀಸಿದ ಕೆಎಲ್ ರಾಹುಲ್ 38 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 52 ರನ್ ಬಾರಿಸಿ ನಿರ್ಗಮಿಸಿದರು. ಮತ್ತೊಂದೆಡೆ ಸಿಡಿಲಬ್ಬರ ಶುರು ಮಾಡಿದ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 72 ರನ್ ಚಚ್ಚಿದರು.
ಇಂದೋರ್ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಶುಭ್ಮನ್ ಗಿಲ್ ಜೊತೆ ಇನಿಂಗ್ಸ್ ಆರಂಭಿಸಿದ ರುತುರಾಜ್ ಗಾಯಕ್ವಾಡ್ ಕೇವಲ 8 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ವೇಳೆ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಶುಭ್ಮನ್ ಗಿಲ್ ಜೊತೆಗೂಡಿ ಇನಿಂಗ್ಸ್ ಕಟ್ಟುವ ಕಾಯಕಕ್ಕೆ ಕೈ ಹಾಕಿದರು. ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದ ಈ ಜೋಡಿ ಆಸೀಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ 25 ಓವರ್ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 187 ರನ್ ಕಲೆಹಾಕಿತು.
ಇದಾದ ಬಳಿಕ ಅಬ್ಬರ ಮುಂದುವರೆಸಿದ ಶ್ರೇಯಸ್ ಅಯ್ಯರ್ 86 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಆದರೆ ಶತಕದ ಬೆನ್ನಲ್ಲೇ ಬಿರುಸಿನ ಆಟಕ್ಕೆ ಮುಂದಾಗಿ 90 ಎಸೆತಗಳಲ್ಲಿ 11 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ 105 ರನ್ಗಳ ಇನಿಂಗ್ಸ್ ಅಂತ್ಯಗೊಳಿಸಿದರು. ಇತ್ತ ಅಯ್ಯರ್ ಔಟಾಗಿ ನಿರ್ಗಮಿಸುತ್ತಿದ್ದಂತೆ 92 ಎಸೆತಗಳಲ್ಲಿ ಶುಭ್ಮನ್ ಗಿಲ್ ಶತಕ ಪೂರೈಸಿದರು. ಅಲ್ಲದೆ 97 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 104 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾ ಮೊತ್ತ 35 ಓವರ್ಗಳಲ್ಲಿ 243 ಕ್ಕೆ ಬಂದು ನಿಂತಿತ್ತು.
📽️ #TeamIndia‘s twin ✌️centurions beam with pride 🙌#TestedByTheBest #IndiaCricketKaNayaGhar pic.twitter.com/sUTFljBOFB
— JioCinema (@JioCinema) September 24, 2023
ಇನ್ನು ಅಂತಿಮ 15 ಓವರ್ಗಳ ವೇಳೆ ಬ್ಯಾಟ್ ಬೀಸಿದ ಕೆಎಲ್ ರಾಹುಲ್ 38 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 52 ರನ್ ಬಾರಿಸಿ ನಿರ್ಗಮಿಸಿದರು. ಮತ್ತೊಂದೆಡೆ ಸಿಡಿಲಬ್ಬರ ಶುರು ಮಾಡಿದ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 72 ರನ್ ಚಚ್ಚಿದರು. ಇದರೊಂದಿಗೆ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾ ಮೊತ್ತ 399 ಕ್ಕೆ ಬಂದು ನಿಂತಿತು.
ದಾಖಲೆಯ ಮೊತ್ತ:
ಇದು ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಕಲೆಹಾಕಿದ ಅತ್ಯಧಿಕ ಮೊತ್ತವಾಗಿದೆ. 2013 ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 383 ರನ್ ಕಲೆಹಾಕಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 399 ರನ್ ಪೇರಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.
ಇನ್ನು ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ಮೊತ್ತ ಕಲೆಹಾಕಿದ ವಿಶ್ವ ದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿದೆ. 2018 ರಲ್ಲಿ ಆಸೀಸ್ ವಿರುದ್ಧ 6 ವಿಕೆಟ್ ಕಳೆದುಕೊಂಡು 481 ರನ್ ಪೇರಿಸಿರುವುದು ದಾಖಲೆಯಾಗಿ ಉಳಿದಿದೆ.
ಭಾರತ (ಪ್ಲೇಯಿಂಗ್ XI): ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ಭರ್ಜರಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಶುಭ್ಮನ್ ಗಿಲ್
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಶಾನ್ ಅಬಾಟ್, ಆ್ಯಡಂ ಝಂಪಾ, ಜೋಶ್ ಹ್ಯಾಝಲ್ವುಡ್, ಸ್ಪೆನ್ಸರ್ ಜಾನ್ಸನ್.