IND vs AUS: ಗಿಲ್​ಗೆ ಹ್ಯಾಟ್ರಿಕ್​ ಟಾಸ್ ಸೋಲು; ಭಾರತ ತಂಡದಲ್ಲಿ 2 ಬದಲಾವಣೆ

India vs Australia 3rd ODI: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ಕುಲ್ದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣಗೆ ಸ್ಥಾನ ನೀಡಲಾಗಿದ್ದು, ನಿತೀಶ್ ರೆಡ್ಡಿ ಮತ್ತು ಅರ್ಷದೀಪ್ ಸಿಂಗ್ ಹೊರಗುಳಿದಿದ್ದಾರೆ. ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾಕ್ಕೆ ಉತ್ತಮ ಗೆಲುವಿನ ದಾಖಲೆಯಿದೆ.

IND vs AUS: ಗಿಲ್​ಗೆ ಹ್ಯಾಟ್ರಿಕ್​ ಟಾಸ್ ಸೋಲು; ಭಾರತ ತಂಡದಲ್ಲಿ 2 ಬದಲಾವಣೆ
Ind Vs Aus

Updated on: Oct 25, 2025 | 9:25 AM

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅಂದರೆ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದೆ. ನಾಯಕನಾದ ನಂತರ ಶುಭ್​ಮನ್ ಗಿಲ್ ಆಡಿದ ಮೂರನೇ ಏಕದಿನ ಪಂದ್ಯ ಇದಾಗಿದ್ದು, ನಾಯಕತ್ವದಲ್ಲಿ ಅವರು ಮೂರು ಟಾಸ್‌ಗಳನ್ನು ಸೋತಿದ್ದಾರೆ. ಇದು ಭಾರತ ತಂಡದ ಸತತ 18 ನೇ ಟಾಸ್ ಸೋಲು. ಟಾಸ್ ನಂತರ, ಎರಡೂ ತಂಡಗಳ ನಾಯಕರು ತಮ್ಮ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದರು. ಅದರಂತೆ ಸಿಡ್ನಿ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದ್ದು, ಇಬ್ಬರಿಗೆ ಅವಕಾಶ ನೀಡಲಾಗಿದೆ.

ಕುಲ್ದೀಪ್, ಪ್ರಸಿದ್ಧ್​ಗೆ ಅವಕಾಶ

ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸುಕೊಳ್ಳುವಲ್ಲಿ ಕುಲ್ದೀಪ್ ಯಾದವ್ ಕೊನೆಗೂ ಯಶಸ್ವಿಯಾಗಿದ್ದಾರೆ . ಪರ್ತ್ ಮತ್ತು ಅಡಿಲೇಡ್‌ನಲ್ಲಿ ಅವರನ್ನು ಆಡಿಸದ ಸಾಕಷ್ಟು ಬಗ್ಗೆ ಚರ್ಚೆ ನಡೆದಿತ್ತು. ಆದಾಗ್ಯೂ, ಹಿಂದಿನ ಎರಡು ಸೋಲುಗಳಿಂದ ಪಾಠ ಕಲಿತ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್, ಸಿಡ್ನಿಯಲ್ಲಿ ಕುಲ್ದೀಪ್ ಅವರಿಗೆ ಆಡುವ ಅವಕಾಶ ಕೊಟ್ಟಿದೆ. ಈ ವರ್ಷದ ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಕುಲ್ದೀಪ್ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು.

ಇಬ್ಬರು ಆಟಗಾರರನ್ನು ಕೈಬಿಟ್ಟ ಭಾರತ

ಸಿಡ್ನಿ ಏಕದಿನ ಪಂದ್ಯಕ್ಕೆ ನಿತೀಶ್ ರೆಡ್ಡಿ ಬದಲಿಗೆ ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಿಂದ ಕೈಬಿಡಲಾದ ಮತ್ತೊಬ್ಬ ಆಟಗಾರ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್. ಆಡಿದ ಮೊದಲೆರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಅರ್ಷದೀಪ್ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ಪ್ಲೇಯಿಂಗ್ ಇಲೆವೆನ್​ನಲ್ಲಿ ಆಯ್ಕೆ ಮಾಡಲಾಗಿದೆ.

ಸಿಡ್ನಿ ದಾಖಲೆ ಹೇಗಿದೆ?

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 20ನೇ ಏಕದಿನ ಪಂದ್ಯವನ್ನು ಆಡುತ್ತಿವೆ. ಈ ಹಿಂದೆ ಆಡಿದ 19 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ 16 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಕೇವಲ ಎರಡರಲ್ಲಿ ಮಾತ್ರ ಗೆದ್ದಿದೆ, ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಆಸ್ಟ್ರೇಲಿಯಾ ಸಿಡ್ನಿಯಲ್ಲಿ ತನ್ನ ಶೇ. 70 ರಷ್ಟು ಪಂದ್ಯಗಳನ್ನು ಗೆದ್ದಿದೆ. ಏತನ್ಮಧ್ಯೆ, ಭಾರತವು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಏಕದಿನ ಪಂದ್ಯಗಳಲ್ಲಿ ಶೇ. 11 ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ.

ಉಭಯ ತಂಡಗಳು

ಭಾರತ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಮ್ಯಾಟ್ ಶಾರ್ಟ್, ಮ್ಯಾಥ್ಯೂ ರೆನ್‌ಶಾ, ಅಲೆಕ್ಸ್ ಕ್ಯಾರಿ, ಕೂಪರ್ ಕಾನೊಲಿ, ಮಿಚ್ ಓವನ್, ನಾಥನ್ ಎಲ್ಲಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ, ಜೋಶ್ ಹೇಜಲ್‌ವುಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:22 am, Sat, 25 October 25