IND vs AUS: ಕೊನೆಯ ಏಕದಿನ ಹಾಗೂ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ 9 ಬದಲಾವಣೆ
ustralia Squad Shuffles: ಭಾರತ ವಿರುದ್ಧ ಏಕದಿನ ಸರಣಿ ಗೆದ್ದಿರುವ ಆಸ್ಟ್ರೇಲಿಯಾ ತಂಡವು ಕೊನೆಯ ಏಕದಿನ ಹಾಗೂ ಟಿ20 ಸರಣಿಗಾಗಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಟಿ20 ತಂಡಕ್ಕೆ ಮರಳಿದ್ದು, ಮಾರ್ನಸ್ ಲಬುಶೇನ್ ಏಕದಿನ ತಂಡದಿಂದ ಹೊರಗುಳಿದಿದ್ದಾರೆ. ಹೊಸ ಆಟಗಾರರಿಗೆ ಅವಕಾಶ ನೀಡಿ, ಹಲವು ಪ್ರಮುಖರಿಗೆ ವಿಶ್ರಾಂತಿ ನೀಡಲಾಗಿದೆ.

ತವರಿನಲ್ಲಿ ನಡೆದ ಟೀಂ ಇಂಡಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುಂತೆಯೇ ಗೆದ್ದುಕೊಂಡಿರುವ ಆಸ್ಟ್ರೇಲಿಯಾ (India vs Australia) ಇದೀಗ ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಏಕದಿನ ತಂಡದಲ್ಲಿ ಮಾತ್ರವಲ್ಲದೆ, ಆ ಬಳಿಕ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೂ ತಂಡದಲ್ಲಿ ಬದಲಾವಣೆ ಮಾಡಿದೆ. ಅದರಂತೆ ಏಕದಿನ ತಂಡದಲ್ಲಿ ಇಬ್ಬರು ಆಟಗಾರರಿಗೆ ಅವಕಾಶ ನೀಡಲಿದ್ದು, ಒಬ್ಬ ಆಟಗಾರನನ್ನು ತಂಡದಿಂದ ಕೈ ಬಿಡಲಾಗಿದೆ. ಹಾಗೆಯೇ ಟಿ20 ತಂಡದಲ್ಲಿ ನಾಲ್ವರು ಆಟಗಾರರಿಗೆ ಅವಕಾಶ ನೀಡಲಾಗಿದ್ದು, ಇಬ್ಬರು ಆಟಗಾರರನ್ನು ಟಿ20 ಸರಣಿಯಿಂದ ಕೈಬಿಡಲಾಗಿದೆ.
ಏಕದಿನ, ಟಿ20 ತಂಡಗಳಲ್ಲಿ ಬದಲಾವಣೆ
ಮೊದಲು ನಾವು ಏಕದಿನ ತಂಡದಲ್ಲಾಗಿರುವ ಬದಲಾಣೆಯ ಬಗ್ಗೆ ಹೇಳುವುದಾದರೆ.. ಅಕ್ಟೋಬರ್ 25 ರಂದು ಉಭಯ ತಂಡಗಳ ನಡುವೆ ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಸರಣಿ ಗೆದ್ದಿರುವ ಆಸ್ಟ್ರೇಲಿಯಾಕ್ಕೆ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಹೀಗಾಗಿ ಕೊನೆಯ ಏಕದಿನ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆಗಳನ್ನು ಮಾಡಿದ್ದು, ಜ್ಯಾಕ್ ಎಡ್ವರ್ಡ್ಸ್ ಮತ್ತು ಮ್ಯಾಟ್ ಕುನ್ಹೆಮನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಮಾರ್ನಸ್ ಲಬುಶೇನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
Maxi's back and an U19 World Cup winner bolts in to face India! #AUSvEND https://t.co/1eiLZmh5X7
— cricket.com.au (@cricketcomau) October 23, 2025
ಟಿ20 ತಂಡಕ್ಕೆ ನಾಲ್ವರ ಆಗಮನ
ಏಕದಿನ ಸರಣಿಯ ಬಳಿಕ ಅಕ್ಟೋಬರ್ 29 ರಿಂದ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ 4 ಬದಲಾವಣೆಗಳನ್ನು ಮಾಡಲಾಗಿದೆ. ಕೆಲವು ದಿನಗಳಿಂದ ಇಂಜುರಿಯಿಂದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಟಿ20 ತಂಡವನ್ನು ಕೂಡಿಕೊಂಡಿದ್ದಾರೆ. ಆದಾಗ್ಯೂ ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದು, ಉಳಿದು ಮೂರು ಪಂದ್ಯಗಳಲ್ಲಿ ಆಡಲಿದ್ದಾರೆ.
ಬೆನ್ ದ್ವಾರ್ಶುಯಿಸ್ ಅವರನ್ನು ನಾಲ್ಕನೇ ಮತ್ತು ಐದನೇ ಟಿ20ಪಂದ್ಯಕ್ಕೆ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಇಪ್ಪತ್ತು ವರ್ಷದ ವೇಗದ ಬೌಲರ್ ಮಹ್ಲಿ ಬಿಯರ್ಡ್‌ಮನ್ ಅವರನ್ನು ಮೂರನೇ, ನಾಲ್ಕನೇ ಮತ್ತು ಐದನೇ ಟಿ20ಪಂದ್ಯಗಳಿಗೆ ಅಚ್ಚರಿಯ ಪ್ಯಾಕೇಜ್ ಆಗಿ ಆಯ್ಕೆ ಮಾಡಲಾಗಿದೆ. ಇವರ ಜೊತೆಗೆ, ಜೋಶ್ ಫಿಲಿಪ್ ಎಲ್ಲಾ ಐದು ಟಿ20ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಹೀಗೆ ಟಿ20 ತಂಡಕ್ಕೆ ನಾಲ್ವರು ಆಟಗಾರರ ಆಗಮನವಾಗಿದ್ದರೆ, ಇಬ್ಬರು ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಮೊದಲ ಎರಡು ಟಿ20 ಪಂದ್ಯಗಳ ನಂತರ ಅನುಭವಿ ವೇಗಿ ಜೋಶ್ ಹೇಜಲ್‌ವುಡ್ ಅವರನ್ನು ಟಿ20 ತಂಡದಿಂದ ಹೊರಗಿಡಲಾಗಿದೆ. ಹಾಗೆಯೇ ಸೀನ್ ಅಬಾಟ್ ಅವರನ್ನು ಮೊದಲ ಮೂರು ಟಿ20 ಪಂದ್ಯಗಳ ನಂತರ ತಂಡದಿಂದ ಹೊರಗಿಡಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Fri, 24 October 25
