ರಾಯ್‌ಪುರದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ 4ನೇ ಟಿ20 ಪಂದ್ಯದಲ್ಲಿ 20 ರನ್ಗಳಿಂದ ಆಸೀಸ್ ತಂಡವನ್ನು ಮಣಿಸಿದ ಸೂರ್ಯಕುಮಾರ್ ಯಾದವ್ (Suryakumar Yadav) ಪಡೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಐದು ಪಂದ್ಯಗಳ ಟಿ20 ಸರಣಿಯನ್ನು ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಯ ಬ್ಯಾಟಿಂಗ್ ಮಾಡಿದ ಭಾರತ ತಂಡ 9 ವಿಕೆಟ್ ಕಳೆದುಕೊಂಡು 175 ರನ್‌ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 7 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಸದ್ಯ ಭಾರತ ತಂಡ ಸರಣಿಯಲ್ಲಿ 3-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಟೀಂ ಇಂಡಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಟೀಂ ಇಂಡಿಯಾದ ಆರಂಭಿಕ ಜೋಡಿ ಭರವಸೆಯ ಆರಂಭವನ್ನೇ ನೀಡಿತು. ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಇಬ್ಬರೂ ಆರಂಭಿಕ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಆದರೆ ನಂತರ ಈ ಜೋಡಿ ಬೇರ್ಪಟ್ಟಿತು. 37 ರನ್ ಗಳಿಸಿ ಜೈಸ್ವಾಲ್ ಔಟಾದರು. ಆ ಬಳಿಕ ಬಂದ ಉಪನಾಯಕ ಶ್ರೇಯಸ್ ಅಯ್ಯರ್ ಕೇವಲ 8 ರನ್ ಕಲೆಹಾಕಿ ತಕ್ಷಣವೇ ಔಟಾದರು. ಶ್ರೇಯಸ್ ನಂತರ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಕೇವಲ 1 ರನ್‌ಗಳಿಗೆ ಸುಸ್ತಾದರು.
IND vs AUS 4th T20I Highlights: ಆಸೀಸ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ
ಸೂರ್ಯ ಔಟಾದ ನಂತರ, ರುತುರಾಜ್ ಗಾಯಕ್ವಾಡ್ ಮತ್ತು ಜಿತೇಶ್ ಶರ್ಮಾ ಇಬ್ಬರೂ ಟೀಮ್ ಇಂಡಿಯಾ ಇನ್ನಿಂಗ್ಸ್ ನಿಭಾಯಿಸಿದರು. ಇವರಿಬ್ಬರು ಐದನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದರು. ಆದರೆ ರುತುರಾಜ್ ಗಾಯಕ್ವಾಡ್ 32 ರನ್‌ಗಳಿಗೆ ಔಟಾಗುವುದರೊಂದಿಗೆ ಈ ಜೊತೆಯಾಟ ಮುರಿದು ಬಿತ್ತು. ರುತುರಾಜ್ ನಂತರ ಜಿತೇಶ್ ಕೂಡ 35 ರನ್ ಗಳಿಸಿ ಪೆವಲಿಯನ್ಗೆ ಮರಳಿದರು. ಟೀಂ ಇಂಡಿಯಾ ಕೆಲವೇ ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಹೀಗಾಗಿ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಆಸೀಸ್ ಬೆನ್ ದ್ವಾರ್ಶುಯಿಸ್ 3 ವಿಕೆಟ್ ಪಡೆದರೆ, ಜೇಸನ್ ಬೆಹ್ರೆಂಡಾರ್ಫ್ ಮತ್ತು ತನ್ವೀರ್ ಸಂಘ ತಲಾ 2 ವಿಕೆಟ್ ಪಡೆದರು. ಆರನ್ ಹಾರ್ಡಿ 1 ವಿಕೆಟ್ ಪಡೆದರು.
ಭಾರತ ನೀಡಿದ 174 ರನ್ ಬೆನ್ನಟ್ಟಿದ ಆಸೀಸ್ಗೆ ಉತ್ತಮ ಆರಂಭ ಸಿಕ್ಕಿತು. ಆಸೀಸ್ ಪರ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅತಿ ಹೆಚ್ಚು 31 ರನ್ ಗಳಿಸಿದರೆ, ಮ್ಯಾಥ್ಯೂ ಶಾರ್ಟ್ 22 ರನ್‌ಗಳ ಕೊಡುಗೆ ನೀಡಿದರು. ಟಿಮ್ ಡೇವಿಡ್ ಮತ್ತು ಬೆನ್ ಮೆಕ್‌ಡರ್ಮಾಟ್ ಇಬ್ಬರೂ ತಲಾ 19 ರನ್‌ಗಳ ಕೊಡುಗೆ ನೀಡಿದರು. ಜೋಶ್ ಫಿಲಿಪ್ಪಿ ಮತ್ತು ಆರನ್ ಹಾರ್ಡಿ ಇಬ್ಬರೂ ತಲಾ 8 ರನ್ ಬಾರಿಸಿದರೆ, ಬೆನ್ ದ್ವಾರ್ಶುಯಿಸ್ 1 ರನ್ಗೆ ಸುಸ್ತಾದರು. ನಾಯಕ ಮ್ಯಾಥ್ಯೂ ವೇಡ್ ಕೊನೆಯವರೆಗೂ ಹೋರಾಡಿದರಾದರೂ ತಂಡಕ್ಕೆ ಗೆಲುವು ನೀಡಲು ಸಾಧ್ಯವಾಗಲಿಲ್ಲ. ಮ್ಯಾಥ್ಯೂ ಗರಿಷ್ಠ 36 ರನ್ ಗಳಿಸಿದರೆ ಕ್ರಿಸ್ ಗ್ರೀನ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.
ಟೀಂ ಇಂಡಿಯಾ ಪರ ಅಕ್ಷರ್ ಪಟೇಲ್ ಅತಿ ಹೆಚ್ಚು 3 ವಿಕೆಟ್ ಕಬಳಿಸಿದರೆ, ದೀಪಕ್ ಚಹಾರ್ ಕೂಡ 2 ವಿಕೆಟ್ ಪಡೆದು ಮಿಂಚಿದರು. ಅವೇಶ್ ಖಾನ್ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆಯುವ ಮೂಲಕ ಇತರರಿಗೆ ಬೆಂಬಲ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Fri, 1 December 23