INDW vs AUSW: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ: ಮಿಥಾಲಿ ಪಡೆಗೆ ಆರಂಭಿಕ ಆಘಾತ

| Updated By: Vinay Bhat

Updated on: Mar 19, 2022 | 7:31 AM

Womens World Cup 2022, India Women vs Australia Women: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವ ಆಸೀಸ್ ಭರ್ಜರಿ ಬೌಲಿಂಗ್ ನಡೆಸುತ್ತಿದ್ದರೆ ಇತ್ತ ಮಿಥಾಲಿ ಪಡೆ ಆರಂಭದಲ್ಲೆ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

INDW vs AUSW: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ: ಮಿಥಾಲಿ ಪಡೆಗೆ ಆರಂಭಿಕ ಆಘಾತ
india women vs australia women
Follow us on

12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (Womens World Cup 2022) ಟೂರ್ನಿಯ 18ನೇ ಪಂದ್ಯದಲ್ಲಿಂದು ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡ (India Women vs Australia Women) ಮುಖಾಮುಖಿ ಆಗುತ್ತಿದೆ. ಈಗಾಗಲೇ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವ ಆಸೀಸ್ ಭರ್ಜರಿ ಬೌಲಿಂಗ್ ನಡೆಸುತ್ತಿದ್ದರೆ ಇತ್ತ ಮಿಥಾಲಿ (Mithali Raj) ಪಡೆ ಆರಂಭದಲ್ಲೆ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತಕ್ಕೆ ಈ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆದ್ದು, ಇನ್ನೆರಡರಲ್ಲಿ ಸೋತಿರುವ ಭಾರತ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಉಳಿಸಿಕೊಳ್ಳಬೇಕಾದರೆ ಗೆಲ್ಲಬೇಕಾದ ಒತ್ತಡದಲ್ಲಿದೆ. ಇಲ್ಲವಾದರೆ ಲೀಗ್ ಹಂತದಿಂದಲೇ ಹೊರಬೀಳುವ ಸಾಧ್ಯತೆ ಇದೆ. ಹೀಗಾಗಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಆಸ್ಟ್ರೇಲಿಯಾಕ್ಕೆ ಭಾರತ ಸೋಲಿನ ರುಚಿ ತೋರಿಸಬೇಕಾದ ಅಗತ್ಯ ಉಂಟಾಗಿದೆ.

ಇಂದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದೆ. ದೀಪ್ತಿ ಶರ್ಮಾ ಬದಲು ಶಫಾಲಿ ವರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಅದು ಯಶಸ್ವಿಯಾಗಲಿಲ್ಲ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ತನ್ನ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಭರ್ಜರಿ ಫಾರ್ಮ್​​ನಲ್ಲಿದ್ದ ಸ್ಮೃತಿ ಮಂದಾನ ಕೇವಲ 11 ಎಸೆತಗಳಲ್ಲಿ 10 ರನ್​ಗೆ ಔಟಾದರೆ, ಶಫಾಲಿ 16 ಎಸೆತಗಳಲ್ಲಿ ತಲಾ 1 ಫೋರ್, ಸಿಕ್ಸರ್​​ನೊಂದಿಗೆ 12 ರನ್ ಬಾರಿಸಿ ಬ್ಯಾಟ್ ಕೆಳಗಿಟ್ಟರು. ಈ ಎರಡೂ ವಿಕೆಟ್​ಗಳನ್ನು ಟಾರ್ಸಿ ಬ್ರೌನ್ ಪಡೆದುಕೊಂಡರು.

ಭಾರತ ಪ್ಲೇಯಿಂಗ್ XI: ಸ್ಮೃತಿ ಮಂದಾನ, ಶೆಫಾಲಿ ವರ್ಮಾ, ಯಸ್ತಿಕಾ ಭಾಟಿಯಾ, ಹರ್ಮನ್​ಪ್ರೀತ್ ಕೌರ್, ಮಿಥಾಲಿ ರಾಜ್ (ನಾಯಕಿ), ರಿಚ್ಚ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲಾನ್ ಗೋಸ್ವಾಮಿ, ಮೇಘ್ನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್.

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಮೆಗ್ ಲ್ಯಾನಿಂಗ್ (ನಾಯಕಿ), ರಚೆಲ್ ಹೇನ್ಸ್ (ಉಪನಾಯಕಿ), ಅಲೈಸಾ ಹೀಲಿ, ಎಲೈಸ್ ಪೆರಿ, ಬೆತ್ ಮೂನಿ, ತಹಿಲಾ ಮೆಕ್‌ಗ್ರಾಥ್, ಆಯಶ್ಲಿ ಗಾರ್ಡನರ್, ಜೆಸ್ ಜಾನ್ಸನ್, ಅಲ್ನಾ ಕಿಂಗ್, ಮೆಘನ್ ಶೂಟ್,  ಡಾರ್ಸಿ ಬ್ರೌನ್.

ಟೂರ್ನಿಯಲ್ಲಿ ಇಲ್ಲಿಯವರೆಗೂ ನಡೆದಿರುವ ಪಂದ್ಯಗಳಲ್ಲಿ ಗೆಲುವು ಮತ್ತು ಸೋಲನ್ನು ಸಮವಾಗಿ ಕಂಡಿರುವ ಭಾರತೀಯ ವನಿತೆಯರ ತಂಡ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧದ ಈ ಪಂದ್ಯದಲ್ಲಿ ಜಯ ಗಳಿಸಿದರೆ ಮಾತ್ರ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ. ಒಂದುವೇಳೆ ಈ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಸೋತರೆ ಭಾರತೀಯ ವನಿತೆಯರು ಸೆಮಿಫೈನಲ್ ತಲುಪುವುದು ಅನುಮಾನವೇ ಸರಿ. ಹೀಗಾಗಿ ಈ ಪಂದ್ಯ ಭಾರತೀಯ ವನಿತೆಯರ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಪರಿಣಮಿಸಿದೆ.

ಇತ್ತ ಮೆಗ್ ಲ್ಯಾನಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಆಡಿರುವ ನಾಲ್ಕು ಪಂದ್ಯಗಳಲ್ಲಿಯೂ ಜಯಸಾಧಿಸಿದೆ. ಬ್ಯಾಟರ್ ರಚೆಲ್ ಹೇನ್ಸ್‌ ಒಟ್ಟು 277 ರನ್‌ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ವೇಗದ ಬೌಲರ್ ಎಲೈಸಾ ಪೆರಿ ಮತ್ತು ಸ್ಪಿನ್ನರ್ ಆಯಶ್ಲಿ ಗಾರ್ಡನರ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತದ ಬ್ಯಾಟರ್‌ಗಳಿಗೆ ಇವರಿಬ್ಬರೂ ಕಠಿಣ ಸವಾಲೊಡ್ಡುವ ಸಮರ್ಥ ಬೌಲರ್‌ಗಳಾಗಿದ್ದಾರೆ.

ಭಾರತೀಯ ವನಿತೆಯರ ತಂಡದ ವಿರುದ್ಧ ನಡೆದಿರುವ ಮುಖಾಮುಖಿಯಲ್ಲಿ ಕೂಡ ಆಸ್ಟ್ರೇಲಿಯಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುವುದರ ಮೂಲಕ ಮೇಲುಗೈ ಸಾಧಿಸಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ವನಿತೆಯರ ತಂಡ ಮತ್ತು ಆಸ್ಟ್ರೇಲಿಯಾ ವನಿತೆಯರ ತಂಡಗಳ ನಡುವೆ ಇದುವರೆಗೂ ಒಟ್ಟು 49 ಮುಖಾಮುಖಿ ಪಂದ್ಯಗಳು ನಡೆದಿದ್ದು, ಆಸ್ಟ್ರೇಲಿಯಾ ವನಿತೆಯರ ತಂಡ 39 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಭಾರತ ವನಿತೆಯರ ತಂಡ ಕೇವಲ 10 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ.

CSK IPL 2022: ಬೆಸ್ಟ್ ಫಿನಿಶರ್! ಕೊನೆಯ 5 ಓವರ್​ಗಳಲ್ಲಿ ಧೋನಿ ತುಂಬಾ ಅಪಾಯಕಾರಿ ಯಾಕೆ ಗೊತ್ತಾ?