ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ 2023 ರ ಏಷ್ಯಾಕಪ್ ಗೆದ್ದು ಬೀಗಿದೆ. ಇದೀಗ ತಂಡವು ತನ್ನದೇ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ (India vs Australia) 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಇದಕ್ಕಾಗಿ ಬಿಸಿಸಿಐ (BCCI) ಕೂಡ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ನಂತರ ರೋಹಿತ್ ಪಡೆ ತವರಿನಲ್ಲಿ ಏಕದಿನ ವಿಶ್ವಕಪ್ (ODI World Cup 2023) ಅನ್ನು ಆಡಬೇಕಾಗಿದೆ. ಹೀಗಾಗಿ ಟೀಂ ಇಂಡಿಯಾ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಬೇಕೆಂಬ ಇರಾದೆಯೊಂದಿಗೆ ಕಣಕ್ಕಿಳಿಯಲ್ಲಿದೆ. ಇನ್ನು ಈ ಸರಣಿಗೆ ಬಿಸಿಸಿಐ 2 ತಂಡಗಳನ್ನು ಆಯ್ಕೆ ಮಾಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಕನ್ನಡಿಗ ರಾಹುಲ್ (KL Rahul) ತಂಡವನ್ನು ಮುನ್ನಡೆಸಲಿದ್ದು, ಮೂರನೇ ಪಂದ್ಯದ ನಾಯಕತ್ವವನ್ನು ಎಂದಿನಂತೆ ರೋಹಿತ್ ನಿರ್ವಹಿಸಲಿದ್ದಾರೆ.
ವಾಸ್ತವವಾಗಿ, 2019 ರಲ್ಲಿ ನಡೆದ ಕೊನೆಯ ಏಕದಿನ ವಿಶ್ವಕಪ್ ಅನ್ನು ಇಂಗ್ಲೆಂಡ್ ಆಯೋಜಿಸಿತ್ತು. ಆ ವಿಶ್ವಕಪ್‌ನಿಂದ ಇಲ್ಲಿಯವರೆಗೆ ಭಾರತ ತಂಡ ಮತ್ತು ಆಸ್ಟ್ರೇಲಿಯಾ ನಡುವೆ 3 ದ್ವಿಪಕ್ಷೀಯ ಏಕದಿನ ಸರಣಿಗಳು ನಡೆದಿವೆ. ಈ ಮೂರು ಸರಣಿಗಳ ಪೈಕಿ ಭಾರತ ಒಂದು ಸರಣಿಯನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ 2 ಸರಣಿಗಳನ್ನು ವಶಪಡಿಸಿಕೊಂಡಿದೆ.
ಮೂರು ಪಂದ್ಯಗಳಿಗೆ ಎರಡು ತಂಡ: ಟೀಂ ಇಂಡಿಯಾ ಆಯ್ಕೆಯಲ್ಲಿನ 4 ಪ್ರಮುಖ ಮುಖ್ಯಾಂಶಗಳಿವು
ಈ ಹಿನ್ನೆಲೆಯಲ್ಲಿ ಈ ನಾಲ್ಕನೇ ದ್ವಿಪಕ್ಷೀಯ ಏಕದಿನ ಸರಣಿಯನ್ನು ಒಂದು ವೇಳೆ ಭಾರತ ತಂಡ ಗೆದ್ದರೆ ಎರಡು ವಿಶ್ವಕಪ್‌ಗಳ ನಡುವಿನ ಏಕದಿನ ಸರಣಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಲಿವೆ. ಇದರರ್ಥ 2019 ಮತ್ತು 2023 ರ ವಿಶ್ವಕಪ್ ನಡುವಿನ ಒಟ್ಟು 4 ಏಕದಿನ ಸರಣಿಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಲಾ 2 ಸರಣಿಯನ್ನು ಗೆದ್ದು ಸಮಬಲ ಸಾಧಿಸಿದ್ದಂತ್ತಾಗುತ್ತದೆ.
ಇನ್ನು ಉಭಯ ತಂಡಗಳ ಮುಖಾಮುಖಿ ವರದಿಯನ್ನು ನೋಡುವುದಾದರೆ.. ಎರಡೂ ತಂಡಗಳು ಇಲ್ಲಿಯವರೆಗೆ 146 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಟೀಂ ಇಂಡಿಯಾ 54 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಆಸ್ಟ್ರೇಲಿಯಾ 84 ಪಂದ್ಯಗಳನ್ನು ಗೆದ್ದು ಬೀಗಿದೆ. ಉಳಿದಂತೆ 10 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ.
ಹಾಗೆಯೇ ಈ ಎರಡೂ ತಂಡಗಳು ಭಾರತದಲ್ಲಿ ಒಟ್ಟು 67 ಪಂದ್ಯಗಳನ್ನಾಡಿದ್ದು, ಇದರಲ್ಲಿ ಭಾರತ 30 ಪಂದ್ಯಗಳಲ್ಲಿ ಗೆದ್ದಿದ್ದರೆ, ಆಸ್ಟ್ರೇಲಿಯಾ 32 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. 5 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಇದರರ್ಥ ಭಾರತದಲ್ಲೂ ಹಾಗೂ ಭಾರತದ ಹೊರಗೂ ಟೀಂ ಇಂಡಿಯಾದೆದುರು ಆಸ್ಟ್ರೇಲಿಯಾ ಮೇಲುಗೈ ಸಾಧಿಸಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ