IND vs AUS: ಮೊದಲೆರಡು ಪಂದ್ಯಗಳಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ಯಾಕೆ? ಸ್ಪಷ್ಟನೆ ನೀಡಿದ ಅಗರ್ಕರ್
IND vs AUS: ಅನುಭವಿಗಳಿಗೆ ವಿಶ್ರಾಂತಿ ನೀಡುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಗರ್ಕರ್, ನಿಯಮಿತವಾಗಿ ಆಡುತ್ತಿರುವ ಪ್ರಮುಖ ಆಟಗಾರರಿಗೆ ಮಾನಸಿಕ ವಿರಾಮವು ಮುಖ್ಯವಾಗಿದೆ. ಅಲ್ಲದೆ ಅನುಭವಿಗಳಿಗೆ ವಿಶ್ರಾಂತಿ ನೀಡಿದರೆ ಇತರ ಕೆಲವು ಆಟಗಾರರ ಪ್ರದರ್ಶನವನ್ನು ಗಮನಿಸಲು ಅವಕಾಶ ಸಿಗುತ್ತದೆ ಎಂದಿದ್ದಾರೆ.
ಏಷ್ಯಾಕಪ್ (Asia Cup 2023) ಮುಗಿದಿದ್ದು, ಇದೀಗ ಏಕದಿನ ವಿಶ್ವಕಪ್‌ಗೆ (ODI World Cup 2023) ಸಿದ್ಧತೆಗಳು ನಡೆಯುತ್ತಿವೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ವಿಶ್ವಕಪ್ ಆರಂಭವಾಗಲಿದ್ದು, ಟೀಂ ಇಂಡಿಯಾ ತನ್ನ ತಂಡವನ್ನು ಪ್ರಕಟಿಸಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾ, ಆಸ್ಟ್ರೇಲಿಯಾ (India vs Australia) ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಉಭಯ ತಂಡಗಳ ಹೈವೋಲ್ಟೇಜ್ ಕದನಕ್ಕಾಗಿ ಬಿಸಿಸಿಐ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಟೀಂ ಇಂಡಿಯಾ ನಾಯಕನಾಗಿದ್ದರೆ, ನಾಯಕ ರೋಹಿತ್ ಶರ್ಮಾ (Rohit Sharma) ಸೇರಿದಂತೆ ಮೊದಲೆರಡು ಪಂದ್ಯಗಳಿಗೆ ವಿರಾಟ್ ಕೊಹ್ಲಿ ಮತ್ತು ಇತರ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವಕಪ್ನಂತಹ ಪ್ರಮುಖ ಈವೆಂಟ್ ಅನ್ನು ಮುಂದಿಟ್ಟುಕೊಂಡು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವುದು ಎಷ್ಟು ಸರಿ ಎಂಬುದು ಮಾಜಿ ಆಟಗಾರರ ಪ್ರಶ್ನೆಯಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ತಂಡದ ಮುಖ್ಯ ಆಯ್ಕೆಗಾರ ಅಜಿತ್ ಆಗರ್ಕರ್ (Ajith Agarkar) ಸ್ಪಷ್ಟನೆ ಕೂಡ ನೀಡಿದ್ದಾರೆ.
ಮೇಲೆ ಹೇಳಿದಂತೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಗಳಾಗಿವೆ. ಆದರೆ ಮೂರನೇ ಏಕದಿನ ಪಂದ್ಯಕ್ಕೆ ವಿಶ್ವಕಪ್ ಆಡುವ ತಂಡವನ್ನು ಕಣಕ್ಕಿಳಿಸಲಾಗುತ್ತಿದೆ. ಇನ್ನು ತಂಡವನ್ನು ಪ್ರಕಟಿಸಿದ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಯ್ಕೆಗಾರರ ಅಧ್ಯಕ್ಷ ಅಜಿತ್ ಅಗರ್ಕರ್, ವಿಶೇಷವಾಗಿ ವಿಶ್ವಕಪ್ ತುಂಬಾ ಹತ್ತಿರವಾಗಿರುವುದರಿಂದ ಈ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ್ದಾರೆ.
IND vs AUS: ಪೂರ್ಣ ವೇಳಾಪಟ್ಟಿ, ಉಭಯ ತಂಡಗಳು, ಪಂದ್ಯ ಆರಂಭವಾಗುವ ಸಮಯ, ನೇರ ಪ್ರಸಾರದ ವಿವರಗಳು ಇಲ್ಲಿವೆ
ಮಾನಸಿಕ ವಿರಾಮವು ಮುಖ್ಯ- ಅಗರ್ಕರ್
ಅನುಭವಿಗಳಿಗೆ ವಿಶ್ರಾಂತಿ ನೀಡುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಗರ್ಕರ್, ನಿಯಮಿತವಾಗಿ ಆಡುತ್ತಿರುವ ಪ್ರಮುಖ ಆಟಗಾರರಿಗೆ ಮಾನಸಿಕ ವಿರಾಮವು ಮುಖ್ಯವಾಗಿದೆ. ಅಲ್ಲದೆ ಅನುಭವಿಗಳಿಗೆ ವಿಶ್ರಾಂತಿ ನೀಡಿದರೆ ಇತರ ಕೆಲವು ಆಟಗಾರರ ಪ್ರದರ್ಶನವನ್ನು ಗಮನಿಸಲು ಅವಕಾಶ ಸಿಗುತ್ತದೆ. ರೋಹಿತ್ ಮತ್ತು ವಿರಾಟ್ ವಿಶ್ವಕಪ್ ತಂಡದ ಪ್ರಮುಖ ಆಟಗಾರರಾಗಿದ್ದರೆ, ಹಾರ್ದಿಕ್ ಕೂಡ ನಮಗೆ ಪ್ರಮುಖ ಆಟಗಾರ. ಇವರೊಂದಿಗೆ ಕುಲ್ದೀಪ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಇವರಿಗೆ ವಿಶ್ರಾಂತಿ ನೀಡಿ, ಇತರ ಕೆಲವು ಆಟಗಾರರ ಪ್ರದರ್ಶನವನ್ನು ಗಮನಿಸಲು ಇದು ನಮಗೆ ಅವಕಾಶ ನೀಡುತ್ತದೆ.
ಕೆಲವು ಹಂತದಲ್ಲಿ, ಆಟಗಾರರಿಗೆ ಮಾನಸಿಕ ವಿರಾಮದ ಅಗತ್ಯವಿರುತ್ತದೆ. ಪ್ರಮುಖ ಪಂದ್ಯಾವಳಿಗೂ ಮುನ್ನ ಈ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ. ಮೂರನೇ ಪಂದ್ಯಕ್ಕೆ ಎಲ್ಲ ಆಟಗಾರರು ಆಡಲು ಲಭ್ಯವಿರುತ್ತಾರೆ. ಹೀಗಾಗಿ ನಾವು ನಮ್ಮ ವಿಶ್ವಕಪ್ ತಂಡವನ್ನು ಆಸೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಸುತ್ತೇವೆ ಎಂದು ಅಗರ್ಕರ್ ಹೇಳಿದ್ದಾರೆ.
ಯಾರ್ಯಾರಿಗೆ ವಿಶ್ರಾಂತಿ?
ಇನ್ನು ಮೊದಲೆರಡು ಪಂದ್ಯಗಳಿಗೆ ರೋಹಿತ್ ಮತ್ತು ಹಾರ್ದಿಕ್ ಅನುಪಸ್ಥಿತಿಯಲ್ಲಿ, ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದ್ದು, ರವೀಂದ್ರ ಜಡೇಜಾ ಅವರಿಗೆ ಉಪನಾಯಕತ್ವ ನೀಡಲಾಗಿದೆ. ರೋಹಿತ್ ಬದಲಿಗೆ ರುತುರಾಜ್ ಗಾಯಕ್ವಾಡ್ ಅವರನ್ನು ಹೆಚ್ಚುವರಿ ಆರಂಭಿಕರಾಗಿ ಆಯ್ಕೆ ಮಾಡಲಾಗಿದ್ದು, ಕುಲ್ದೀಪ್ ಮತ್ತು ಗಾಯಾಳು ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಮತ್ತು ಆರ್. ಅಶ್ವಿನ್ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ