
ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದು ಬೀಗಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಇದೀಗ ಆಸೀಸ್ (India Women vs Australia Women) ವಿರುದ್ಧವೂ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಇಂಗ್ಲೆಂಡ್ ತಂಡವನ್ನು 347 ರನ್‌ಗಳಿಂದ ಮಣಿಸಿದ್ದ ಭಾರತ ಮಹಿಳಾ ತಂಡ ಟೆಸ್ಟ್ ಇತಿಹಾಸದಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಭಾರತ ವನಿತಾ ಪಡೆ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಎರಡನೇ ದಿನದಾಟದಂತ್ಯಕ್ಕೆ 157 ರನ್‌ಗಳ ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 219 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಾದ ಬಳಿಕ ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಆಸ್ಟ್ರೇಲಿಯದ ಬೌಲರ್‌ಗಳಿಗೆ ತಕ್ಕ ಪ್ರತ್ಯುತ್ತರ ನೀಡಿ ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 376 ರನ್ ಗಳಿಸಿದೆ. ಈ ಮೂಲಕ ಭಾರತ ಇಲ್ಲಿಯವರೆಗೆ 157 ರನ್‌ಗಳ ಮುನ್ನಡೆ ಸಾಧಿಸಿದೆ. ತಂಡದ ಪರ ನಾಲ್ವರು ಬ್ಯಾಟರ್ಗಳು ಅರ್ಧಶತಕ ಸಿಡಿಸಿದ್ದಾರೆ. ದಿನದಾಟದಂತ್ಯಕ್ಕೆ ದೀಪ್ತಿ ಶರ್ಮಾ ಅಜೇಯ 70 ರನ್ ಹಾಗೂ ಪೂಜಾ ವಸ್ತ್ರಾಕರ್ 33 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
IND vs AUS: ಆಸೀಸ್ಗೆ ತಕ್ಕ ಪ್ರತ್ಯುತ್ತರ; ಮೊದಲ ಟೆಸ್ಟ್ನಲ್ಲಿ ಭಾರತಕ್ಕೆ ಮೇಲುಗೈ
ತಂಡದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 74 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಕೂಡ 52 ರನ್ಗಳ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿ, ಮಧ್ಯಮ ಕ್ರಮಾಂಕದಲ್ಲಿ ಬಂದ ಜೆಮಿಮಾ ರಾಡ್ರಿಗಸ್ 73 ರನ್ಗಳ ಇನ್ನಿಂಗ್ಸ್ ಆಡಿದ್ದಾರೆ. ತಂಡವನ್ನು ಈ ಸ್ಕೋರ್‌ಗೆ ಕೊಂಡೊಯ್ಯುವಲ್ಲಿ ಎಲ್ಲಾ ಆಟಗಾರ್ತಿಯರು ಕೊಡುಗೆ ನೀಡಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆಸ್ಟ್ರೇಲಿಯಾ ಪರ ಆಶ್ಲೇ ಗಾರ್ಡ್ನರ್ 4 ವಿಕೆಟ್ ಪಡೆದಿದ್ದಾರೆ. ಒಂದು ವೇಳೆ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದರೆ, ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತದೆ. ಇಲ್ಲಿಂದ ಆಸ್ಟ್ರೇಲಿಯಕ್ಕೆ ಈ ಪಂದ್ಯದಲ್ಲಿ ತಿರುಗೇಟು ನೀಡುವುದು ಕಷ್ಟ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ