- Kannada News Photo gallery Cricket photos RCB star batter rajat patidar ipl salary increases after odi debut
ಟೀಂ ಇಂಡಿಯಾ ಪರ ಕಣಕ್ಕಿಳಿದು ಐಪಿಎಲ್ ಸಂಬಳ ಹೆಚ್ಚಿಸಿಕೊಂಡ ಆರ್ಸಿಬಿ ಆಟಗಾರ..!
Rajat Patidar: ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವ ಸೂಚನೆ ಪಡೆದಿರುವ ರಜತ್, ಏಕೈಕ ಅಂತಾರಾಷ್ಟ್ರೀಯ ಪಂದ್ಯವನ್ನಾಡುವುದರೊಂದಿಗೆ ತಮ್ಮ ಐಪಿಎಲ್ ಸಂಬಳವನ್ನು ಸಹ ಬರೋಬ್ಬರಿ 30 ಲಕ್ಷ ಏರಿಸಿಕೊಂಡಿದ್ದಾರೆ.
Updated on: Dec 22, 2023 | 10:30 PM

ಭಾರತದ ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಮೊದಲ ಪಂದ್ಯವನ್ನು ಆಡಿದರು.

ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರ ನಾಯಕತ್ವದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಜತ್ ಪಾಟಿದಾರ್ ಆರಂಭಿಕರಾಗಿ ಕಣಕ್ಕಿಳಿದು 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 22 ರನ್ ಚಚ್ಚಿದರು.

ಈ ಪಂದ್ಯದಲ್ಲಿ ರಜತ್ ಕೆಲವೇ ಹೊತ್ತು ಮೈದಾನದಲ್ಲಿದ್ದರೂ ತಮ್ಮ ನಿರ್ಭೀತಿಯ ಬ್ಯಾಟಿಂಗ್ನಿಂದ ಕ್ರಿಕೆಟ್ ಪಂಡಿತರ ಮನಗೆದ್ದರು. ರಜತ್ ಅವರ ಆಟ ನೋಡಿದ ಹಲವರು, ಇವರು ಮುಂದಿನ ಟೀಂ ಇಂಡಿಯಾದ ಸೂಪರ್ ಸ್ಟಾರ್ ಎಂದು ಹೊಗಳಿಕೆಯ ಮಾತನ್ನು ಆಡಿದರು.

ಈ ಮೂಲಕ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವ ಸೂಚನೆ ಪಡೆದಿರುವ ರಜತ್, ಏಕೈಕ ಅಂತಾರಾಷ್ಟ್ರೀಯ ಪಂದ್ಯವನ್ನಾಡುವುದರೊಂದಿಗೆ ತಮ್ಮ ಐಪಿಎಲ್ ಸಂಬಳವನ್ನು ಸಹ ಬರೋಬ್ಬರಿ 30 ಲಕ್ಷ ಏರಿಸಿಕೊಂಡಿದ್ದಾರೆ.

ವಾಸ್ತವವಾಗಿ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ರಜತ್ಗೆ ಅವರ ಮೂಲ ಬೆಲೆ 20 ಲಕ್ಷ ರೂಗಳನ್ನು ಒಂದು ಸೀಸನ್ಗೆ ವೇತನವನ್ನಾಗಿ ನೀಡಲಾಗುತ್ತಿದೆ. ಆದರೆ ಇದೀಗ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ರಜತ್ ಅವರ ಐಪಿಎಲ್ ಸಂಬಳ 30 ಲಕ್ಷ ಹೆಚ್ಚಾಗಿದೆ.

ಅದರಂತೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ರಜತ್ 20 ಲಕ್ಷದ ಬದಲಿಗೆ 50 ಲಕ್ಷ ರೂಗಳನ್ನು ವೇತನವನ್ನಾಗಿ ಪಡೆಯಲ್ಲಿದ್ದಾರೆ.

ಬಿಸಿಸಿಐ ನಿಯಮಗಳ ಪ್ರಕಾರ ಒಬ್ಬ ಭಾರತೀಯ ಅನ್ಕ್ಯಾಪ್ಡ್ ಕ್ರಿಕೆಟಿಗ ಎರಡು ಐಪಿಎಲ್ ಆವೃತ್ತಿಗಳ ನಡುವೆ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿ ಚೊಚ್ಚಲ ಪಂದ್ಯವನ್ನಾಡಿದರೆ, ಆತನ ಸಂಬಳ 50 ಲಕ್ಷಕ್ಕಿಂತ ಕಡಿಮೆಯಿದ್ದರೆ, ಮುಂಬರುವ ಸೀಸನ್ನಿಂದ ಆತನಿಗೆ ಫ್ರಾಂಚೈಸಿ ವೇತನವಾಗಿ ರೂ 50 ಲಕ್ಷವನ್ನು ಪಾವತಿಸಬೇಕಾಗುತ್ತದೆ.

ಅದರಂತೆ ಈಗ ರಜತ್ ಪಾಟಿದರ್ ತಮ್ಮ ಮುಂದಿನ ಐಪಿಎಲ್ ಆವೃತ್ತಿಯಿಂದ 50 ಲಕ್ಷ ರೂಗಳನ್ನು ವೇತನವನ್ನಾಗಿ ಪಡೆಯಲ್ಲಿದ್ದಾರೆ.

ದೇಶಿ ಕ್ರಿಕೆಟ್ನಲ್ಲಿ ರಜತ್ ಪಾಟಿದಾರ್ ಅವರ ಪ್ರದರ್ಶನವನ್ನು ನೋಡುವುದಾದರೆ, ರಜತ್ 57 ಲಿಸ್ಟ್-ಎ ಪಂದ್ಯಗಳಲ್ಲಿ 36.35 ಸರಾಸರಿಯಲ್ಲಿ 98.49 ಸ್ಟ್ರೈಕ್ ರೇಟ್‌ನೊಂದಿಗೆ 1,963 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 3 ಶತಕ ಮತ್ತು 12 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.
























