ಚಟ್ಟೋಗ್ರಾಮ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (India and Bangladesh) ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶ ತಂಡ 150 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ 254 ರನ್ಗಳ ಮುನ್ನಡೆ ಸಿಕ್ಕಿದೆ. ಎರಡನೇ ದಿನದಾಟದಲ್ಲಿ ಪ್ರಮುಖ 8 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದ್ದ ಬಾಂಗ್ಲಾ, ಮೂರನೇ ದಿನದಾಟದ ಮೊದಲ ಸೆಷನ್ನಲ್ಲಿಯೇ ಇನ್ನುಳಿದ ಎರಡು ವಿಕೆಟ್ ಕಳೆದುಕೊಂಡಿತು. ಮೂರನೇ ದಿನದಾಟದಲ್ಲಿ ತಂಡಕ್ಕೆ ಕೇವಲ 17 ರನ್ಗಳ ಕೊಡುಗೆ ನೀಡಿದ ಬಾಂಗ್ಲಾ ಬಾಲಂಗೋಚಿಗಳು ತಂಡದ ಮೊತ್ತವನ್ನು 150 ರನ್ಗಳಿಗೆ ಕೊಂಡೊಯ್ದರು. ಎರಡನೇ ದಿನದಾಟದಲ್ಲಿ ಬಾಂಗ್ಲಾ ಬ್ಯಾಟಿಂಗ್ ವಿಭಾಗವನ್ನು ಪುಡಿಪುಡಿ ಮಾಡಿ 4 ವಿಕೆಟ್ ಉರುಳಿಸಿದ್ದ ಕುಲ್ದೀಪ್ (Kuldeep Yadav), ಮೂರನೇ ದಿನದಾಟದ ಆರಂಭದಲ್ಲೇ ಖಲೀದ್ ವಿಕೆಟ್ ಪಡೆದು 5 ವಿಕೆಟ್ ಪಡೆದ ಸಾಧನೆ ಮಾಡಿದರು.
2. ಬಾಂಗ್ಲಾ ಇನ್ನಿಂಗ್ಸ್ ಹೀಗಿತ್ತು
ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ನೀಡಿದ 404 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶದ ಆರಂಭ ಅತ್ಯಂತ ಕಳಪೆಯಾಗಿತ್ತು. ನಜ್ಮುಲ್ ಹಸನ್ ಶಾಂಟೊ ಮೊದಲ ಎಸೆತದಲ್ಲೇ ಔಟಾದರು. ಸಿರಾಜ್ ಅವರ ಉತ್ತಮ ಎಸೆತದಲ್ಲಿ ಶಾಂಟೊ, ಪಂತ್ಗೆ ಕ್ಯಾಚ್ ನೀಡಿದರು. ಇದಾದ ಬಳಿಕ ಉಮೇಶ್ ಯಾದವ್ ಯಾಸಿರ್ ಅಲಿಯನ್ನು ಬೌಲ್ಡ್ ಮಾಡಿದರು. ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುವುದನ್ನು ಮುಂದುವರೆಸಿದ ಸಿರಾಜ್, ಲಿಟನ್ ದಾಸ್ ಮತ್ತು ಜಾಕಿರ್ ಹಸನ್ ಅವರನ್ನು ಔಟ್ ಮಾಡುವ ಮೂಲಕ ಎದುರಾಳಿಯನ್ನು ಬ್ಯಾಕ್‌ಫೂಟ್‌ಗೆ ತಳ್ಳಿದರು.
IND vs BAN: ಕುಲ್ದೀಪ್-ಸಿರಾಜ್ ಬೌಲಿಂಗ್ ಮೋಡಿ: ಫಾಲೋಆನ್ ಭೀತಿಯಲ್ಲಿ ಬಾಂಗ್ಲಾ: ಎರಡನೇ ದಿನದಾಟದ ಫೋಟೋ ನೋಡಿ
3. ಕುಲ್ದೀಪ್ಗೆ 5 ವಿಕೆಟ್
ಸಿರಾಜ್ ಜೊತೆಗೆ ವಿಕೆಟ್ ತೆಗೆಯುವ ಜವಬ್ದಾರಿವಹಿಸಿಕೊಂಡ ಕುಲ್ದೀಪ್ ಬಾಂಗ್ಲಾ ತಂಡದ ಮಧ್ಯಮ ಕ್ರಮಾಂಕದ ಬೆನ್ನೇಲುಬು ಮುರಿದರು. ಮೊದಲು ಕುಲ್ದೀಪ್, ನಾಯಕ ಶಕೀಬ್ರನ್ನು 3 ರನ್ಗಳಿಗೆ ಬಲಿ ಪಡೆದರೆ, ನಂತರ ನುರುಲ್ ಹಸನ್ ವಿಕೆಟ್ ಕಬಳಿಸಿದರು. ಇಲ್ಲಿ ಈ ವಿಕೆಟ್ನ ಶ್ರೇಯ ಗಿಲ್ಗೆ ಸಲ್ಲಬೇಕು. ಕುಲ್ದೀಪ್ ಬೌಲಿಂಗ್ನಲ್ಲಿ ಶಾಟ್ ಲೆಗ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗಿಲ್, ಹಸನ್ ಆಡಿದ ಬಾಲನ್ನು ಸೆಕೆಂಡ್ಗೂ ಕಡಿಮೆ ಸಮಯದಲ್ಲಿ ಕ್ಯಾಚ್ ಮಾಡಿದರು. 3ನೇ ವಿಕೆಟ್ ರೂಪದಲ್ಲಿ ಮುಶ್ಫಿಕರ್ ರಹೀಮ್ ವಿಕೆಟ್ ಕಬಳಿಸಿದ ಕುಲ್ದೀಪ್, ನಾಲ್ಕನೇ ವಿಕೆಟ್ ಆಗಿ ಇಸ್ಲಾಂರನ್ನು ಬಲಿ ಹಾಕಿದರು. ಅಂತಿಮವಾಗಿ ಖಲೀದ್ ವಿಕೆಟ್ ಪಡೆಯುವ ಮೂಲಕ ಕುಲ್ದೀಪ್ ಐದು ವಿಕೆಟ್ ಉರುಳಿಸಿದ ಸಾಧನೆ ಮಾಡಿದರು.
4. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ
ಅಂತಿಮವಾಗಿ ಮೆಹದಿ ಹಸನ್ ವಿಕೆಟ್ ಪಡೆಯುವ ಮೂಲಕ ಅಕ್ಷರ್ ಪಟೇಲ್ ಬಾಂಗ್ಲಾ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಸದ್ಯ 254 ರನ್ಗಳ ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ, ಬಾಂಗ್ಲಾಕ್ಕೆ ಫಾಲೋ ಆನ್ ಹೆರದೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ರಾಹುಲ್ ಹಾಗೂ ಗಿಲ್ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:04 am, Fri, 16 December 22