25 ವರ್ಷಗಳ ಹಿಂದಿನ ಘಟನೆಗೆ ರಾಹುಲ್ ಬಳಿ ಈಗ ಕ್ಷಮೆಯಾಚಿಸಿದ ಬಾಂಗ್ಲಾ ಕೋಚ್..!
IND vs BAN: ಬಾಂಗ್ಲಾದೇಶದ ಬೌಲಿಂಗ್ ಕೋಚ್ ಅಲನ್ ಡೊನಾಲ್ಡ್ 25 ವರ್ಷಗಳ ಹಿಂದಿನ ಅಹಿತರ ಘಟನೆಗೆ ಈಗ ರಾಹುಲ್ ದ್ರಾವಿಡ್ ಬಳಿ ಕ್ಷಮೆ ಯಾಚಿಸಿದ್ದಾರೆ.
ಪ್ರಸ್ತುತ ಟೀಂ ಇಂಡಿಯಾ, ಬಾಂಗ್ಲಾದೇಶ (India and Bangladesh) ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆರಂಭಿಸಿದೆ. ಡಿ.14ರಿಂದ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದ ಮೇಲೆ ಟೀಂ ಇಂಡಿಯಾ ಹಿಡಿತ ಸಾಧಿಸಿದೆ. ಈಗಾಗಲೇ ಮೊದಲನೇ ಇನ್ನಿಂಗ್ಸ್ ಆಡಿ ಮುಗಿಸಿರುವ ಭಾರತ, ಬಾಂಗ್ಲಾ ಎದುರು 404 ರನ್ಗಳ ಟಾರ್ಗೆಟ್ ಇಟ್ಟಿದೆ. ಈ ಗುರಿ ಬೆನ್ನಟ್ಟಿರುವ ಬಾಂಗ್ಲಾ ಪಡೆ ಫಾಲೋ ಆನ್ ಭೀತಿಯನ್ನು ಎದುರಿಸುತ್ತಿದೆ. ಟೀಂ ಇಂಡಿಯಾದ ಈ ಪ್ರದರ್ಶನದಿಂದಾಗಿ ಕೋಚ್ ರಾಹುಲ್ಗೆ ಕೊಂಚ ನೆಮ್ಮದಿ ಸಿಕ್ಕಿದೆ. ಏಕೆಂದರೆ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯನ್ನು ರೋಹಿತ್ (Rohit Sharma) ಪಡೆ ಸೋತಿತ್ತು. ಹೀಗಾಗಿ ಕೋಚ್ ರಾಹುಲ್ ಹಾಗೂ ನಾಯಕ ರೋಹಿತ್ ಮೇಲೆ ಪ್ರಶ್ನೆಗಳ ಮಳೆಯಾಗಿತ್ತು. ಅಲ್ಲದೆ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ಗೇರಲು ಭಾರತ ಈ ಸರಣಿಯನ್ನು ಗೆಲ್ಲಲೇಬೇಕಿದೆ. ಇದು ಪಂದ್ಯದ ಸ್ಥಿತಿಯಾದರೆ, ಪಂದ್ಯದಿಂದಾಚೆಗೆ ನಡೆದಿರುವ ಘಟನೆಯೊಂದು ಈಗ ರಾಹುಲ್ ದ್ರಾವಿಡ್ (Rahul Dravid) ಘನ ವ್ಯಕ್ತಿತ್ವ ಎಂಥಾದ್ದೂ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದೆ. ವಾಸ್ತವವಾಗಿ ಬಾಂಗ್ಲಾದೇಶದ ಬೌಲಿಂಗ್ ಕೋಚ್ ಅಲನ್ ಡೊನಾಲ್ಡ್ (Allan Donald) 25 ವರ್ಷಗಳ ಹಿಂದಿನ ಅಹಿತರ ಘಟನೆಗೆ ಈಗ ರಾಹುಲ್ ದ್ರಾವಿಡ್ ಬಳಿ ಕ್ಷಮೆ ಯಾಚಿಸಿದ್ದಾರೆ.
2. 25 ವರ್ಷಗಳ ಹಿಂದೆ ನಡೆದ ಘಟನೆ
ಈಗ ಬಾಂಗ್ಲಾದೇಶದ ಬೌಲಿಂಗ್ ಕೋಚ್ ಆಗಿರು ಅಲನ್ ಡೊನಾಲ್ಡ್ ಹಿಂದೆ ದಕ್ಷಿಣ ಆಫ್ರಿಕಾ ತಂಡದ ಅನುಭವಿ ವೇಗದ ಬೌಲರ್ ಆಗಿದ್ದರು. ಡೊನಾಲ್ಡ್ ಅವರ ಮಾರಕ ವೇಗದ ಬೌಲಿಂಗ್ ಮುಂದೆ ಯಾವ ಬ್ಯಾಟ್ಸ್‌ಮನ್‌ಗಳಿಗೂ ಸರಾಗವಾಗಿ ರನ್ ಗಳಿಸಲು ಕಷ್ಟಕರವಾಗಿತ್ತು. ಅಲನ್ ಡೊನಾಲ್ಡ್ ಬೌಲಿಂಗ್ ಮಾತ್ರವಲ್ಲ ಅವರ ಆಕ್ರಮಣಕಾರಿ ನಡವಳಿಕೆಯಿಂದಲೂ ಕ್ರಿಕೆಟ್ ಲೋಕದಲ್ಲಿ ಹೆಸರುವಾಸಿಯಾಗಿದ್ದರು. ಅಲ್ಲದೆ ಅವರು ಆಗಾಗ್ಗೆ ಪಂದ್ಯದ ನಡುವೆ ಎದುರಾಳಿ ತಂಡದ ಆಟಗಾರರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದರು. 25 ವರ್ಷಗಳ ಹಿಂದೆ ಭಾರತದ ವಿರುದ್ಧದ ಪಂದ್ಯದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಅಂದಿನ ಪಂದ್ಯದಲ್ಲಿ ಅಲನ್ ಡೊನಾಲ್ಡ್, ಟೀಂ ಇಂಡಿಯಾದ ಸವ್ಯಸಾಚಿ ರಾಹುಲ್ ದ್ರಾವಿಡ್ ಜೊತೆ ವಾಗ್ವಾದ ನಡೆಸಿದ್ದರು.
IND vs BAN: ಕುಲ್ದೀಪ್ ಸ್ಪಿನ್ ಮ್ಯಾಜಿಕ್; 150 ರನ್ಗಳಿಗೆ ಬಾಂಗ್ಲಾ ಆಲೌಟ್; ಭಾರತಕ್ಕೆ 254 ರನ್ ಮುನ್ನಡೆ
3. ದ್ರಾವಿಡ್ ಬಳಿ ಕ್ಷಮೆಯಾಚಿಸಿದ ಡೊನಾಲ್ಡ್
ವಾಸ್ತವವಾಗಿ 25 ವರ್ಷಗಳ ಹಿಂದೆ ಡರ್ಬನ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಸಚಿನ್ ಹಾಗೂ ದ್ರಾವಿಡ್ ಆಫ್ರಿಕಾದ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದರು. ಈ ವೇಳೆ ಇಬ್ಬರ ಆಟದಿಂದ ಬೇಸತಿದ್ದ ಡೊನಾಲ್ಡ್, ರಾಹುಲ್ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಇದೀಗ ಆ ದುರ್ವತನೆಯನ್ನು ನೆನಪಿಸಿಕೊಂಡಿರುವ ಡೊನಾಲ್ಡ್ ದ್ರಾವಿಡ್ ಬಳಿ ಕ್ಷಮೆಯಾಚಿಸಿದ್ದಾರೆ. ‘‘ಭಾರತದ ವಿರುದ್ಧದ ಆ ಪಂದ್ಯದಲ್ಲಿ ನಾನು ನನ್ನ ಎಲ್ಲೆ ಮೀರಿದ್ದೆ. ಡರ್ಬನ್‌ನಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಆ ಪಂದ್ಯದಲ್ಲಿ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ನಮ್ಮ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದರು. ಆದರೆ ನಾನು ಈಗ ಆ ಘಟನೆಯ ಬಗ್ಗೆ ಏನನ್ನು ಮಾತನಾಡಲು ಬಯಸುವುದಿಲ್ಲ. ರಾಹುಲ್ ದ್ರಾವಿಡ್ ಬಗ್ಗೆ ನನಗೆ ಗೌರವವಿದೆ. ನಾನು ರಾಹುಲ್ ಅವರನ್ನು ಭೇಟಿಯಾಗಲು ಬಯಸುತ್ತೇನೆ ಮತ್ತು ಆ ದಿನದ ನನ್ನ ವರ್ತನೆಗೆ ಕ್ಷಮೆಯಾಚಿಸಲು ಬಯಸುತ್ತೇನೆ.”
4. ಡೊನಾಲ್ಡ್ ಹೇಳಿದ್ದೇನು?
ನನ್ನ ಈ ಕೃತ್ಯದಿಂದ ನಾನು ರಾಹುಲ್ ದ್ರಾವಿಡ್ ವಿಕೆಟ್ ಪಡೆಯುವಲ್ಲಿ ನಾನು ಯಶಸ್ವಿಯಾದೆ. ಆದರೆ ಅಂದಿನ ನನ್ನ ವರ್ತನೆಯ ಬಗ್ಗೆ ವಿಷಾದದ ಭಾವನೆ ಇನ್ನೂ ಇದೆ. ಅಂದು ನಾನು ಮಾಡಿದ ತಪ್ಪಿಗೆ ಈಗ ರಾಹುಲ್ ದ್ರಾವಿಡ್ ಬಳಿ ಕ್ಷಮೆ ಯಾಚಿಸಲು ಬಯಸುತ್ತೇನೆ. ಅವರು ತುಂಬಾ ಒಳ್ಳೆಯ ಮನುಷ್ಯ. “ರಾಹುಲ್, ನೀವು ವೀಡಿಯೊವನ್ನು ವೀಕ್ಷಿಸುತ್ತಿದ್ದರೆ, ನಾನು ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ” ಎಂದು ಡೊನಾಲ್ಡ್ ಹೇಳಿಕೊಂಡಿದ್ದಾರೆ.
5. ವಿಡಿಯೋ ನೋಡಿ ನಕ್ಕ ದ್ರಾವಿಡ್
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಡೊನಾಲ್ಡ್ ಮಾತನಾಡಿರುವ ವಿಡಿಯೋವನ್ನು ನೋಡಿ ನಕ್ಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದ್ರಾವಿಡ್, “ಇದು ಎಲ್ಲಾ ಆಟದ ಭಾಗವಾಗಿದೆ. ಇದಕ್ಕಾಗಿ ಡೊನಾಲ್ಡ್ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಡೊನಾಲ್ಡ್ರನ್ನು ಹೊಗಳಿರುವ ದ್ರಾವಿಡ್, ಡೊನಾಲ್ಡ್ ಬಿಲ್ ಪಾವತಿಸುವುದಾದರೆ ನಾನು ಅವರ ಜೊತೆಗೆ ಡಿನ್ನರ್‌ಗೆ ಹೋಗಲು ಇಷ್ಟಪಡುತ್ತೇನೆ ಎಂದು ದ್ರಾವಿಡ್ ನಗುತ್ತಾ ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:28 am, Fri, 16 December 22