ಬಾಂಗ್ಲಾ ಬೌಲರ್ಗಳನ್ನು ಚೆಂಡಾಡಿದ ಭಾರತೀಯ ಬ್ಯಾಟರ್ಗಳು: ಇಲ್ಲಿದೆ ಹೈಲೈಟ್ಸ್ ವಿಡಿಯೋ
India vs Bangladesh T20I: ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಮೊದಲ ಮ್ಯಾಚ್ನಲ್ಲಿ 7 ವಿಕೆಟ್ಗಳ ಜಯ ಸಾಧಿಸಿದ್ದ ಭಾರತ, ಎರಡನೇ ಪಂದ್ಯವನ್ನು 86 ರನ್ಗಳ ಅಂತರದಿಂದ ಗೆದ್ದುಕೊಂಡಿತು. ಇದೀಗ ಮೂರನೇ ಮ್ಯಾಚ್ನಲ್ಲಿ 133 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಶನಿವಾರ ರನ್ ಸುರಿಮಳೆಯಾಗಿದೆ. ಅದು ಕೂಡ ದಾಖಲೆಯ 297 ರನ್ಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ. ಬಾಂಗ್ಲಾದೇಶ್ ವಿರುದ್ದದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (4) ಬೇಗನೆ ಔಟಾದರು. ಈ ವೇಳೆ ಜೊತೆಗೂಡಿದ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಕೇವಲ 47 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ 11 ಫೋರ್ ಹಾಗೂ 8 ಸಿಕ್ಸ್ಗಳೊಂದಿಗೆ 111 ರನ್ ಚಚ್ಚಿದರು. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ 35 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 75 ರನ್ ಬಾರಿಸಿದರು. ಆ ಬಳಿಕ ಬಂದ ರಿಯಾನ್ ಪರಾಗ್ 13 ಎಸೆತಗಳಲ್ಲಿ 34 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 47 ರನ್ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಸಿಕ್ಸ್ ಸಿಡಿಸುವ ಮೂಲಕ ಟೀಮ್ ಇಂಡಿಯಾ ಮೊತ್ತವನ್ನು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 297 ರನ್ಗೆ ತಂದು ನಿಲ್ಲಿಸಿದರು.
298 ರನ್ಗಳ ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ಪರ ತೌಹಿದ್ ಹೃದೋಯ್ 63 ರನ್ ಬಾರಿಸಿದರೆ, ಲಿಟ್ಟನ್ ದಾಸ್ 42 ರನ್ ಕಲೆಹಾಕಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು. ಈ ಮೂಲಕ ಟೀಮ್ ಇಂಡಿಯಾ 133 ರನ್ಗಳ ಭರ್ಜರಿ ಜಯ ಸಾಧಿಸಿದೆ.