
ಭಾರತ ತಂಡದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಇಂದಿನಿಂದ ಆರಂಭವಾಗಲಿದೆ. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಲೀಗ್ ಹಂತದ ಮೊದಲ ಪಂದ್ಯದಲ್ಲೇ ಗೆಲ್ಲುವ ಮೂಲಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸುವ ಇರಾದೆಯಲ್ಲಿದೆ. ಇದಾಗ್ಯೂ ಬಾಂಗ್ಲಾದೇಶ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.
ಏಕೆಂದರೆ ಟೀಮ್ ಇಂಡಿಯಾ ದುಬೈನಲ್ಲಿ ಏಕದಿನ ಪಂದ್ಯವಾಡಿ ವರ್ಷಗಳೇ ಕಳೆದಿವೆ. ಅದರಲ್ಲೂ ಅಲ್ಲಿನ ಪಂದ್ಯಗಳಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುತ್ತದೆ. ಹೀಗಾಗಿ ಭಾರತ ಮತ್ತು ಬಾಂಗ್ಲಾದೇಶ್ ನಡುವಿನ ಪಂದ್ಯದಲ್ಲಿ ಉತ್ತಮ ಪೈಪೋಟಿ ನಿರೀಕ್ಷಿಸಬಹುದು.
ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ತಂಡಗಳು ಒಟ್ಟು 41 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 32 ಬಾರಿ ಜಯ ಸಾಧಿಸಿದರೆ, ಬಾಂಗ್ಲಾದೇಶ್ 8 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಮ್ಯಾಚ್ ಕಾರಣಾಂತರಗಳಿಂದ ರದ್ದಾಗಿತ್ತು.
ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2.30 ರಿಂದ ಶುರುವಾಗಲಿದೆ. ಇನ್ನು ಟಾಸ್ ಪ್ರಕ್ರಿಯೆ 2 ಗಂಟೆಗೆ ನಡೆಯಲಿದೆ.
ಈ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್ ಸ್ಟಾರ್ ಆ್ಯಪ್ ಹಾಗೂ ವೆಬ್ ಸೈಟ್‌ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.