ಟೀಮ್ ಇಂಡಿಯಾ ಕೈಯಲ್ಲಿ ಪಾಕಿಸ್ತಾನ್ ತಂಡದ ಚಾಂಪಿಯನ್ಸ್ ಟ್ರೋಫಿ ಭವಿಷ್ಯ
Champions Trophy 2025: ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದಲ್ಲಿ ತಂಡವೊಂದಕ್ಕೆ ಕೇವಲ ಮೂರು ಪಂದ್ಯಗಳು ಮಾತ್ರ ಇರಲಿದೆ. ಈ ಮೂರು ಪಂದ್ಯಗಳಲ್ಲಿ ಅತೀ ಹೆಚ್ಚು ಗೆಲುವು ಅಥವಾ ಅತ್ಯಧಿಕ ನೆಟ್ ರನ್ ರೇಟ್ ಪಡೆಯುವ 4 ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುತ್ತದೆ. ಅಂದರೆ ಗ್ರೂಪ್-ಎ ಮತ್ತು ಗ್ರೂಪ್-ಬಿ ಯಿಂದ ತಲಾ ಎರಡು ಟೀಮ್ಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಇದೀಗ ಮೊದಲ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ್ ತಂಡದ ಪಾಲಿಗೆ ಮುಂದಿನ 2 ಮ್ಯಾಚ್ಗಳು ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.

ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನ್ ತಂಡ ಮಕಾಡೆ ಮಲಗಿದೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಪಾಕಿಸ್ತಾನ್ ನ್ಯೂಝಿಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ ಪರ ವಿಲ್ ಯಂಗ್ (107) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲ್ಯಾಥಮ್ (118) ಶತಕ ಬಾರಿಸಿದ್ದರು.
ಈ ಶತಕಗಳ ನೆರವಿನಿಂದ ನ್ಯೂಝಿಲೆಂಡ್ ತಂಡವು 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 320 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 47.2 ಓವರ್ಗಳಲ್ಲಿ ಕೇವಲ 260 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ನ್ಯೂಝಿಲೆಂಡ್ 60 ರನ್ಗಳ ಜಯ ಸಾಧಿಸಿದೆ.
ಈ ಸೋಲಿನೊಂದಿಗೆ ಪಾಕಿಸ್ತಾನ್ ತಂಡದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಏಕೆಂದರೆ ಸೆಮಿಫೈನಲ್ಗೇರಲು ಕನಿಷ್ಠ 2 ಪಂದ್ಯಗಳಲ್ಲಿ ಜಯ ಸಾಧಿಸಬೇಕು. ಇದೀಗ ಮೊದಲ ಪಂದ್ಯದಲ್ಲಿ ಸೋತಿರುವ ಪಾಕ್ ತಂಡದ ಮುಂದಿನ ಪಂದ್ಯ ಟೀಮ್ ಇಂಡಿಯಾ ವಿರುದ್ಧ..!
ಭಾರತದ ಕೈಯಲ್ಲಿ ಪಾಕ್ ಭವಿಷ್ಯ:
ಫೆಬ್ರವರಿ 23 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ್ ಪಡೆ ಮುಗ್ಗರಿಸಿದರೆ, ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ.
ಏಕೆಂದರೆ ಮೊದಲ ಪಂದ್ಯದಲ್ಲಿ ಗೆದ್ದಿರುವ ನ್ಯೂಝಿಲೆಂಡ್ ತಂಡವು ಮುಂದಿನ ಎರಡು ಮ್ಯಾಚ್ಗಳಲ್ಲಿ ಒಂದು ಜಯ ಸಾಧಿಸಿದರೆ ಸಾಕು. ಇಲ್ಲಿ ಕಿವೀಸ್ ಪಡೆಯ ಎದುರಾಳಿಗಳು ಬಾಂಗ್ಲಾದೇಶ್ ಮತ್ತು ಭಾರತ. ಅಂದರೆ ಭಾರತದ ವಿರುದ್ಧ ಸೋತರೂ, ನ್ಯೂಝಿಲೆಂಡ್ ಬಾಂಗ್ಲಾದೇಶ್ ವಿರುದ್ಧ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಅದರಂತೆ ನ್ಯೂಝಿಲೆಂಡ್ ತಂಡವನ್ನು ಸೆಮಿಫೈನಲ್ನಲ್ಲಿ ಎದುರು ನೋಡಬಹುದು.
ಇತ್ತ ಬಲಿಷ್ಠ ಟೀಮ್ ಇಂಡಿಯಾ ಕೂಡ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳನ್ನು ಬಗ್ಗು ಬಡಿಯುವುದನ್ನು ನಿರೀಕ್ಷಿಸಬಹುದು. ಈ ಮೂಲಕ ಭಾರತ ತಂಡ ಕೂಡ ಸೆಮಿಫೈನಲ್ಗೇರುವ ಸಾಧ್ಯತೆ ಹೆಚ್ಚಿದೆ.
ಹೀಗಾಗಿ ಫೆಬ್ರವರಿ 23 ರಂದು ನಡೆಯಲಿರುವ ಭಾರತದ ವಿರುದ್ಧದ ಹೈವೋಲ್ಟೇಜ್ ಪಂದ್ಯದ ಮೂಲಕ ಪಾಕಿಸ್ತಾನ್ ತಂಡದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಅಂತ್ಯಗೊಳ್ಳಲಿದೆ ಎಂದೇ ಹೇಳಬಹುದು.
ಇದನ್ನೂ ಓದಿ: ನೈಂಟಿ ಎಸೆತಗಳಲ್ಲಿ ಪಲ್ಟಿ: ಅತ್ಯಂತ ಹೀನಾಯ ದಾಖಲೆ ಬರೆದ ಬಾಬರ್ ಆಝಂ
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ:
- ಭಾರತ vs ಬಾಂಗ್ಲಾದೇಶ್: ಫೆಬ್ರವರಿ 20 (ದುಬೈ)
- ಭಾರತ vs ಪಾಕಿಸ್ತಾನ್: ಫೆಬ್ರವರಿ 23 (ದುಬೈ)
- ಭಾರತ vs ನ್ಯೂಝಿಲೆಂಡ್: ಮಾರ್ಚ್ 2 (ದುಬೈ)
- ಸೆಮಿಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 4 (ದುಬೈ)
- ಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 9 (ದುಬೈ)