- Kannada News Photo gallery Cricket photos Babar Azam creates an unwanted record in Champions Trophy 2025
ನೈಂಟಿ ಎಸೆತಗಳಲ್ಲಿ ಪಲ್ಟಿ: ಅತ್ಯಂತ ಹೀನಾಯ ದಾಖಲೆ ಬರೆದ ಬಾಬರ್ ಆಝಂ
Champions Trophy 2025: ಚಾಂಪಿಯನ್ಸ್ ಟ್ರೋಫಿ 2025ರ ಉದ್ಘಾಟನಾ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ 320 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಕೇವಲ 260 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ನ್ಯೂಝಿಲೆಂಡ್ 60 ರನ್ಗಳ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಪಾಕ್ ಆಟಗಾರ ಬಾಬರ್ ಆಝಂ ಅನಗತ್ಯ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
Updated on: Feb 20, 2025 | 7:54 AM

ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಪಾಕಿಸ್ತಾನ್ ತಂಡ ಮುಗ್ಗರಿಸಿದೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂ ಹೀನಾಯ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಪರ ವಿಲ್ ಯಂಗ್ (107) ಹಾಗೂ ಟಾಮ್ ಲ್ಯಾಥಮ್ (118) ಶತಕ ಬಾರಿಸಿದರು. ಈ ಶತಕಗಳ ನೆರವಿನಿಂದ ನ್ಯೂಝಿಲೆಂಡ್ ತಂಡ 50 ಓವರುಗಳಲ್ಲಿ 320 ಕಲೆಹಾಕಿತು.

321 ರನ್ ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಬಾಬರ್ ಆಝಂ ಹಾಗೂ ಸೌದ್ ಶಕೀಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. 6 ರನ್ ಗಳಿಸಿ ಸೌದ್ ಔಟಾದರೆ, ಬಾಬರ್ ಮಾತ್ರ ಕ್ರೀಸ್ ಕಚ್ಚಿ ನಿಂತಿದ್ದರು. ಇದಾಗ್ಯೂ ಕಿವೀಸ್ ಬೌಲರ್‌ಗಳ ಎದುರು ರನ್ ಗಳಿಸಲು ಪರದಾಡಿದರು.

ಪರಿಣಾಮ ಅರ್ಧಶತಕ ಪೂರೈಸಲು ಬಾಬರ್ ಆಝಂ ಬರೋಬ್ಬರಿ 81 ಎಸೆತಗಳನ್ನು ತೆಗೆದುಕೊಂಡರು. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಂತ ನಿಧಾನಗತಿಯಲ್ಲಿ ಅರ್ಧಶತಕ ಬಾರಿಸಿದ ಸಕ್ರಿಯ ಬ್ಯಾಟರ್ ಕುಖ್ಯಾತಿಯು ಬಾಬರ್ ಪಾಲಾಯಿತು. ಅಷ್ಟೇ ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತೀ ಹೆಚ್ಚು ಎಸೆತಗಳನ್ನು ಎದುರಿಸಿ ಹಾಫ್ ಸೆಂಚುರಿ ಪೂರೈಸಿದ ಪಾಕಿಸ್ತಾನದ 2ನೇ ಬ್ಯಾಟರ್ ಎನಿಸಿಕೊಂಡರು.

ಇದಕ್ಕೂ ಮುನ್ನ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಪಾಕಿಸ್ತಾನ್ ತಂಡದ ಮಾಜಿ ಆರಂಭಿಕ ನಾಸರ್ ಜೆಮ್ಶೇಡ್ 83 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದೀಗ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಬಾಬರ್ ಆಝಂ ಈ ಕಳಪೆ ದಾಖಲೆ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ 90 ಎಸೆತಗಳನ್ನು ಎದುರಿಸಿದ ಬಾಬರ್ ಆಝಂ ಕಲೆಹಾಕಿದ್ದು 64 ರನ್ ಗಳು ಮಾತ್ರ. ಇದರಿಂದ ಒತ್ತಡಕ್ಕೊಳಗಾದ ಪಾಕಿಸ್ತಾನದ ಉಳಿದ ಬ್ಯಾಟರ್ಗಳು ಬಿರುಸಿನ ಹೊಡೆತಗಳಿಗೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಪರಿಣಾಮ ಪಾಕ್ ಪಡೆ 47.2 ಒವರುಗಳಲ್ಲಿ 260 ರನ್ಗಳಿಸಿ ಆಲೌಟ್ ಆಯಿತು. ಅತ್ತ ನ್ಯೂಝಿಲೆಂಡ್ ಮೊದಲ ಪಂದ್ಯದಲ್ಲೇ 60 ರನ್ ಗಳ ಭರ್ಜರಿ ಜಯ ಸಾಧಿಸಿ ಗೆಲುವಿನ ಖಾತೆ ತೆರೆದಿದೆ.



















