IND vs BAN: ಜೆಮಿಮಾ ಮಿಂಚಿಂಗ್: ಟೀಮ್ ಇಂಡಿಯಾಗೆ ಅಮೋಘ ಗೆಲುವು

| Updated By: ಝಾಹಿರ್ ಯೂಸುಫ್

Updated on: Jul 19, 2023 | 4:53 PM

India vs Bangladesh: ಎರಡನೇ ಏಕದಿನ ಪಂದ್ಯದಲ್ಲಿ 108 ರನ್​ಗಳ ಅಮೋಘ ಜಯ ಸಾಧಿಸಿ ಟೀಮ್ ಇಂಡಿಯಾ ಸರಣಿ ಗೆಲ್ಲುವ ಆಸೆಯನ್ನು ಜೀವಂತವಿರಿಸಿಕೊಂಡಿದೆ.

IND vs BAN: ಜೆಮಿಮಾ ಮಿಂಚಿಂಗ್: ಟೀಮ್ ಇಂಡಿಯಾಗೆ ಅಮೋಘ ಗೆಲುವು
Jemimah - Team India
Follow us on

Bangladesh Women vs India Women: ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವನಿತೆಯರ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವನಿತೆಯರು ಅಮೋಘ ಗೆಲುವು ದಾಖಲಿಸಿದ್ದಾರೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿದ್ದಾರೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕಿ ನಿಗರ್ ಸುಲ್ತಾನ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಮತ್ತೊಮ್ಮೆ ಆರಂಭಿಕ ವೈಫಲ್ಯಕ್ಕೀಡಾಯಿತು. ಆರಂಭಿಕ ಆಟಗಾರ್ತಿ ಪ್ರಿಯಾ ಪುನಿಯಾ ಕೇವಲ 7 ರನ್​ಗಳಿಸಿ ಔಟಾದರೆ, ಇದರ ಬೆನ್ನಲ್ಲೇ ಯಸ್ತಿಕಾ ಭಾಟಿಯಾ (15) ಕೂಡ ವಿಕೆಟ್ ಒಪ್ಪಿಸಿದರು. ಇನ್ನು ಸ್ಮೃತಿ ಮಂಧಾನ 36 ರನ್​ಗಳಿಸಿ ರಬಿಯಾ ಎಸೆತದಲ್ಲಿ ಬೌಲ್ಡ್ ಆದರು.

ಈ ಹಂತದಲ್ಲಿ ಜೊತೆಯಾದ ನಾಯಕಿ ಹರ್ಮನ್​ಪ್ರೀತ್ ಕೌರ್ ಹಾಗೂ ಜೆಮಿಮಾ ರೊಡ್ರಿಗಸ್ 4ನೇ ವಿಕೆಟ್​ಗೆ 131 ರನ್​ಗಳ ಜೊತೆಯಾಟವಾಡಿದರು. ಇದರ ಬೆನ್ನಲ್ಲೇ ಅರ್ಧಶತಕ ಬಾರಿಸಿದ ಹರ್ಮನ್​ಪ್ರೀತ್ ಕೌರ್ (52) ಬಿರುಸಿನ ಹೊಡೆತಕ್ಕೆ ಮುಂದಾಗಿ ಔಟಾದರು.

ಮತ್ತೊಂದೆಡೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಜೆಮಿಮಾ 78 ಎಸೆತಗಳಲ್ಲಿ 9 ಫೋರ್​ಗಳೊಂದಿಗೆ 86 ರನ್​ ಬಾರಿಸಿದರು. ಪರಿಣಾಮ ಟೀಮ್ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 228 ರನ್​ ಕಲೆಹಾಕಿತು.

229 ರನ್​ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡಕ್ಕೆ ಬೌಲಿಂಗ್ ಮೂಲಕ ಕೂಡ ಜೆಮಿಮಾ ರೊಡ್ರಿಗಸ್ ಆಘಾತ ನೀಡಿದರು. ಆರಂಭದಲ್ಲೇ ಮುರ್ಶಿದಾ ಖಾತುನ್ (12) ವಿಕೆಟ್ ಕಬಳಿಸಿ ಮೇಘನಾ ಮೊದಲ ಯಶಸ್ಸು ತಂದುಕೊಟ್ಟರೆ, ಇದರ ಬೆನ್ನಲ್ಲೇ ದೀಪ್ತಿ ಶರ್ಮಾ 2ನೇ ವಿಕೆಟ್ ಕಬಳಿಸಿದರು. ಇನ್ನು ಸ್ನೇಹ್ ರಾಣಾ 3ನೇ ವಿಕೆಟ್ ಪಡೆದರು.

ಕೇವಲ 38 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬಾಂಗ್ಲಾದೇಶ್ ತಂಡಕ್ಕೆ ಫರ್ಗಾನಾ (47) ಆಸರೆಯಾಗಿ ನಿಂತಿದ್ದರು. ಆದರೆ ದೇವಿಕಾ ವೈದ್ಯ ಎಸೆತವನ್ನು ಗುರುತಿಸುವಲ್ಲಿ ಎಡವಿದ ಫರ್ಗಾನಾ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ದಾಳಿಗಿಳಿದ ಜೆಮಿಮಾ ರೊಡ್ರಿಗಸ್ ಬಾಂಗ್ಲಾದೇಶ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಸ್ಪಿನ್ ಮೋಡಿ ಮಾಡಿದ ಜೆಮಿಮಾ 3.1 ಓವರ್​ಗಳಲ್ಲಿ ಕೇವಲ 3 ರನ್ ನೀಡಿ 4 ವಿಕೆಟ್ ಉರುಳಿಸಿದರು. ಪರಿಣಾಮ 35.1 ಓವರ್​ಗಳಲ್ಲಿ ಬಾಂಗ್ಲಾದೇಶ್ ತಂಡವು 120 ರನ್​ಗಳಿಸಿ ಆಲೌಟ್ ಆಯಿತು.

ಈ ಮೂಲಕ 108 ರನ್​ಗಳ ಅಮೋಘ ಜಯ ಸಾಧಿಸಿ ಟೀಮ್ ಇಂಡಿಯಾ ಸರಣಿ ಗೆಲ್ಲುವ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಇದೀಗ 3 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಬಲಗೊಂಡಿದ್ದು, ಶನಿವಾರ ನಡೆಯಲಿರುವ ಕೊನೆಯ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವ ತಂಡವು ಟ್ರೋಫಿ ಎತ್ತಿ ಹಿಡಿಯಲಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ 11: ಪ್ರಿಯಾ ಪುನಿಯಾ , ಸ್ಮೃತಿ ಮಂಧಾನ , ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್) , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಜೆಮಿಮಾ ರೊಡ್ರಿಗಸ್ , ಹರ್ಲೀನ್ ಡಿಯೋಲ್ , ಅಮನ್ಜೋತ್ ಕೌರ್ , ದೀಪ್ತಿ ಶರ್ಮಾ , ಸ್ನೇಹ ರಾಣಾ , ದೇವಿಕಾ ವೈದ್ಯ , ಮೇಘನಾ ಸಿಂಗ್.

ಇದನ್ನೂ ಓದಿ: Team India: ಒಟ್ಟು 47 ಪ್ಲೇಯರ್ಸ್​: ಟೀಮ್ ಇಂಡಿಯಾದಿಂದ 32 ಆಟಗಾರರು ಔಟ್..!

ಬಾಂಗ್ಲಾದೇಶ್ ಪ್ಲೇಯಿಂಗ್ 11: ಮುರ್ಶಿದಾ ಖಾತುನ್ , ಶರ್ಮಿನ್ ಅಖ್ತರ್ , ಫರ್ಗಾನಾ ಹೋಕ್ , ನಿಗರ್ ಸುಲ್ತಾನಾ (ನಾಯಕಿ) , ರಿತು ಮೋನಿ , ರಬಿಯಾ ಖಾನ್ , ಲತಾ ಮೊಂಡಲ್ , ನಹಿದಾ ಅಕ್ತರ್ , ಫಾಹಿಮಾ ಖಾತುನ್ , ಸುಲ್ತಾನಾ ಖಾತುನ್ , ಮಾರುಫಾ ಅಕ್ತರ್.