KL Rahul: ‘ಸ್ವಲ್ಪ ಟೈಮ್ ತಗೊಳ್ಳುತ್ತೆ’; ಕಳಪೆ ಫಾರ್ಮ್​ ಬಗ್ಗೆ ನಾಯಕ ರಾಹುಲ್ ಹೇಳಿದ್ದಿದು

| Updated By: ಪೃಥ್ವಿಶಂಕರ

Updated on: Dec 26, 2022 | 1:10 PM

KL Rahul: ಖಂಡಿತವಾಗಿಯೂ ನನ್ನ ಪ್ರದರ್ಶನ ಉತ್ತಮವಾಗಿರಲಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ ಆದರೆ ಅದು ಕೆಲಸ ಮಾಡಲಿಲ್ಲ ಎಂದಿದ್ದಾರೆ.

KL Rahul: ‘ಸ್ವಲ್ಪ ಟೈಮ್ ತಗೊಳ್ಳುತ್ತೆ’; ಕಳಪೆ ಫಾರ್ಮ್​ ಬಗ್ಗೆ ನಾಯಕ ರಾಹುಲ್ ಹೇಳಿದ್ದಿದು
ಟ್ರೋಫಿಯೊಂದಿಗೆ ರಾಹುಲ್
Follow us on

ಟೆಸ್ಟ್ ಸರಣಿಯನ್ನು ಗೆಲ್ಲುವುದರೊಂದಿಗೆ ಬಾಂಗ್ಲಾ ಪ್ರವಾಸ ಮುಗಿಸಿರುವ ಟೀಂ ಇಂಡಿಯಾ (India Vs Bangladesh) ಇದೀಗ ವಿಶ್ರಾಂತಿ ಮೂಡ್​ನಲ್ಲಿದೆ. ಆದರೆ ಬಿಸಿಸಿಐಗೆ (BCCI) ಹೊಸ ತಲೆನೋವು ಶುರುವಾಗಿದೆ. ಅದೇನೆಂದರೆ ಸ್ಟಾರ್ ಆಟಗಾರರ ಕಳಪೆ ಫಾರ್ಮ್​. ನಾಯಕ ರೋಹಿತ್ ಶರ್ಮಾ (Rohit Sharma) ಸೇರಿದಂತೆ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಹಾಗೂ ಈ ಸರಣಿಯಲ್ಲಿ ನಾಯಕತ್ವ ವಹಿಸಿದ್ದ ಕೆಎಲ್ ರಾಹುಲ್ (KL Rahul) ಟೆಸ್ಟ್ ಕ್ರಿಕೆಟ್​ನಲ್ಲಿ ಮಿಂಚುತ್ತಿಲ್ಲ. ಇದು ಬಿಸಿಸಿಐಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಖಾಯಂ ನಾಯಕ ರೋಹಿತ್ ಇಂಜುರಿಗೊಂಡಿದ್ದರಿಂದ ಕೆಎಲ್ ರಾಹುಲ್​ಗೆ ತಂಡದ ನಾಯಕತ್ವ ವಹಿಸಲಾಗಿತ್ತು. ರಾಹುಲ್ ನಾಯಕತ್ವದಲ್ಲಿ ಭಾರತ ಸರಣಿ ಏನೋ ಗೆದ್ದುಕೊಂಡಿದೆ ಆದರೆ ಟೀಂನ ಹಂಗಾಮಿ ನಾಯಕ ರಾಹುಲ್ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ರಾಹುಲ್ ಅವರ ಈಗಿನ ಫಾರ್ಮ್. ತಮ್ಮ ಫಾರ್ಮ್ ಬಗ್ಗೆ ಸ್ವತಃ ರಾಹುಲ್ ಅವರೇ ಮೌನಮುರಿದಿದ್ದು, ತಮ್ಮ ತಪ್ಪನ್ನು ತಾವೇ ಒಪ್ಪಿಕೊಂಡಿದ್ದಾರೆ.

ಈ ಸರಣಿಯಲ್ಲಿ ರಾಹುಲ್ ಅವರ ಬ್ಯಾಟ್ ಎಳ್ಳಷ್ಟೂ ಕೆಲಸ ಮಾಡಲಿಲ್ಲ. ಒಟ್ಟು ನಾಲ್ಕು ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಕೇವಲ 57 ರನ್ ಗಳಿಸಲಷ್ಟೇ ಶಕ್ತರಾದರು. ಚಟ್ಟೋಗ್ರಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ರಾಹುಲ್ 22 ಮತ್ತು 23 ರನ್ ಗಳಿಸಿದ್ದರೆ, ಎರಡನೇ ಪಂದ್ಯದಲ್ಲಿ 10 ಮತ್ತು ಎರಡು ರನ್ ಗಳಿಸಿದರು. ಅಲ್ಲದೆ ರನ್​ಗಳಿಸುವುದಿರಲಿ ರಾಹುಲ್ ಮೈದಾನದಲ್ಲಿ ಹೆಚ್ಚು ಹೊತ್ತು ಸಮಯ ಕೂಡ ಕಳೆಯಲಿಲ್ಲ.

ಅಶ್ವಿನ್- ಅಯ್ಯರ್ ದಾಖಲೆಯ ಜೊತೆಯಾಟ; 28 ವರ್ಷಗಳ ಹಿಂದಿನ ಪಾಕ್ ದಾಖಲೆ ಉಡೀಸ್!

ಯಾವುದೂ ದೀರ್ಘಕಾಲ ಉಳಿಯುವುದಿಲ್ಲ

ಹೀಗಾಗಿ ಎರಡನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಗೆ ಬಂದ ರಾಹುಲ್ ಅವರ ಬಳಿ ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ರಾಹುಲ್, “ನಾನು ಸಾಕಷ್ಟು ಕ್ರಿಕೆಟ್ ಆಡಿದ್ದೇನೆ ಮತ್ತು ಅದರಲ್ಲಿ ಏರಿಳಿತಗಳನ್ನು ಕಂಡಿದ್ದೇನೆ. ಯಾವುದೂ ಕೂಡ ನಮ್ಮೊಂದಿಗೆ ದೀರ್ಘಕಾಲ ಉಳಿಯುವುದಿಲ್ಲ ಎಂದು ನನಗೆ ತಿಳಿದಿದೆ. ಹಳೆಯದನ್ನು ಮರೆತು ನಾವು ಮುಂದೆ ಸಾಗಬೇಕು. ಅಲ್ಲದೆ ನಾವು ಯಾವಾಗಲೂ ಆಟದಲ್ಲಿ ಉತ್ತಮವಾಗಿ ಮತ್ತು ಸುಧಾರಿಸಲು ಪ್ರಯತ್ನಿಸಬೇಕು. ಒಬ್ಬ ಆಟಗಾರ ಎಲ್ಲಾ ಮೂರು ಸ್ವರೂಪಗಳನ್ನು ಆಡುತ್ತಿರುವಾಗ ಒಂದು ಸ್ವರೂಪದಿಂದ ಇನ್ನೊಂದು ಸ್ವರೂಪಕ್ಕೆ ತನ್ನ ಆಟವನ್ನು ಬದಲಾಯಿಸುವುದು ಕಷ್ಟ. ವೈಯಕ್ತಿಕವಾಗಿ, ನಾನು ದೀರ್ಘಕಾಲ ಟೆಸ್ಟ್ ಕ್ರಿಕೆಟ್ ಆಡಿರಲಿಲ್ಲ. ಆದ್ದರಿಂದ ಆ ಪರಿಸರಕ್ಕೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಅಲ್ಲದೆ ಈ ಸರಣಿಗೆ ಸಂಬಂಧಿಸಿದಂತೆ ಮಾತನಾಡಿದ ರಾಹುಲ್, ಖಂಡಿತವಾಗಿಯೂ ನನ್ನ ಪ್ರದರ್ಶನ ಉತ್ತಮವಾಗಿರಲಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ ಆದರೆ ಅದು ಕೆಲಸ ಮಾಡಲಿಲ್ಲ. ಆದರೆ ನಾನು ಮೊದಲೇ ಹೇಳಿದಂತೆ, ನಾನು ಉತ್ತಮವಾಗಿ ಏನು ಮಾಡಬಹುದೆಂದು ನೋಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ವಿಕೆಟ್ ಕಳೆದುಕೊಳ್ಳಲೇಬೇಕು

ಇನ್ನು ಬೇಗನೇ ವಿಕೆಟ್ ಕೈಚೆಲ್ಲುವ ಬಗ್ಗೆ ಮಾತನಾಡಿದ ರಾಹುಲ್, ಸಾಗರೋತ್ತರ ಪರಿಸ್ಥಿತಿಗಳಿರಲಿ ಅಥವಾ ಯಾವುದೇ ಇತರ ಪರಿಸ್ಥಿತಿಗಳು ಇರಲಿ ಪ್ರತಿಯೊಬ್ಬ ಆಟಗಾರನೂ ವಿಕೆಟ್ ಕಳೆದುಕೊಳ್ಳಲೇಬೇಕು. ಪಿಚ್ ಹೆಚ್ಚು ಸ್ಪಿನ್ನರ್‌ಗಳಿಗೆ ಸಹಾಯಕವಾಗಿದ್ದಗಲೂ ಸ್ಪಿನ್ನರ್‌ಗಳು ವಿಕೆಟ್ ಕಳೆದುಕೊಳ್ಳುತ್ತಾರೆ. ಹಾಗೆಯೇ ಪಿಚ್ ವೇಗದ ಬೌಲರ್‌ಗಳಿಗೆ ನೆರವಾಗುವಾಗಲೂ ವೇಗದ ಬೌಲರ್​ಗಳು ವಿಕೆಟ್ ಕಳೆದುಕೊಳ್ಳುತ್ತಾರೆ. ಆದ್ದರಿಂದ ಸ್ಪಿನ್ನರ್‌ಗಳಿಗೆ ವಿಕೆಟ್ ಒಪ್ಪಿಸುತ್ತಿದ್ದೀರ ಅಥವಾ ವೇಗದ ಬೌಲರ್‌ಗಳಿಗೆ ಔಟಾಗುತ್ತಿದ್ದೀರಾ ಎಂಬುದನ್ನು ಹೆಚ್ಚು ಯೋಚಿಸುವುದಿಲ್ಲ ಎಂದಿದ್ದಾರೆ.

ಮುಂದಿನ ಟಾರ್ಗೆಟ್ ಆಸ್ಟ್ರೇಲಿಯಾ

ಭಾರತ ಈಗ ಮುಂದಿನ ವರ್ಷದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಒಂದು ವೇಳೆ ಈ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಹುಲ್, ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡರೆ, ಖಂಡಿತವಾಗಿಯೂ ತನ್ನ ಫಾರ್ಮ್‌ಗೆ ಮರಳಲು ಪ್ರಯತ್ನಿಸಲಿದ್ದಾರೆ. ಏಕೆಂದರೆ ಈ ಸರಣಿಯಲ್ಲಿ ಮಿಂಚಿದರೆ, ರಾಹುಲ್​ಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡುವ ಅವಕಾಶ ಸಿಗಲಿದೆ. ಅಲ್ಲದೆ ಐಸಿಸಿ ಡಬ್ಲ್ಯುಟಿಸಿ ಫೈನಲ್ ತಲುಪಲು ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲಲೇಬೇಕಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ 4-0 ಅಂತರದಲ್ಲಿ ಗೆದ್ದರೆ ಸುಲಭವಾಗಿ ಫೈನಲ್‌ ಪ್ರವೇಶಿಸಲಿದೆ. ಅಲ್ಲದೆ ಸರಣಿಯನ್ನು 3-0 ಅಥವಾ 3-1 ಅಂತರದಿಂದ ಗೆದ್ದರೂ ಸುಲಭವಾಗಿ ಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಳ್ಳಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Mon, 26 December 22