
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದನೇ ಟೆಸ್ಟ್ ಪಂದ್ಯ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ (Oval Test) ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್ ಗಳಿಸಿತು. ಆ ಬಳಿಕ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 247 ರನ್ಗಳಿಗೆ ಆಲೌಟ್ ಆಯಿತು. ಇದೀಗ ಎರಡನೇ ಇನ್ನಿಂಗ್ಸ್ ಆಡುತ್ತಿರುವ ಟೀಂ ಇಂಡಿಯಾ ಪ್ರಸ್ತುತ 350 ರನ್‌ಗಳ ಗಡಿ ದಾಟಿದೆ. ತಂಡದ ಪರ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ಶತಕ ಬಾರಿಸಿದರೆ, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ಗೆ ಸ್ಪರ್ಧಾತ್ಮಕ ಮೊತ್ತವನ್ನೇ ಗುರಿಯಾಗಿ ನೀಡುತ್ತಿದೆ. ಹಾಗಿದ್ದರೆ, ಈ ಮೈದಾನದಲ್ಲಿ ಇಂಗ್ಲೆಂಡ್ ತಂಡ ಎಷ್ಟು ರನ್ಗಳನ್ನು ಬೆನ್ನಟ್ಟಿ ಗೆಲುವು ಸಾಧಿಸಿದೆ ಎಂಬುದನ್ನು ನೋಡಬೇಕಾಗಿದೆ.
ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ತಂಡವು ಅತಿ ದೊಡ್ಡ ರನ್ ಚೇಸ್ ಮಾಡಿರುವುದು 123 ವರ್ಷಗಳ ಹಿಂದೆ. ಅಂದರೆ 1902 ರಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 263 ರನ್‌ಗಳ ಗುರಿಯನ್ನು ಬೆನ್ನಟ್ಟಿ ಒಂದು ವಿಕೆಟ್ನಿಂದ ಪಂದ್ಯವನ್ನು ಗೆದ್ದಿತು. ಆ ಪಂದ್ಯದಲ್ಲಿ ಗಿಲ್ಬರ್ಟ್ ಜೆಸ್ಸಾಪ್ ಇಂಗ್ಲೆಂಡ್ ಪರ 102 ರನ್ ಗಳ ಬಲಿಷ್ಠ ಇನ್ನಿಂಗ್ಸ್ ಆಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಓವಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಎರಡನೇ ಅತಿ ಹೆಚ್ಚು ಚೇಸ್ ಮಾಡಿದ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿದೆ. 1963 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 255 ರನ್‌ಗಳ ಸ್ಕೋರ್ ಅನ್ನು ಬೆನ್ನಟ್ಟಿತು. ಓವಲ್‌ನಲ್ಲಿ ಇದುವರೆಗೆ ಕೇವಲ ಎರಡು ತಂಡಗಳು ಮಾತ್ರ 250+ ರನ್‌ಗಳ ಸ್ಕೋರ್ ಅನ್ನು ಬೆನ್ನಟ್ಟಲು ಸಾಧ್ಯವಾಗಿದೆ. ಇದೀಗ ಟೀಂ ಇಂಡಿಯಾ 250+ ರನ್‌ಗಳಿಗಿಂತ ಹೆಚ್ಚು ಗಳಿಸಿರುವುದರಿಂದ ತಂಡದ ಗೆಲುವಿನ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೆ, ವಿಕೆಟ್ ಕೂಡ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತಿರುವುದರಿಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ.
IND vs ENG: 18 ಶತಕಗಳ ಜೊತೆಯಾಟ; 21 ವರ್ಷಗಳ ಹಳೆಯ ದಾಖಲೆ ಉಡೀಸ್
ಪಂದ್ಯದ ಬಗ್ಗೆ ಹೇಳುವುದಾದರೆ.. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕರುಣ್ ನಾಯರ್ ಭಾರತ ಪರ ಅರ್ಧಶತಕ ಬಾರಿಸಿದರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 23 ರನ್‌ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ಯಶಸ್ವಿ ಜೈಸ್ವಾಲ್ 118 ರನ್‌ಗಳ ಇನ್ನಿಂಗ್ಸ್ ಆಡಿದರೆ, ಆಕಾಶ್ ದೀಪ್ 66 ರನ್‌ಗಳ ಕಾಣಿಕೆ ನೀಡಿದರು. ರವೀಂದ್ರ ಜಡೇಜಾ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ