ಭಾರತ ತನ್ನ ಮುಂದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ (India vs England) ತಂಡವನ್ನು ಎದುರಿಸಲಿದೆ. ವಿಶ್ವಕಪ್ನಲ್ಲಿ (ICC World Cup 2023) ಈ ಪಂದ್ಯ ಭಾರತಕ್ಕೆ ಆರನೇ ಪಂದ್ಯವಾಗಿದ್ದು, ಈ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ರೋಹಿತ್ ಸೇನೆ ಪಾಯಿಂಟ್ ಪಟ್ಟಿಯಲ್ಲಿ ನಂಬರ್ 1 ಸ್ಥಾನವನ್ನು ಮತ್ತೊಮ್ಮೆ ಅಲಂಕರಿಸುವುದರೊಂದಿಗೆ ಸೆಮಿಫೈನಲ್ಗೆ ಮತ್ತಷ್ಟು ಹತ್ತಿರವಾಗಲಿದೆ. ಇನ್ನೊಂದೆಡೆ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಸವಾಲು ಬಹುತೇಕ ಮುಗಿದಂತೆ ತೋರುತ್ತಿದೆ. ಏಕೆಂದರೆ ಆಂಗ್ಲರು ಈಗಾಗಲೇ ಆಡಿರುವ ಐದು ಪಂದ್ಯಗಳಲ್ಲಿ ಕೇವಲ 1 ರಲ್ಲಿ ಗೆದ್ದು, ಉಳಿದ 4 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡ ತನ್ನ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಭಾರತದ ಎದುರು ಭಾರಿ ಅಂತರದಿಂದ ಗೆಲ್ಲಬೇಕಿದೆ. ಆದರೆ ಸದ್ಯ ರೋಹಿತ್ ಪಡೆ ಇರುವ ಫಾರ್ಮ್ ನೋಡಿದರೆ, ಆಂಗ್ಲರಿಗೆ ಇದು ಕಷ್ಟ ಸಾಧ್ಯ.
ಒಂದೆಡೆ ಭಾರತ ತಂಡ ಡಬಲ್ ಹ್ಯಾಟ್ರಿಕ್ ಗೆಲುವಿನ ಗುರಿ ಹೊಂದಿದ್ದರೆ, ಭಾರತಕ್ಕೆ ಕಠಿಣ ಪಂದ್ಯವನ್ನು ನೀಡಲು ಇಂಗ್ಲೆಂಡ್ ಶ್ರಮಿಸಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ 20 ವರ್ಷಗಳ ಇತಿಹಾಸವನ್ನು ಬದಲಿಸುವ ಅವಕಾಶವನ್ನು ಸಹ ಹೊಂದಿದೆ. ವಾಸ್ತವವಾಗಿ 2003ರ ವಿಶ್ವಕಪ್ನಲ್ಲಿ ಕೊನೆಯ ಬಾರಿಗೆ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಆ ಬಳಿಕ ಭಾರತಕ್ಕೆ ಆಂಗ್ಲರ ವಿರುದ್ಧ ಗೆಲುವು ಸಿಕ್ಕಿಲ್ಲ. ಹೀಗಾಗಿ 20 ವರ್ಷಗಳ ನಂತರ ಭಾರತ ತಂಡಕ್ಕೆ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಅವಕಾಶ ಸಿಕ್ಕಿದೆ.
IND vs ENG, Live Streaming: ಭಾರತಕ್ಕೆ ಹಾಲಿ ಚಾಂಪಿಯನ್ನರ ಸವಾಲು; ಪಂದ್ಯ ಎಷ್ಟು ಗಂಟೆಗೆ ಆರಂಭ?
ಇನ್ನು ವಿಶ್ವಕಪ್ನಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆಯನ್ನು ನೋಡಿದರೆ ಇಲ್ಲಿಯವರೆಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ 8 ಪಂದ್ಯಗಳು ನಡೆದಿವೆ. ಈ 8 ಪಂದ್ಯಗಳಲ್ಲಿ 3 ರಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದು, 4 ಪಂದ್ಯಗಳನ್ನು ಇಂಗ್ಲೆಂಡ್ ತಂಡ ಗೆದ್ದಿದೆ. ಹಾಗಾಗಿ 1 ಪಂದ್ಯ ಟೈ ಆಗಿದೆ. ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಉಳಿದಂತೆ 2007, 2011, 2015 ಮತ್ತು 2019ರಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿತ್ತು.
ಭಾರತ ಮತ್ತು ಇಂಗ್ಲೆಂಡ್ ನಡುವೆ ಇದುವರೆಗೆ 106 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 57 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 44 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, 2 ಪಂದ್ಯಗಳು ಟೈ ಆಗಿವೆ.
ಇನ್ನು ತವರಿನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 55 ಏಕದಿನ ಪಂದ್ಯಗಳನ್ನಾಡಿದ್ದು, ಇದರಲ್ಲಿ 33 ಪಂದ್ಯಗಳನ್ನು ಗೆದ್ದಿದ್ದರೆ ಇಂಗ್ಲೆಂಡ್ 23 ಪಂದ್ಯಗಳನ್ನು ಗೆದ್ದಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವು 13 ಜುಲೈ 1974 ರಂದು ನಡೆಯಿತು, ಇದರಲ್ಲಿ ಇಂಗ್ಲೆಂಡ್ 4 ವಿಕೆಟ್ಗಳಿಂದ ಗೆದ್ದಿತು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಏಕದಿನ ಪಂದ್ಯವು 17 ಜುಲೈ 2022 ರಂದು ನಡೆದಿದ್ದು, ಇದರಲ್ಲಿ ಭಾರತ 5 ವಿಕೆಟ್ಗಳಿಂದ ಗೆದ್ದಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ