IND vs ENG: ಮ್ಯಾಂಚೆಸ್ಟರ್ ಟೆಸ್ಟ್ ಆಡ್ತಾರಾ ಜಸ್ಪ್ರೀತ್ ಬುಮ್ರಾ? ಹೊರಬಿತ್ತು ಖಚಿತ ಮಾಹಿತಿ

India vs England 4th test: ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡಲಿದ್ದಾರೆ ಎಂದು ದೃಢಪಟ್ಟಿದೆ. ಈ ಪಂದ್ಯ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಸರಣಿಯಲ್ಲಿ ಜೀವಂತವಾಗಿರಲು ಗೆಲ್ಲುವುದು ಅನಿವಾರ್ಯ. ಹೀಗಾಗಿ ಈ ಪಂದ್ಯದಲ್ಲಿ ಬುಮ್ರಾರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ.

IND vs ENG: ಮ್ಯಾಂಚೆಸ್ಟರ್ ಟೆಸ್ಟ್ ಆಡ್ತಾರಾ ಜಸ್ಪ್ರೀತ್ ಬುಮ್ರಾ? ಹೊರಬಿತ್ತು ಖಚಿತ ಮಾಹಿತಿ
Jasprit Bumrah

Updated on: Jul 17, 2025 | 5:35 PM

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಜುಲೈ 23 ರಿಂದ ಆರಂಭವಾಗಲಿದೆ. ಇಲ್ಲಿಯವರೆಗೆ ಎರಡು ತಂಡಗಳ ನಡುವೆ ಮೂರು ಟೆಸ್ಟ್ ಪಂದ್ಯಗಳು ನಡೆದಿದ್ದು, ಇಂಗ್ಲೆಂಡ್ 2-1 ಅಂತದಿಂದ ಮುನ್ನಡೆಯಲ್ಲಿದೆ. ಹೀಗಾಗಿ ಟೀಂ ಇಂಡಿಯಾ ಈ ಸರಣಿಯಲ್ಲಿ ಜೀವಂತವಾಗಿರಬೇಕಾದರೆ ಮ್ಯಾಂಚೆಸ್ಟರ್ ಟೆಸ್ಟ್ ಗೆಲ್ಲುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಬಲಿಷ್ಠ ಪಡೆಯೊಂದಿಗೆ ಗಿಲ್ ಕಣಕ್ಕಿಳಿಯಬೇಕಿದೆ. ಆದಾಗ್ಯೂ ಈ ಟೆಸ್ಟ್ ಪಂದ್ಯದಲ್ಲಿ ಬುಮ್ರಾ (Jasprit Bumrah) ಆಡುವ ಬಗ್ಗೆ ಅನುಮಾನವಿತ್ತು. ಆದರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಬುಮ್ರಾ ಮ್ಯಾಂಚೆಸ್ಟರ್ ಟೆಸ್ಟ್‌ ಆಡುವುದು ಖಚಿತವಾಗಿದೆ.

ಮ್ಯಾಂಚೆಸ್ಟರ್ ಟೆಸ್ಟ್ ಆಡಲಿದ್ದಾರೆ ಬುಮ್ರಾ

ರೆವ್‌ಸ್ಪೋರ್ಟ್ಸ್ ಪ್ರಕಾರ, ಜಸ್ಪ್ರೀತ್ ಬುಮ್ರಾ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಆಡಲಿದ್ದಾರೆ. ಈ ಟೆಸ್ಟ್ ಆರಂಭಕ್ಕೆ ಇನ್ನು ವಾರಕ್ಕೂ ಅಧಿಕ ಸಮಯವಿರುವ ಕಾರಣ ಕೆಲಸದ ಹೊರೆ ನಿರ್ವಾಹಣೆಗೆ ಇಷ್ಟು ಸಮಯ ಸಾಕು ಎಂಬ ನಿರ್ಧಾರಕ್ಕೆ ಆಡಲಿತ ಮಂಡಳಿ ಬಂದಂತಿದೆ. ಹೀಗಾಗಿಯೇ ಬುಮ್ರಾರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಬುಮ್ರಾ ಈ ಟೆಸ್ಟ್ ಪಂದ್ಯಕ್ಕೆ ಲಭ್ಯರಿರುವುದು ಬೌಲಿಂಗ್ ವಿಭಾಗಕ್ಕೆ ಆನೆ ಬಲ ತಂದಿದೆ. ಏಕೆಂದರೆ ಈ ಸರಣಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿ ಬುಮ್ರಾ ಇದುವರೆಗೆ 12 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದರಲ್ಲಿ 2 ಇನ್ನಿಂಗ್ಸ್​ಗಳಲ್ಲಿ 2 ಬಾರಿ ಯದು ವಿಕೆಟ್​ಗಳ ಗೊಂಚಲು ಕೂಡ ಸೇರಿದೆ.

ವಾಸ್ತವವಾಗಿ ಈ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಬುಮ್ರಾ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ ಎಂದು ದೃಢಪಟ್ಟಿತ್ತು. ಅದರಂತೆ ಮೊದಲ ಟೆಸ್ಟ್ ಆಡಿದ್ದ ಬುಮ್ರಾ, ಎರಡನೇ ಟೆಸ್ಟ್​ನಿಂದ ಹೊರಗುಳಿದಿದ್ದರು. ಆ ಬಳಿಕ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಬುಮ್ರಾ, ಈ ಮೊದಲು ನಿಗದಿಯಾದಂತೆ ನಾಲ್ಕನೇ ಟೆಸ್ಟ್​ನಿಂದ ಹೊರಗುಳಿಯಬೇಕಿತ್ತು. ಆದರೆ ಪಂದ್ಯದ ಮಹತ್ವವನ್ನು ಅರಿತು ಅವರನ್ನು ಆಡಿಸಲು ತೀರ್ಮಾನಿಸಲಾಗಿದೆ. ಈ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಬುಮ್ರಾ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಎರಡು ಟೆಸ್ಟ್‌ಗಳಲ್ಲಿ 21 ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿರುವ ಸಿರಾಜ್ ಮೂರು ಟೆಸ್ಟ್ ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ.

IND vs ENG: ಸೆನಾ ದೇಶಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಏಷ್ಯನ್ ಬೌಲರ್ ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ ಅಂಕಿಅಂಶ

ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್‌ನಲ್ಲಿ ಇದುವರೆಗೆ 11 ಪಂದ್ಯಗಳಲ್ಲಿ 24.97 ಸರಾಸರಿಯಲ್ಲಿ 49 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು ನಾಲ್ಕು ಬಾರಿ ಐದು ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಈಗ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ, ಬುಮ್ರಾ ಮಾರಕವಾಗಿ ಬೌಲಿಂಗ್ ಮಾಡುವ ಮೂಲಕ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ