AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಕರುಣ್​ರನ್ನು ತಂಡದಿಂದ ತೆಗೆಯಬಾರದು ಎಂದ ಅನಿಲ್ ಕುಂಬ್ಳೆ; ನೀಡಿದ ಕಾರಣವೇನು?

India vs England 4th Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಕರುಣ್ ನಾಯರ್ ಅವರನ್ನು ಟೀಂ ಇಂಡಿಯಾದಿಂದ ಹೊರಗಿಡಬೇಕೆಂಬ ಚರ್ಚೆ ನಡೆಯುತ್ತಿದ್ದರೂ, ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಕರುಣ್ ನಾಯರ್ ಅವರಿಗೆ ಅವಕಾಶ ನೀಡಬೇಕೆಂದು ಸಲಹೆ ನೀಡಿದ್ದಾರೆ. ಕರುಣ್ ನಾಯರ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು ಅವರಿಗೆ ಮತ್ತೊಂದು ಅವಕಾಶ ನೀಡುವುದು ಸೂಕ್ತ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ

IND vs ENG: ಕರುಣ್​ರನ್ನು ತಂಡದಿಂದ ತೆಗೆಯಬಾರದು ಎಂದ ಅನಿಲ್ ಕುಂಬ್ಳೆ; ನೀಡಿದ ಕಾರಣವೇನು?
Karun Nair
ಪೃಥ್ವಿಶಂಕರ
|

Updated on:Jul 17, 2025 | 4:46 PM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಜುಲೈ 23 ರಂದು ಪ್ರಾರಂಭವಾಗುವ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಕಾರಣವೂ ಇದ್ದು, ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗಳಾಗಬೇಕು ಎಂಬುದು ಕ್ರಿಕೆಟ್ ಪಂಡಿತರ ವಾದ. ಅದರಲ್ಲೂ ಕನ್ನಡಿಗ ಕರುಣ್ ನಾಯರ್ (Karun Nair) ಅವರನ್ನು ಹೊರಗಿಡಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಆದರೆ ಕರುಣ್ ನಾಯರ್ ಬಗ್ಗೆ ಬೇರೆಯದ್ದೇ ಅಭಿಪ್ರಾಯ ಹಂಚಿಕೊಂಡಿರುವ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ (Anil Kumble), ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ಕರುಣ್​ ನಾಯರ್​ ಅವರನ್ನು ತಂಡದಿಂದ ಹೊರಗಿಡುವ ಕೆಲಸವನ್ನು ಮಾಡಬಾರದು ಎಂದಿದ್ದಾರೆ.

ಕರುಣ್​ಗೆ ಅವಕಾಶ ನೀಡಬೇಕು

ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಅನಿಲ್ ಕುಂಬ್ಳೆ, ‘ಮ್ಯಾಂಚೆಸ್ಟರ್ ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಹೆಚ್ಚು ಬದಲಾವಣೆ ಮಾಡಬಾರದು. ಆಡಿರುವ 3 ಪಂದ್ಯಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿರುವ ಕಾರಣ ಹೆಚ್ಚಿನ ಬದಲಾವಣೆಯ ಅವಶ್ಯಕತೆ ಇಲ್ಲ ಎಂದು ನನಗನಿಸುತ್ತದೆ. ಹೌದು, ಲಾರ್ಡ್ಸ್‌ನಲ್ಲಿ ಟೀಂ ಇಂಡಿಯಾ 22 ರನ್‌ಗಳಿಂದ ಸೋತರಬಹುದು, ಆದರೆ ಆ ಪಂದ್ಯದಲ್ಲಿ ತಂಡದ ಪ್ರದರ್ಶನ ಚೆನ್ನಾಗಿತ್ತು. ಆದರೆ ರಿಷಭ್ ಪಂತ್ ಅವರ ಗಾಯ ಹೇಗಿದೆ ಎಂದು ನಮಗೆ ಇನ್ನೂ ತಿಳಿದಿಲ್ಲ. ಹೀಗಾಗಿ ಅವರು ಆಡುತ್ತಾರೋ ಇಲ್ಲವೋ ಎಂದು ಗೊತ್ತಿಲ್ಲ ಎಂದಿದ್ದಾರೆ.

ಇನ್ನು ಆಡಿರುವ ಮೂರು ಪಂದ್ಯಗಳಲ್ಲಿ ಉತ್ತಮ ಆರಂಭದ ಹೊರತಾಗಿಯೂ ವಿಕೆಟ್ ಕೈಚೆಲ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿರುವ ಕರುಣ್ ನಾಯರ್ ಬಗ್ಗೆಯೂ ಮಾತನಾಡಿರುವ ಕುಂಬ್ಳೆ, ‘ಕರುಣ್ ನಾಯರ್ ನಾಲ್ಕನೇ ಟೆಸ್ಟ್​​ ಪಂದ್ಯದಲ್ಲಿ ಆಡಲಿದ್ದಾರೆ. ಅವರು ಲಾರ್ಡ್ಸ್‌ ಟೆಸ್ಟ್​ನ ಮೊದಲ ಇನ್ನಿಂಗ್ಸ್‌ನಲ್ಲಿ ರನ್ ಗಳಿಸಿದರು. ರಾಹುಲ್​ ಜೊತೆಗೆ ಉತ್ತಮ ಜೊತೆಯಾಟವನ್ನು ಕಟ್ಟಿದರು. ಇದು ತಂಡಕ್ಕೆ ಉಪಯುಕ್ತವಾಗಿತ್ತು. ಆದರೆ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಖಂಡಿತವಾಗಿಯೂ ತಪ್ಪು ಮಾಡಿದರು. ಅದನ್ನು ಹೊರತುಪಡಿಸಿದರೆ, ಸರಣಿಯಲ್ಲಿ ಕರುಣ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಅವಕಾಶ ಕೊಡಬೇಕು ಎಂದಿದ್ದಾರೆ.

ಕರುಣ್ ನಾಯರ್ ಪ್ರದರ್ಶನ ಹೇಗಿದೆ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ. ತಂಡದ ಟಾಪ್ 6 ಬ್ಯಾಟ್ಸ್‌ಮನ್‌ಗಳಲ್ಲಿ ಅರ್ಧಶತಕ ಬಾರಿಸದ ಏಕೈಕ ಆಟಗಾರನೆಂದರೆ ಅದು ಕರುಣ್ ನಾಯರ್. ಸರಣಿಯಲ್ಲಿ ಇದುವರೆಗೆ 3 ಪಂದ್ಯಗಳನ್ನಾಡಿರುವ ಕರುಣ್ 21.83 ಸರಾಸರಿಯಲ್ಲಿ 131 ರನ್ ಗಳಿಸಿದ್ದಾರೆ. ಮೇಲೆ ಹೇಳಿದಂತೆ ಕರುಣ್ ನಾಯರ್ ಸೆಟ್ ಆದ ನಂತರ ತಮ್ಮ ವಿಕೆಟ್ ಅನ್ನು ಕಳೆದುಕೊಳ್ಳುತ್ತಿರುವುದು ತಂಡವನ್ನು ಸಂಕಷ್ಟಕ್ಕೀಡುಮಾಡಿದೆ.

Maharaja Trophy T20 2025: ಮೈಸೂರು ತಂಡದಿಂದ ದ್ರಾವಿಡ್ ಪುತ್ರ ರಿಲೀಸ್; ಕರುಣ್ ಸೇರಿ ನಾಲ್ವರು ರಿಟೇನ್

ಕರುಣ್ ನಾಯರ್ ಟೆಸ್ಟ್ ವೃತ್ತಿಜೀವನ

ಕರುಣ್ ನಾಯರ್ ಇದುವರೆಗೆ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 42 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 505 ರನ್ ಗಳಿಸಿದ್ದಾರೆ. 2018 ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಅವರು 303 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಆದರೆ ಆ ಬಳಿಕ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಇದೀಗ 8 ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಕರುಣ್​ಗೆ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಿಲ್ಲ. ಒಂದು ವೇಳೆ ಕರುಣ್ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಆಡಿದರೆ, ಅವರು ದೊಡ್ಡ ಸ್ಕೋರ್ ಕಲೆಹಾಕಲೇಬೇಕಿದೆ. ಇಲ್ಲದಿದ್ದರೆ, ಅವರಿಗೆ ಮತ್ತೊಂದು ಅವಕಾಶ ಸಿಗುವುದು ಅನುಮಾನದ ಮಾತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Thu, 17 July 25