ಷರತ್ತನ್ನು ಒಪ್ಪಿಕೊಳ್ಳಿ ಇಲ್ಲದಿದ್ದರೆ ಸರಣಿ ರದ್ದಾಗುತ್ತದೆ… ವೆಸ್ಟ್ ಇಂಡೀಸ್‌ಗೆ ಪಾಕಿಸ್ತಾನ್ ಬೆದರಿಕೆ
ವೆಸ್ಟ್ ಇಂಡೀಸ್ ತಂಡವು ಇತ್ತೀಚಿನ ದಿನಗಳಲ್ಲಿ ಯಾವುದೇ ಏಕದಿನ ಪಂದ್ಯಗಳನ್ನು ಆಡಿಲ್ಲ. ಅದರಲ್ಲೂ, 2023ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದ ಕಾರಣ ವಿಂಡೀಸ್ ಪಡೆ ಇದೀಗ 50 ಓವರ್‌ಗಳ ಪಂದ್ಯಗಳತ್ತ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಪಾಕಿಸ್ತಾನ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಟಿ20 ಪಂದ್ಯಗಳನ್ನು ಆಡಲು ಬಯಸುತ್ತಿದೆ. ಹೀಗಾಗಿಯೇ ಇದೀಗ ಏಕದಿನ ಸರಣಿಯನ್ನು ರದ್ದಗೊಳಿಸುವಂತೆ ಪಿಸಿಬಿ ಆಗ್ರಹಿಸಿದೆ.

ಪಾಕಿಸ್ತಾನ್-ವೆಸ್ಟ್ ಇಂಡೀಸ್ ನಡುವಣ ಸರಣಿಯು ಆಗಸ್ಟ್ 1 ರಿಂದ ಶುರುವಾಗಲಿದೆ. ಕೆರಿಬಿಯನ್ ದ್ವೀಪದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಉಭಯ ತಂಡಗಳು ಟಿ20 ಹಾಗೂ ಏಕದಿನ ಪಂದ್ಯಗಳನ್ನಾಡಬೇಕಿದೆ. ಆದರೆ ಈ ಮಧ್ಯೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಏಕದಿನ ಸರಣಿಯನ್ನು ಕೈ ಬಿಡುವಂತೆ ಆಗ್ರಹಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ್ ಕೇವಲ ಟಿ20 ಸರಣಿಯನ್ನು ಮಾತ್ರ ಆಡಲು ಬಯಸಿದ್ದು, ಹೀಗಾಗಿ ಏಕದಿನ ಸರಣಿಯನ್ನು ಕೈ ಬಿಡಲು ಈಗಾಗಲೇ ಪಿಸಿಬಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ಗೆ ತಿಳಿಸಿದೆ. ಇದಾಗ್ಯೂ ವಿಂಡೀಸ್ ಕ್ರಿಕೆಟ್ ಮಂಡಳಿಯಿಂದ ಸೂಕ್ತ ಉತ್ತರ ದೊರೆತಿಲ್ಲ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಸರಣಿಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದೆ.
ಪಾಕಿಸ್ತಾನ್ ತಂಡವು ಆಗಸ್ಟ್ 1 ರಿಂದ 12 ರವರೆಗೆ ಅಮೆರಿಕ ಮತ್ತು ಕೆರಿಬಿಯನ್ ದ್ವೀಪಗಳಿಗೆ ಪ್ರವಾಸ ಮಾಡಲಿದೆ. ಈ ಸಮಯದಲ್ಲಿ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಬೇಕಿದೆ, ಆದರೆ ಈಗ ಪಾಕಿಸ್ತಾನವು ಟಿ20 ಸರಣಿ ಮಾತ್ರ ಆಡಲು ತಯಾರಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಏಕದಿನ ಪಂದ್ಯಗಳನ್ನು ಆಡಲು ನಿರಾಕರಿಸಿದೆ.
ಒಂದು ವೇಳೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಏಕದಿನ ಸರಣಿಯನ್ನು ಆಡಬೇಕೆಂದು ಪಟ್ಟು ಹಿಡಿಯುವುದಾದರೆ, ಇಡೀ ಸರಣಿಯನ್ನು ರದ್ದುಗೊಳಿಸುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ ಎಂದು ಕ್ರಿಕ್ಬಝ್ ವರದಿ ಮಾಡಿದೆ.
6 ಪಂದ್ಯಗಳಿಗೆ ರೆಡಿ:
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 6 ಪಂದ್ಯಗಳ ಸರಣಿ ಆಯೋಜಿಸಲೇಬೇಕು ಎಂದಿದ್ದರೆ, 6 ಟಿ20 ಪಂದ್ಯಗಳನ್ನಾಡಲು ಪಾಕಿಸ್ತಾನ್ ತಂಡ ರೆಡಿ ಎಂದು ಪಿಸಿಬಿ ತಿಳಿಸಿದೆ. ಇದರ ಹೊರತಾಗಿ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ. ಬದಲಾಗಿ ಈಗಿರುವ ವೇಳಾಪಟ್ಟಿಯಂತೆ 3 ಏಕದಿನ ಪಂದ್ಯಗಳ ಬದಲಿಗೆ 3 ಟಿ20 ಪಂದ್ಯಗಳನ್ನು ಹೆಚ್ಚುವರಿಯಾಗಿ ನಡೆಸುವಂತೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಗ್ರಹಿಸಿದೆ.
ಇದಾಗ್ಯೂ ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಈ ಬಗ್ಗೆ ಚರ್ಚೆ ನಡೆಸಿದ್ದು, ಪ್ರಸ್ತುತ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಯೋಜಿಸಲಿದ್ದೇವೆ ಎಂದು CWI ಸಿಇಒ ಕ್ರಿಸ್ ಡೆಹ್ರಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಬರೋಬ್ಬರಿ 1202 ದಿನಗಳು… ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ವಿಶ್ವ ದಾಖಲೆ
ಆದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತನ್ನ ಪಟ್ಟು ಸಡಿಲಸದಿದ್ದರೆ, ಸರಣಿಯನ್ನು ರದ್ದುಗೊಳಿಸುವ ಬೆದರಿಕೆಯನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಿಟ್ಟಿದೆ. ಹೀಗಾಗಿ ಪಾಕಿಸ್ತಾನ್-ವೆಸ್ಟ್ ಇಂಡೀಸ್ ನಡುವಣ ಸರಣಿ ನಡೆಯಲಿದೆಯಾ ಎಂಬುದೇ ಈಗ ಕುತೂಹಲ.
ಪಾಕಿಸ್ತಾನ್-ವೆಸ್ಟ್ ಇಂಡೀಸ್ ವೇಳಾಪಟ್ಟಿ:
- ಮೊದಲ ಟಿ20 ಪಂದ್ಯ: ಆಗಸ್ಟ್ 1 (ಲಾಡರ್‌ಹಿಲ್)
- ಎರಡನೇ ಟಿ20 ಪಂದ್ಯ: ಆಗಸ್ಟ್ 3 (ಲಾಡರ್‌ಹಿಲ್)
- ಮೂರನೇ ಟಿ20 ಪಂದ್ಯ: ಆಗಸ್ಟ್ 4 (ಲಾಡರ್‌ಹಿಲ್)
- ಮೊದಲ ಏಕದಿನ ಪಂದ್ಯ: ಆಗಸ್ಟ್ 8 (ತುರುಬಾ)
- ಎರಡನೇ ಏಕದಿನ ಪಂದ್ಯ: ಆಗಸ್ಟ್ 10 (ತುರುಬಾ)
- ಮೂರನೇ ಏಕದಿನ ಪಂದ್ಯ: ಆಗಸ್ಟ್ 12 (ತುರುಬಾ)
