ಬೆಂಗಳೂರು ಕಾಲ್ತುಳಿತಕ್ಕೆ RCB ನೇರ ಹೊಣೆ: ಕೊಹ್ಲಿ ವಿಡಿಯೋ ಬಗ್ಗೆಯೂ ತನಿಖಾ ವರದಿಯಲ್ಲಿ ಉಲ್ಲೇಖ
ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy stampede) ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಗೆ ತನ್ನ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದು, ಪೂರ್ವ ಸಿದ್ಧತೆ ಇಲ್ಲದೇ ಕಾರ್ಯಕ್ರಮ ಆಯೋಜನೆ ಮಾಡಿರುವುದೇ ದುರ್ಘಟನೆಗೆ ಕಾರಣ ಎಂದಿದೆ. ವಿರಾಟ್ ಕೊಹ್ಲಿ ವಿಡಿಯೋ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾದ್ರೆ, ವರದಿಯಲ್ಲಿ ಏನೆಲ್ಲಾ ಇದೆ ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ಜುಲೈ 17): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಚಾಂಪಿಯನ್ ಆದ ಖುಷಿಯಲ್ಲಿ ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stampede) ಆಯೋಜಿಸಲಾಗಿದ್ದ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿದ್ದು, ದುರಂತದಲ್ಲಿ 11 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಗೆ ತನ್ನ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದೆ. ವರದಿಯನ್ನು ಬಹಿರಂಗಪಡಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಅದರಂತೆ ಇದೀಗ ತನಿಖಾ ವರದಿ ಬಹಿರಂಗಪಡಿಸಲಾಗಿದ್ದು, ಪೂರ್ವ ಸಿದ್ಧತೆ ಇಲ್ಲದೇ ಕಾರ್ಯಕ್ರಮ ಆಯೋಜನೆ ಮಾಡಿರುವುದೇ ದುರ್ಘಟನೆಗೆ ಕಾರಣ ಎಂದಿದೆ. ಅಲ್ಲದೇ ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ (Virat Kohli) ಮಾತನಾಡಿದ್ದ ವಿಡಿಯೋವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದು ಸೇರಿದಂತೆ ಅನೇಕ ಲೋಪದೋಷಗಳನ್ನು ವರದಿಯಲ್ಲಿ ಎತ್ತಿ ತೋರಿಸಿದೆ. ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರೂ ಸಹ, ಅಗಾಧ ಜನಸಂದಣಿ ಸೇರಿತ್ತು ಎಂದು ಸರ್ಕಾರ ಹೇಳಿದೆ.
ಕಾರ್ಯಕ್ರಮದ ಆಯೋಜಕ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ (DNA Entertainment Networks) ಜೂನ್ 3 ರಂದು, ಸೆಲೆಬ್ರೇಷನ್ ಇಟ್ಟುಕೊಳ್ಳುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಆದರೆ ಪೊಲೀಸ್ ಇಲಾಖೆಯಿಂದ ಔಪಚಾರಿಕವಾಗಿ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸ್ಪಷ್ಟವಾಗಿ ನಿರಾಕರಿಸಿದರು ಎಂದಿದೆ. ಹೀಗಿದ್ದೂ ಆರ್‌ಸಿಬಿ ಪ್ರಚಾರ ಚಟುವಟಿಕೆಗಳು ಮುಂದುವರಿದವು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಪ್ರಕರಣ: ಹೈಕೋರ್ಟ್ ಮಹತ್ವದ ಸೂಚನೆ, ಪದಾಧಿಕಾರಿಗಳಿಗೆ ಮಧ್ಯಂತರ ರಕ್ಷಣೆ
ಜೂನ್ 4 ರಂದು, ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿತು. ಅಂತಹ ಒಂದು ಪೋಸ್ಟ್‌ನಲ್ಲಿ ಕೊಹ್ಲಿ ಅಭಿಮಾನಿಗಳನ್ನು ಆಹ್ವಾನಿಸುತ್ತಿರೋದು ಕೂಡ ಸೇರಿದೆ. ಜೂನ್ 4 ರಂದು ಬೆಳಗ್ಗೆ 8.55ರ ಸುಮಾರಿಗೆ ಆರ್‌ಸಿಬಿ, ವಿರಾಟ್ ಕೊಹ್ಲಿ ಅವರ ವಿಡಿಯೋ ಕ್ಲಿಪ್ ಅನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಆರ್‌ಸಿಬಿ ಅಧಿಕೃತ ಟ್ವಿಟರ್ ಹ್ಯಾಂಡಲ್ @Rcbtweets ನಲ್ಲಿ ಕೊಹ್ಲಿ ಮಾತನಾಡಿದ್ದ ವಿಡಿಯೋ ಶೇರ್ ಮಾಡಿದೆ. ಅದರಲ್ಲಿ ಆರ್‌ಸಿಬಿ, ಅಭಿಮಾನಿಗಳೊಂದಿಗೆ ಬೆಂಗಳೂರಲ್ಲಿ ಸೆಲೆಬ್ರೇಷನ್ ಮಾಡಲು ಉದ್ದೇಶಿಸಿದೆ ಎಂದು ಕೊಹ್ಲಿ ಹೇಳಿದ್ದರು.
ಅದೇ ದಿನ ಮಧ್ಯಾಹ್ನ 3:14ಕ್ಕೆ ಮತ್ತೊಂದು ಪೋಸ್ಟ್ ಮಾಡಿತ್ತು. ಸಂಜೆ 5:00 ರಿಂದ 6:00 ರವರೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಘೋಷಿಸಿತ್ತು. ಈ ಮೆರವಣಿಗೆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಲೆಬ್ರೇಷನ್ ನಡೆಯಲಿವೆ ಎಂದು ಹೇಳಿದೆ. ಇದೇ ಪೋಸ್ಟ್‌ನಲ್ಲಿ shop.royalchallengers.com ನಲ್ಲಿ ಉಚಿತ ಪಾಸ್‌ಗಳು (ಸೀಮಿತ ಪ್ರವೇಶ) ಲಭ್ಯವಿದೆ ಎಂದು ಉಲ್ಲೇಖಿಸಿದೆ. ಅಲ್ಲಿಯವರೆಗೆ ಪಾಸ್‌ಗಳ ವಿತರಣೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅಂದರೆ ಆರ್‌ಸಿಬಿ ಹಿಂದಿನ ಪೋಸ್ಟ್‌ಗಳ ಪ್ರಕಾರ ಸೆಲೆಬ್ರೇಷನ್ ಈವೆಂಟ್ ಎಲ್ಲರಿಗೂ ಮುಕ್ತವಾಗಿದೆ ಎಂದು ಸೂಚಿಸುತ್ತದೆ. ಹೀಗಾಗಿ ಮೈದಾನದ ಸುತ್ತ ಮೂರು ಲಕ್ಷಕ್ಕೂ ಹೆಚ್ಚು ಜನಸಾಗರ ಹರಿದು ಬರವಂತೆ ಆರ್‌ಸಿಬಿ ಮಾಡಿದೆ ಎಂದು ಸರ್ಕಾರ ಆರೋಪಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Thu, 17 July 25








