ಬೆಂಗಳೂರು ಕಾಲ್ತುಳಿತ ಪ್ರಕರಣ: ಹೈಕೋರ್ಟ್ ಮಹತ್ವದ ಸೂಚನೆ, ಪದಾಧಿಕಾರಿಗಳಿಗೆ ಮಧ್ಯಂತರ ರಕ್ಷಣೆ
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿರುವ ಪ್ರಕರಣಕ್ಕೆ ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣ ರದ್ದು ಕೋರಿ ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಮತ್ತೆ ತಾತ್ಕಾಲಿಕ ರಿಲೀಫ್ ನೀಡಿದೆ.

ಬೆಂಗಳೂರು, (ಜುಲೈ 08): ಆರ್ ಸಿಬಿ ವಿಜಯೋತ್ಸವ (RCB Victory) ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ (Bengaluru stampede Case) ಕೆಎಸ್ ಸಿಎ, ಆರ್ ಸಿಬಿ, ಡಿಎನ್ ಎ ಪದಾಧಿಕಾರಿಗಳ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂಬ ಹೈಕೋರ್ಟ್ ಆದೇಶ ವಿಸ್ತರಣೆಯಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದು ಕೋರಿ ಆರ್ ಸಿಬಿ, ಕೆಎಸ್ ಸಿಎ, ಡಿಎನ್ ಎ ಅರ್ಜಿ ಸಲ್ಲಿಸಿದ್ದು, ಆಗಸ್ಟ್ 5ರ ವರೆಗೆ ಆರೋಪಪಟ್ಟಿ ಸಲ್ಲಿಸದಂತೆ ಹೈಕೋರ್ಟ್ ಸೂಚನೆ ನೀಡಿದೆ. ಈ ಮೂಲಕ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿದ್ದ ಆದೇಶ ವಿಸ್ತರಣೆಯಾಗಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಲಾಗಿದೆ. ಇದರೊಂದಿಗೆ ಪದಾಧಿಕಾರಿಗಳಿಗೆ ಮಧ್ಯಂತರ ರಕ್ಷಣೆ ಸಿಕ್ಕಂತಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ(ಕೆಎಸ್ಸಿಎ), ರಾಯಲ್ ಚಾಲಂಜರ್ಸ್ ಬೆಂಗಳೂರು ಫ್ರಾಂಚೈಸಿ(ಆರ್ಸಿಬಿ) ಹಾಗೂ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ ಪದಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅಲ್ಲದೇ ಕೆಲವರು ಬಂಧಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಅಮೈಕಸ್ ಕ್ಯೂರಿ ನೇಮಿಸಿದ ಕೋರ್ಟ್, ಹೀಗಂದ್ರೇನು?
ಈ ಪ್ರಕರಣ ರದ್ದುಕೋರಿ ಕೆಎಸ್ಸಿಎ, ಆರ್ ಸಿಬಿ ಹಾಗೂ ಡಿಎನ್ ಎ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರನೆ ನಡೆಸಿದ್ದ ಹೈಕೋರ್ಟ್, ಬಲವಂತದ ಕ್ರಮ ತೆಗೆದುಕೊಳ್ಳದಂತೆ ಆದೇಶ ಹೊರಡಿಸಿತ್ತು. ಇದೀಗ ಆಗಸ್ಟ್ 5ರ ವರೆಗೆ ಚಾರ್ಜ್ ಶೀಟ್ ಸಲ್ಲಿಸದಂತೆ ಕೋರ್ಟ್ ಮಹತ್ವ ಸೂಚನೆ ನೀಡಿದೆ. ಹಾಗೇ ಬಲವಂತದ ಕ್ರಮ ಬೇಡ ಎನ್ನುವ ಹೈಕೋರ್ಟ್ ನ ಆದೇಶ ವಿಸ್ತರಣೆಯಾಗಿದೆ.
ಪ್ರಕರಣದ ಹಿನ್ನೆಲೆ
18 ವರ್ಷಗಳ ಬಳಿಕ ಐಪಿಎಲ್ನಲ್ಲಿ ಆರ್ಸಿಬಿ ಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ವಿಜಯೋತ್ಸವ ಆಚರಣೆಗೆ ಫ್ರಾಂಚೈಸಿ ತೀರ್ಮಾನ ಕೈಗೊಂಡಿತ್ತು. ಹಾಗೆಯೇ ಸರ್ಕಾರ ಕೂಡ ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಿ, ಆರ್ಸಿಬಿ ಆಟಗಾರರನ್ನು ಅಭಿನಂದಿಸಿತ್ತು. ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಜಯೋತ್ಸವಕ್ಕೆ ಲಕ್ಷಾಂತರ ಜನ ಆಗಮಿಸಿದ್ದರು. ಇದರಿಂದಾಗಿ ತಳ್ಳಾಟ ಉಂಟಾಗಿ ಕ್ರೀಡಾಂಗಣದ 6 ಮತ್ತು 7ನೇ ಗೇಟ್ನಲ್ಲಿ ಉಂಟಾದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.
Published On - 3:41 pm, Tue, 8 July 25



