ವೈಜಾಗ್‌ನ ಡಾ. ವೈಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (India vs England) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡ ಬಳಿಕ ಶ್ರೇಯಸ್ ಅಯ್ಯರ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 151 ಎಸೆತಗಳಲ್ಲಿ ಜೈಸ್ವಾಲ್ ಬ್ಯಾಟ್ನಿಂದ ಶತಕ ಮೂಡಿಬಂತು. ಇದು ಅವರ ಎರಡನೇ ಅಂತರರಾಷ್ಟ್ರೀಯ ಟೆಸ್ಟ್ ಶತಕವಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಓಪನರ್ಗಳಾಗಿ ಕಣಕ್ಕಿಳಿದ ಜೈಸ್ವಾಲ್ ಹಾಗೂ ರೋಹಿತ್ ಮೊದಲ ವಿಕೆಟ್ಗೆ 40 ರನ್ಗಳ ಜೊತೆಯಾಟ ಆಡಿದರು. ಚೆನ್ನಾಗಿಯೆ ಆಡುತ್ತಿದ್ದ ಹಿಟ್ಮ್ಯಾನ್ 14 ರನ್ ಗಳಿಸಿದ್ದಾಗ ಶೋಯೆಜ್ ಬಶಿರ್ ಬೌಲಿಂಗ್ನಲ್ಲಿ ಒಲ್ಲಿ ಪೋಪ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಶುಭ್ಮನ್ ಗಿಲ್ ಜೊತೆಯಾದ ಜೈಸ್ವಾಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು.
ಬಲಿಷ್ಠ ಭಾರತಕ್ಕೆ ನೇಪಾಳ ಎದುರಾಳಿ; ಪಂದ್ಯ ಯಾವ ಚಾನೆಲ್ನಲ್ಲಿ ಎಷ್ಟು ಗಂಟೆಗೆ ಆರಂಭ?
ಆದರೆ, ಆಡಲೇ ಬೇಕಾದ ಪಂದ್ಯದಲ್ಲಿ ಗಿಲ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಎರಡನೇ ಟೆಸ್ಟ್ನಲ್ಲಿ ಸ್ಥಾನ ಪಡೆದ ಜೇಮ್ಸ್ ಅ್ಯಂಡರ್ಸನ್ 34 ರನ್ ಗಳಿಸಿದ್ದ ಗಿಲ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಗಿಲ್-ಜೈಸ್ವಾಲ್ 49 ರನ್ಗಳ ಕಾಣಿಕೆ ನೀಡಿದರು. ಸದ್ಯ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ಶತಕದ ಜೊತೆಯಾಟದತ್ತ ಮುನ್ನುಗ್ಗುತ್ತಿದ್ದಾರೆ. ಜೈಸ್ವಾಲ್ ಬಿರುಸಿನ ಆಟಕ್ಕೆ ಅಯ್ಯರ್ ಉತ್ತಮ ಸಾಥ್ ನೀಡುತ್ತಿದ್ದಾರೆ.
ಎರಡನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಜಾಗಕ್ಕೆ ಹೊಸ ಆಟಗಾರರ ಎಂಟ್ರಿ ಆಗಿದೆ. ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ರಜತ್ ಪಟಿದಾರ್ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈ ಮೂಲಕ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದಾರೆ.
ಹಾಗೆಯೆ ಮೂರನೇ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸ್ಪಿನ್ ವಿಭಾಗವನ್ನು ಆರ್. ಅಶ್ವಿನ್ ಮುನ್ನಡೆಸಲಿದ್ದಾರೆ. ವೇಗಿಗಳಾಗಿ ಜಸ್ಪ್ರಿತ್ ಬುಮ್ರಾ ಮತ್ತು ಮುಖೇಶ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇತ್ತ ಇಂಗ್ಲೆಂಡ್ ತಂಡ ಎರಡು ಬದಲಾವಣೆ ಮಾಡಿಕೊಂಡಿದೆ. ಯುವ ಸ್ಪಿನ್ನರ್ ಶೊಯೆಬ್ ಬಶೀರ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಸ್ಪಿನ್ನರ್ ಜ್ಯಾಕ್ ಲೀಚ್ ಗಾಯಗೊಂಡಿರುವ ಕಾರಣ ಇವರ ಜಾಗದಲ್ಲಿ ಶೊಯೆಬ್ಗೆ ಸ್ಥಾನ ನೀಡಲಾಗಿದೆ.
ಉಭಯ ತಂಡಗಳು:
ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಟಿದಾರ್, ಕೆಎಸ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮುಖೇಶ್ ಕುಮಾರ್.
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಶೊಯೆಬ್ ಬಶೀರ್, ಜೇಮ್ಸ್ ಅ್ಯಂಡರ್ಸನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ